ಮಡಿಕೇರಿ: ಗೋಣಿಕೊಪ್ಪ ಪಟ್ಟಣದ ಕಸ ಸಮಸ್ಯೆ ಹಾಗೂ ಶಾಶ್ವತ ಬಸ್ ನಿಲ್ದಾಣ ನಿರ್ಮಾಣ ಸೇರಿದಂತೆ ಪಟ್ಟಣದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಉದ್ದೇಶದಿಂದ ಗೋಣಿಕೊಪ್ಪಲು ಅಭಿವೃದ್ಧಿ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.
ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘ ಹಾಗೂ ಗೋಣಿಕೊಪ್ಪಲು ಪ್ರಸ್‌ಕ್ಲಬ್ ಸಹಯೋಗದಲ್ಲಿ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರುಗಳು, ಗ್ರಾಮ ಪಂಚಾಯ್ತಿ, ಜನಪ್ರತಿನಿಧಿಗಳ ಸಮ್ಮುಖದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅಭಿವೃದ್ಧಿ ಸಮಿತಿ ಅಸ್ತಿತ್ವಕ್ಕೆ ತರುವ ಮೂಲಕ ಹೋರಾಟ ನಡೆಸುವಂತೆ ಒಕ್ಕೊರಲಿನ ನಿರ್ಧಾರ ತೆಗೆದುಕೊಳ್ಳಲಾಯಿತು.
ಗೋಣಿಕೊಪ್ಪ ಗ್ರಾಮ ಪಂಚಾಯ್ತಿ ಪಿಡಿಒ ಚಂದ್ರಮೌಳಿ, ಅಧ್ಯಕ್ಷೆ ಸೆಲ್ವಿ, ತಾ. ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್ ಸೇರಿದಂತೆ ಪಟ್ಟಣದ ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡು ಪಟ್ಟಣದ ಅಭಿವೃದ್ಧಿಗೆ ಕೈಜೋಡಿಸುವುದಾಗಿ ಭರವಸೆ ನೀಡಿದರು. ಸ್ಥಳೀಯ ಆಡಳಿತ ಹಾಗೂ ಸರ್ಕಾರದ ಗಮನ ಸೆಳೆಯುವುದರ ಮೂಲಕ ಸಮಸ್ಯೆ ಪರಿಹರಿಸಲು ಹಾಗೂ ಅಭಿವೃದ್ಧಿ ಕಾರ್ಯ ಅನುಷ್ಠಾನಕ್ಕೆ ಪಕ್ಷಾತೀತ, ಜಾತಿ- ಧರ್ಮ ರಹಿತವಾಗಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸ್ಥಳೀಯ ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿಯ ನಿರಾಸಕ್ತಿಯೇ ಕಸ ಸಮಸ್ಯೆ ಉಲ್ಬಣಿಸಲು ಕಾರಣ ಎಂಬ ಆರೋಪ ಸಂವಾದದಲ್ಲಿ ವ್ಯಕ್ತವಾಯಿತು. ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷೆ ಸೆಲ್ವಿ ಅವರು ಹೆಚ್ಚು ಕಾಳಜಿ ವಹಿಸಿ ಸಮಸ್ಯೆ ನಿಭಾಯಿಸಬೇಕಿತ್ತು. ಇವರ ನಿರಾಸಕ್ತಿ ಕಸ ಸಮಸ್ಯೆ ಸಾರ್ವಜನಿಕ ಸಮಸ್ಯೆಯಾಗಿ ಮಾರ್ಪಟ್ಟಿದೆ ಎಂದು ಪ್ರಮುಖರು ಆರೋಪಿಸಿದರು.
ಅಧ್ಯಕ್ಷೆ ಸೆಲ್ವಿ ಮಾತನಾಡಿ, ಕಸ ವಿಲೇವಾರಿ ಸಮಸ್ಯೆ ಪರಿಹಾರ ಕಂಡುಕೊಳ್ಳಲು ಸಾಕಷ್ಟು ಸಭೆ ಕರೆದಿದ್ದರೂ ಕೋರಂ ಕೊರತೆಯಿಂದ ಸಭೆ ನಡೆಯಲಿಲ್ಲ. ಪಿಡಿಒ ಹಾಗೂ ಸದಸ್ಯರ ಬೆಂಬಲ ಕಡಿಮೆ ಇದೆ. ಸಮಸ್ಯೆ ನಿವಾರಣೆಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು. ಪಿಡಿಒ ಚಂದ್ರಮೌಳಿ ಮಾತನಾಡಿ, ಅಸ್ತಿತ್ವಕ್ಕೆ ತರಲಾಗಿರುವ ಸಮಿತಿಗೆ ಸೂಕ್ತ ಬೆಂಬಲ ನೀಡಲಾಗುವುದು. ಸಾರ್ವಜನಿಕರ ಬೆಂಬಲದಿಂದ ಪಂಚಾಯ್ತಿ ಸದಸ್ಯರ ನಡುವೆ ಒಮ್ಮತ ತರಲು ಸಾಧ್ಯವಿದೆ. ಸಿಸಿ ಕ್ಯಾಮೆರಾ ಅಳವಡಿಕೆ, ಪ್ಲಾಸ್ಟಿಕ್ ಮಾರಾಟ ನಿಷೇಧಕ್ಕೆ ಕ್ರಮ, ಸ್ಥಳೀಯರಲ್ಲಿ ಕಸ ವಿಂಗಡಣೆ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದರು. ಕಾರ್ಮಿಕರ ಸಮಸ್ಯೆಯಿಂದಲೂ ಸಮಸ್ಯೆ ಹೆಚ್ಚಾಗುತ್ತಿದೆ. ಸೀತಾ ಕಾಲನಿಯಲ್ಲಿ ನಿರ್ಮಿಸಿರುವ ಕಸ ವಿಲೇವಾರಿ ಘಟಕದಲ್ಲಿ ಸ್ಥಳೀಯರ ವಿರೋಧದಿಂದಾಗಿ ನಮ್ಮ ಕಾರ್ಮಿಕರನ್ನು ಅತ್ತ ಕಸ ಸಾಗಿಸಲು ಭಯ ಪಡುವಂತಾಗಿದೆ. ಸಾರ್ವಜನಿಕರ ಬೆಂಬಲ ಬೇಕಾಗಿದೆ ಎಂದರು.
ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಅಜ್ಜಮಾಡ ಕುಟ್ಟಪ್ಪ ಮಾತನಾಡಿ, ಸಮಿತಿ ಮೂಲಕ ಸಮಸ್ಯೆ ಪರಿಹಾರಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಎಂದರು ಸಣ್ಣುವಂಡ ಚೆಂಗಪ್ಪ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಕಾರ್ಯದರ್ಶಿ ಜಗದೀಶ್ ಉಪಸ್ಥಿತರಿದ್ದರು. ದತ್ತಾತ್ರಿ ಸ್ವಾಗತಿಸಿದರು. ರಾಜೇಶ್ ವಂದಿಸಿದರು.
ಸಂಪೂರ್ಣ ಬೆಂಬಲ
ತಾ. ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್‌ಕುಮಾರ್ ಮಾತನಾಡಿ, ಸೀತಾ ಕಾಲನಿಯಲ್ಲಿ ನಿರ್ಮಿಸಿರುವ ಕಸ ಘಟಕವನ್ನು ಬಳಕೆ ಮಾಡಿಕೊಳ್ಳುವಲ್ಲಿ ಪಂಚಾಯತ್‌ಎಡವಿದೆ. ಇಲ್ಲಿನ ಸದಸ್ಯರಿಂದಲೇ ಘರ್ಷಣೆ ನಡೆಯಲು ಕಾರಣವಾಗಿದೆ. ಮುಂದಿನ ಕಾರ್ಯ ಯೋಜನೆಗಳಿಗೆ ತಾ.ಪಂ. ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು. ಗ್ರಾ.ಪಂ. ಸದಸ್ಯ ಬಿ. ಎನ್. ಪ್ರಕಾಶ್ ಮಾತನಾಡಿ, ಕಸ ಸಮಸ್ಯೆ ಪರಿಹಾರಕ್ಕೆ ಪಂಚಾಯಥ್ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದರು. . ಪಂಚಾಯತ್‌ರಾಜ್ ಬಸ್ ನಿಲ್ದಾಣ ನಿರ್ಮಾಣಕ್ಕೆ ತಾಂತ್ರಿಕ ತೊಂದರೆ ಇರುವುದರಿಂದ ಸಾರ್ವಜನಿಕ ಬಳಕೆ ಯೋಜನೆ ಮೂಲಕ ನಿಲ್ದಾಣ ನಿರ್ಮಾಣಕ್ಕೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ಗೋಣಿಕೊಪ್ಪ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಸಮಿತಿಯ ರೂಪುರೇಷೆ ಹಾಗೂ ಸಮಿತಿಗೆ ಹೆಚ್ಚುವರಿ ಸದಸ್ಯರನ್ನು ಆಯ್ಕೆ ಮಾಡಲು ತೀರ್ಮಾನಿಸಲಾಯಿತು.