ರಾಮನಗರ: ಚನ್ನಪಟ್ಟಣ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಸಂಬಂಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕೇತಗಾನಹಳ್ಳಿಯ ತಮ್ಮ ಬಿಡದಿ ತೋಟದ ಮನೆಯಲ್ಲಿ ಮಹತ್ವದ ಸಭೆ ನಡೆಸಿದ್ದು, ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನೇ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಮುಖಂಡರು ಒತ್ತಾಯ ಮಾಡಿದ್ದಾಗಿ ಮಾಹಿತಿ ಲಭ್ಯವಾಗಿದೆ.
ಗುರುವಾರ ಸಂಜೆ 3 ತಾಸಿಗೂ ಹೆಚ್ಚುಕಾಲ ನಡೆದ ಮಹತ್ವದ ಜೆಡಿಎಸ್ ಸಭೆಯಲ್ಲಿ ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್‌ನ ಮಾಜಿ ಮತ್ತು ಹಾಲಿ ಶಾಸಕರು, ಚನ್ನಪಟ್ಟಣ ತಾಲೂಕಿನ ಪ್ರಮುಖ ಮುಖಂಡರು ಪಾಲ್ಗೊಂಡಿದ್ದು, ಚನ್ನಪಟ್ಟಣ ಕ್ಷೇತ್ರದ ಬಗ್ಗೆ ವಿಸ್ತೃತ ಚರ್ಚೆ ನಡೆಸಿದರು.
ಮೂರೂ ಕ್ಷೇತ್ರಗಳ ಪೈಕಿ ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಪ್ರಬಲವಾಗಿದೆ. ಇಲ್ಲಿಂದ ಗೆದ್ದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಈ ಕಾರಣಕ್ಕಾಗಿಚನ್ನಪಟ್ಟಣವನ್ನು ಜೆಡಿಎಸ್ ಪಕ್ಷಕ್ಕೆ ಉಳಿಸಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಿದ್ದು, ಎಂಎಲ್ಸಿ ಸಿ.ಪಿ.ಯೋಗೇಶ್ವರ್‌ಗೆ ಬಿಟ್ಟುಕೊಡುವುದಕ್ಕೆ ವಿರೋಧ ವ್ಯಕ್ತವಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಕ್ಷೇತ್ರ ಬಿಟ್ಟುಕೊಡಲು ಸಿ.ಪಿ.ಯೋಗೇಶ್ವರ್ ಸಹಮತ ವ್ಯಕ್ತಪಡಿಸಿದ್ದೇ ಆದಲ್ಲಿ ನಿಖಿಲ್ ಅವರನ್ನು ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಸುವುದು. ಒಂದು ವೇಳೆ ಯೋಗೇಶ್ವರ್ ಒಪ್ಪದಿದ್ದರೆ ಎನ್‌ಡಿಎ ಅಭ್ಯರ್ಥಿಯಾಗಿ ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ. ಜಯಮುತ್ತು ಅಥವಾ ಉದ್ಯಮಿ ಪ್ರಸನ್ನ ಗೌಡ ಅವರನ್ನು ಕಣಕ್ಕಿಳಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಹೇಳಲಾಗಿದೆ.
ಶನಿವಾರ ಅಭ್ಯರ್ಥಿ ಆಯ್ಕೆ ಅಂತಿಮ
3 ಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿದಂತೆ ಚರ್ಚಿಸಲು ಸಭೆ ಕರೆದಿದ್ದು. ಪಕ್ಷದ ಪ್ರಮುಖ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಚನ್ನಪಟ್ಟಣ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ಜತೆ ಚರ್ಚಿಸಿ ಶನಿವಾರ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗುವುದು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ದಿಲ್ಲಿ ಬಿಜೆಪಿ ನಾಯಕರು ಚನ್ನಪಟ್ಟಣ ಅಭ್ಯರ್ಥಿ ಆಯ್ಕೆಯನ್ನು ನನಗೆ ಬಿಟ್ಟಿದ್ದಾರೆ. ಈಗಾಗಲೇ ಆರ್.ಅಶೋಕ್ ಮತ್ತು ವಿಜಯೇಂದ್ರ ಜತೆ ಮಾತುಕತೆ ನಡೆಸಿದ್ದೇನೆ. ಬಿಜೆಪಿ ನಾಯಕರ ಜತೆ ಚರ್ಚಿಸಿ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗುವುದು.