Advertisement

ಕೃಷಿ ಭೂಮಿ ಖರೀದಿ-ಭೂ ಪರಿವರ್ತನೆ ಸರಳೀಕರಣಕ್ಕೆ ನಿರ್ಧಾರ

10:45 PM Jan 25, 2020 | Lakshmi GovindaRaj |

ಬೆಂಗಳೂರು: ರಾಜ್ಯದಲ್ಲಿ ಭೂ ಖರೀದಿ ಪ್ರಕ್ರಿಯೆಯಲ್ಲಿನ ಅಡಚಣೆಗಳಿಂದ ತೊಂದರೆಯಾಗುತ್ತಿರುವ ಬಗ್ಗೆ ಉದ್ಯಮಿಗಳು ಅಳಲು ತೋಡಿಕೊಂಡ ಹಿನ್ನೆಲೆಯಲ್ಲಿ ಕೈಗಾರಿಕಾ ಸ್ಥಾಪನೆಗೆ ಕೃಷಿ ಭೂಮಿ ಖರೀದಿ ಹಾಗೂ ಕೃಷಿ ಭೂಮಿ ಪರಿವರ್ತನೆಯಲ್ಲಿನ ನಿಯಮಾವಳಿಗಳನ್ನು ಸಡಿಲಿಸಿ, ಸರಳೀಕರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು, ಗೃಹ ಕಚೇರಿ “ಕೃಷ್ಣಾ’ದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ವಿವರವಾದ ಮಾಹಿತಿ ನೀಡಿದರು.

Advertisement

* ದಾವೋಸ್‌ನಲ್ಲಿ ನಡೆದ ಡಬ್ಲೂéಇಎಫ್ ವಾರ್ಷಿಕ ಸಭೆಯಲ್ಲಿ ಭೂಮಿ ಖರೀದಿ ಸಂಬಂಧ ಅಡಚಣೆಗಳ ಬಗ್ಗೆ ಉದ್ಯಮಿಗಳು ಅಹವಾಲು ಸಲ್ಲಿಸಿದ್ದಾರೆ. ಅವರು ಪ್ರಸ್ತಾಪಿಸಿದ ವಿಚಾರದಲ್ಲಿ ಸತ್ಯವಿದೆ. ಹಾಗಾಗಿ, ಸಮಸ್ಯೆ ನಿವಾರಣೆಗೆ ಆಡಳಿತಾತ್ಮಕ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವುದರ ಜತೆಗೆ ಕಾನೂನಾತ್ಮಕ ಬದಲಾವಣೆಗಳನ್ನು ಮುಂದಿನ ಅಧಿವೇಶನದಲ್ಲಿ ತರುವ ಬಗ್ಗೆ ಭರವಸೆ ನೀಡಿದ್ದೇನೆ.

* ಕೈಗಾರಿಕೆ ಸ್ಥಾಪಿಸಲು ಭೂಮಿ ಖರೀದಿಯಲ್ಲಿನ ಅಡಚಣೆ ಕುರಿತು ಕೈಗಾರಿಕೋದ್ಯಮಿಗಳೊಂದಿಗೆ ಸಾಕಷ್ಟು ಚರ್ಚಿಸಲಾಗಿದೆ. ಭೂಮಿ ಖರೀದಿಸಿದರೂ ನಂತರ ಸ್ವಾಧೀನಪಡಿಸಿಕೊಂಡು ಮುಂದುವರಿಯಲು ವಿಳಂಬವಾಗುತ್ತಿದೆ. ಕಚೇರಿಯಿಂದ-ಕಚೇರಿಗೆ ಅಲೆಯಬೇಕಾದ ಸ್ಥಿತಿ ಇದೆ ಎಂದು ಉದ್ಯಮಿಗಳು ಅಳಲು ತೋಡಿಕೊಂಡಿದ್ದಾರೆ. ಈ ಸಂಬಂಧ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಮಾಲೋಚಿಸಿ, ತಕ್ಷಣ ಕಾಯ್ದೆಗೆ ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ.

* ಕೈಗಾರಿಕಾ ಉದ್ದೇಶಕ್ಕಾಗಿ ಜಮೀನು ಖರೀದಿಸಲು “ಕರ್ನಾಟಕ ಕೈಗಾರಿಕಾ ಅಧಿನಿಯಮ-2002ರ ಅಡಿ’ ರಚಿತವಾಗಿರುವ ರಾಜ್ಯದ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಹಾಗೂ ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನೆ ಸಮಿತಿಯಲ್ಲಿ ಅನುಮೋದನೆ ಪಡೆಯಬೇಕು. ನಂತರ, ಕಲಂ 109 (1)ರ ಅನ್ವಯ ಅನುಮತಿ ನೀಡುವ ಪ್ರಕ್ರಿಯೆಗೆ 30 ದಿನಗಳ ಕಾಲಾವಕಾಶ ನೀಡಲಾಗಿದ್ದು, 30 ದಿನದೊಳಗೆ ಇತ್ಯರ್ಥಪಡಿಸದಿದ್ದರೆ ಡೀಮ್ಡ್ ಒಪ್ಪಿಗೆ ಎಂದು ಪರಿಗಣಿಸಿ, ಅನುಮೋದನೆ ನೀಡಲು ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ.

* ಕೃಷಿ ಉದ್ದೇಶಕ್ಕೆ ಭೂಮಿ ಹೊಂದಿರುವ ಅದಿ ಭೋಗ ದಾರರು ಆ ಜಮೀನು ಅಥವಾ ಜಮೀನಿನ ಯಾವುದೇ ಭಾಗವನ್ನು ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತಿಸಲು ಇಚ್ಛಿಸಿದರೆ ಆ ವಿಧಾನವನ್ನು ಆನ್‌ಲೈನ್‌ ಮೂಲಕ ಸರಳೀಕರಿ ಸಲಾಗುತ್ತದೆ. ಕೈಗಾರಿಕಾ ಉದ್ದೇಶಕ್ಕಾಗಿ ಭೂ ಪರಿ ವರ್ತನೆ ಕೋರಿ ಸಲ್ಲಿಸಿದ ಅರ್ಜಿಗೆ ರಾಜ್ಯದ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಹಾಗೂ ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನೆ ಸಮಿತಿ ಒಪ್ಪಿಗೆ ಪಡೆದ ಬಳಿಕ 30 ದಿನದೊಳಗೆ ಅನುಮತಿ ನೀಡಬೇಕು. 30 ದಿನದಲ್ಲಿ ಭೂಪರಿವರ್ತನೆ ಇತ್ಯರ್ಥಪಡಿಸದಿದ್ದರೆ ಡೀಮ್ಸ್‌ ಪರಿವರ್ತನೆ ಎಂದು ಆದೇಶಿಸಲು ಅವಕಾಶ ಕಲ್ಪಿಸುವ ತಿದ್ದುಪಡಿ ತರಲು ನಿರ್ಧರಿಸಲಾಗಿದೆ.

Advertisement

* ರೈತರು ಸ್ವಇಚ್ಛೆಯಿಂದ ಕೈಗಾರಿಕೋದ್ಯಮಿಗಳಿಗೆ ಭೂಮಿ ನೀಡಬಹುದು. ನಾವು ಯಾವ ರೈತರನ್ನೂ ಒತ್ತಾಯಿಸುವುದಿಲ್ಲ. ಉದ್ಯಮಿಗಳು ನೇರವಾಗಿ ರೈತರನ್ನು ಸಂಪರ್ಕಿಸಿ, ಭೂಮಿ ಖರೀದಿಸುತ್ತಾರೆ. ಇದು ರೈತರು, ಉದ್ಯಮಿಗಳಿಗೆ ಬಿಟ್ಟ ವಿಚಾರ.

* ಬೆಂಗಳೂರು ಮಾತ್ರವಲ್ಲದೆ ಶಿವಮೊಗ್ಗ, ಹುಬ್ಬಳ್ಳಿ- ಧಾರವಾಡ, ಕಲಬುರಗಿ ಸೇರಿ ರಾಜ್ಯದ ಇತರೆಡೆಯೂ ಹೂಡಿಕೆ ಮಾಡುವಂತೆ ಕೋರಲಾಗಿದೆ. ಬೇರೆಡೆ ಕೈಗಾರಿಕೆ ಸ್ಥಾಪಿಸುವುದಾದರೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸುವ ಭರವಸೆ ನೀಡಲಾಗಿದೆ.

* ಕಾಯ್ದೆಯ ಸೆಕ್ಷನ್‌ 109 (1)ರ ನಿಯಮವನ್ನು ತೆಗೆ ಯುವುದಿಲ್ಲ. ಅನುಮೋದನೆ ನೀಡಿಕೆ ಅವಧಿಯನ್ನು 60 ದಿನದಿಂದ 30 ದಿನಕ್ಕಿಳಿಸಲು ನಿರ್ಧರಿಸಲಾಗಿದೆ.

* ಬೀದರ್‌ ವಿಮಾನ ನಿಲ್ದಾಣದಿಂದ ಫೆ.7ರಿಂದ ವಿಮಾನ ಹಾರಾಟ ಶುರುವಾಗಲಿದೆ. ಶಿವಮೊಗ್ಗ ವಿಮಾನ ನಿಲ್ದಾಣ ಇನ್ನು 9 ತಿಂಗಳಲ್ಲಿ ಪೂರ್ಣಗೊಳ್ಳಲಿದೆ.

* ಉದ್ಯಮಿಗಳು ವ್ಯವಹಾರ ನಡೆಸಲು ಅನುಕೂಲವಾಗುವಂತೆ ಕೈಗಾರಿಕಾ ನೀತಿಯಲ್ಲಿ ಸಮಗ್ರ ಬದಲಾವಣೆ ತರಲು ಚಿಂತಿಸಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ರಾಜ್ಯವು ಔದ್ಯೋಗಿಕ ಬೆಳವಣಿಗೆಯಲ್ಲಿ ದೇಶದಲ್ಲೇ ಅಗ್ರ ಸ್ಥಾನದಲ್ಲಿರುವಂತೆ ಮಾಡುತ್ತೇನೆ.

* ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದನೆಯಾಗುತ್ತಿದ್ದು, ಕೈಗಾರಿಕೆಗಳಿಗೆ ಶೀಘ್ರವಾಗಿ ವಿದ್ಯುತ್‌ ವ್ಯವಸ್ಥೆ ಕಲ್ಪಿಸುವ ಕೆಲಸಗಳಾಗಲಿವೆ.

* ರಾಜ್ಯದಲ್ಲಿ ಅತಿ ಹೆಚ್ಚು ಕೌಶಲ್ಯ ಹೊಂದಿರುವ ಮಾನವ ಸಂಪನ್ಮೂಲವಿದ್ದು, ಕೈಗಾರಿಕೆಗಳೊಂದಿಗೆ ಮಾನವ ಸಂಪನ್ಮೂಲವನ್ನು ಜೋಡಿಸಲು ಸರ್ಕಾರ ಕ್ರಮ ವಹಿಸಲಿದೆ. ಬೆಂಗಳೂರಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಗಳಿದ್ದು, ಇವುಗಳನ್ನು ಕೈಗಾರಿಕೆಗಳೊಂದಿಗೆ ಸಮನ್ವಯ ಮಾಡುವ ಅಂಶವನ್ನು ಕೈಗಾರಿಕಾ ನೀತಿಯಲ್ಲಿ ಅಳವಡಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next