ಕಾಸರಗೋಡು: ಪ್ರತಿ ವಾರದ ಕೋವಿಡ್ ಟೆಸ್ಟ್ ಸಂಖ್ಯೆಯನ್ನು 4 ಸಾವಿರ ಆಗಿ ಹೆಚ್ಚಳಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್‌ವೀರ್ ಚಂದ್ ನುಡಿದರು.
ಜಿಲ್ಲಾಧಿಕಾರಿ ಕಚೇರಿಯ ಕಿರು ಸಭಾಂಗಣ ದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಟಿ.ಪಿ.ಆರ್. ಕಡಿಮೆಗೊಳಿಸುವುದು ಪ್ರಧಾನ ಉದ್ದೇಶವಾಗಿದೆ. ಕಳೆದ ಬಾರಿ 33,075 ಮಂದಿ ತಪಾಸಣೆಗೆ ಒಳಗಾಗಿದ್ದಾರೆ. ಪ್ರಾಥಮಿಕ ಸಂಪರ್ಕ ಹೊಂದಿರುವವರು ಕಡ್ಡಾಯವಾಗಿ ತಪಾಸಣೆಗೆ ಒಳಗಾಗಬೇಕು ಎಂದರು.
ದ.ಕ. ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ:
ಕರ್ನಾಟಕ ಯಾತ್ರೆ ಸಂಬಂಧ ದ.ಕ. ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು. ಸಾರ್ವಜನಿಕರೊಂದಿಗೆ ಅತ್ಯಧಿಕ ಸಂಪರ್ಕ ಹೊಂದಿರುವ ಆರೋಗ್ಯ ಕಾರ್ಯಕರ್ತರು, ಸರಕಾರಿ ಸಿಬಂದಿ, ವ್ಯಾಪಾರಿಗಳು ಮೊದಲಾದವರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಕೋವಿಡ್ ತಪಾಸಣೆಗೆ ಒಳಗಾಗಬೇಕು. ಪ್ರತಿ ಪ್ರದೇಶಗಳಲ್ಲಿ ಜನಸಂಖ್ಯೆಗನುಗುಣವಾಗಿ ತಪಾಸಣೆ ನಡೆಸಲಾಗುವುದು. ಟಿ.ಪಿ.ಆರ್. ಪ್ರಕಾರ ಸ್ಥಳೀಯಾಡಳಿತ ಸಂಸ್ಥೆಗಳನ್ನು ವಿಂಗಡಿಸುವ ಕ್ರಮ ಮುಂದುವರಿಸಲಾಗುವುದು ಎಂದರು.
ವ್ಯಾಪಾರಿಗಳ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಜು. 19ರಂದು ವ್ಯಾಪಾರಿ ವ್ಯವ ಸಾಯಿ ಸಂಘಟನೆಗಳ ಪ್ರತಿನಿಧಿ ಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದರು.
ಜಿಲ್ಲೆಯಲ್ಲಿ ವ್ಯಾಕ್ಸಿನೇಶನ್ ಡ್ರೈವ್ ನಡೆಸಲಾಗುವುದು. ನಿಖರ ಯೋಜನೆ ಗಳೊಂದಿಗೆ ಪರಿಶಿಷ್ಟ ಜಾತಿ-ಪಂಗಡ, ಆದಿವಾಸಿ ವಲಯಗಳಲ್ಲಿ ಹಿರಿಯ ಪ್ರಜೆಗಳಿಗೆ ಆದ್ಯತೆ ನೀಡಿ ಲಸಿಕೆ ನೀಡಿಕೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ನುಡಿದರು.