Advertisement

ಬರಗೂರು ಲೇಖನ ಹಿಂಪಡೆಯಲು ನಿರ್ಧಾರ

08:05 AM Aug 14, 2017 | Harsha Rao |

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಬಿಸಿಎ ಪ್ರಥಮ ಸೆಮಿಸ್ಟರ್‌ ಕನ್ನಡ ಪಠ್ಯದಲ್ಲಿ ಅಳವಡಿಸಿರುವ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಲೇಖನ ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಸಂಬಂಧಿತ ಪಠ್ಯವನ್ನು ಹಿಂದಕ್ಕೆ ಪಡೆಯಲು ಮಂಗಳೂರು ವಿ.ವಿ. ಕನ್ನಡ ಪಠ್ಯಪುಸ್ತಕ ಸಂಪಾದಕ ಮಂಡಳಿ ಸಮಿತಿ ತೀರ್ಮಾನಿಸಿದೆ.

Advertisement

ಬಿಸಿಎ ಪ್ರಥಮ ಸೆಮಿಸ್ಟರ್‌ಗೆ ಅಳವಡಿಸಿರುವ “ಪದಚಿತ್ತಾರ’ ಪಠ್ಯದಲ್ಲಿ ಬರಗೂರು ರಾಮಚಂದ್ರಪ್ಪ ಅವರು ಬರೆದ “ಯುದ್ಧ: ಒಂದು ಉದ್ಯಮ’ ಲೇಖನವನ್ನು ಮಂಗಳೂರು ವಿ.ವಿ. ಪಠ್ಯಪುಸ್ತಕ ರಚನಾ ಸಮಿತಿಯು ಪಾಠವಾಗಿ ಆಯ್ಕೆ ಮಾಡಿತ್ತು. ಈ ಲೇಖನದಲ್ಲಿ ಬರಗೂರು ಅವರು, ತಮ್ಮ ಸೈನಿಕ ಗೆಳೆಯ ಯುದ್ಧರಂಗದ ಕುರಿತು ಹೇಳಿದ ಅನಿಸಿಕೆಗಳನ್ನು ಉಲ್ಲೇಖೀಸಿದ್ದರು. ಆದರೆ ಸೈನಿಕರ ಕುರಿತಾಗಿ ಪಠ್ಯದಲ್ಲಿ ಅವಮಾನಿಸಿದ ಘಟನೆ ನಡೆದಿದೆ ಎಂದು ಆರೋಪಿಸಿ ಮಾಜಿ ಸೈನಿಕರು ಹಾಗೂ ವಿವಿಧ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿ, ಪಠ್ಯವನ್ನು ಹಿಂದಕ್ಕೆ ಪಡೆಯುವಂತೆ ಸರಕಾರಕ್ಕೆ ಮನವಿ ಕೂಡ ಸಲ್ಲಿಸಿದ್ದರು.

ಈ ಸಂಬಂಧ ಶನಿವಾರ ನಡೆದ ಮಂಗಳೂರು ವಿವಿಯ ಕನ್ನಡ ಪಠ್ಯಪುಸ್ತಕ ಸಂಪಾದಕ ಮಂಡಳಿ ಸಮಿತಿ ಸಭೆಯಲ್ಲಿ “ಪದ ಚಿತ್ತಾರ’ ಪಠ್ಯದ “ಯುದ್ಧ; ಒಂದು ಉದ್ಯಮ’ ಎಂಬ ಪಾಠದ ಕುರಿತು ಮಾಜಿ ಸೈನಿಕರು ತೋರಿದ ವಿರೋಧದ ಕುರಿತು ಸಮಾಲೋಚನೆ ನಡೆಯಿತು. ಅಂತಿಮವಾಗಿ, ಈ ಪಾಠವನ್ನು ಹಿಂದೆಗೆದುಕೊಳ್ಳುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಸಂಪಾದಕ ಮಂಡಳಿ ಪರವಾಗಿ ಪ್ರೊ| ಬಿ. ಶಿವರಾಮ ಶೆಟ್ಟಿ  ಪ್ರಕಟನೆಯಲ್ಲಿ  ತಿಳಿಸಿದ್ದಾರೆ.

ಅವಮಾನಿಸುವ ಉದ್ದೇಶ ಇರಲಿಲ್ಲ : ಯುದ್ಧ ಬೇಡ ಎನ್ನುವ ಸದಾಶಯ ಪಠ್ಯದಲ್ಲಿ ಇತ್ತೇ ಹೊರತು ಸೈನಿಕರಿಗೆ ಅವಮಾನ ಮಾಡುವ ಉದ್ದೇಶ ಇರಲಿಲ್ಲ. ಜಗತ್ತಿನಲ್ಲಿ ಪ್ರಸ್ತುತ ಇರುವ ವಿದ್ಯಮಾನದ ಬಗ್ಗೆ ಪಠ್ಯದಲ್ಲಿ ಚರ್ಚಿಸಲಾಗಿತ್ತು. ಆದರೆ ಇದು ಬೇರೆ ಬೇರೆ ಅರ್ಥಗಳನ್ನು ಪಡೆದುಕೊಂಡ ಹಿನ್ನೆಲೆಯಲ್ಲಿ ಈ ಪಾಠವನ್ನು ಹಿಂದಕ್ಕೆ ಪಡೆಯುವ ನಿರ್ಧಾರಕ್ಕೆ ಬರಲಾಗಿದೆ. ಪರೀಕ್ಷೆಯಲ್ಲಿ  ಈ ಪಾಠದ ಬಗ್ಗೆ ಪ್ರಶ್ನೆಗಳು ಇರುವುದಿಲ್ಲ ಎಂದು ಪ್ರೊ| ಶಿವರಾಮ ಶೆಟ್ಟಿ  ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next