Advertisement
ಕೇಂದ್ರ ನಿರ್ಮಾಣಕ್ಕೆ ಮೇರಿಹಿಲ್ ಮತ್ತು ಕಾವೂರಿನಲ್ಲಿ ನಾಲ್ಕು ತಿಂಗಳ ಹಿಂದೆಯೇ ಜಾಗ ಗುರುತಿಸಲಾಗಿತ್ತು. ಯಾವುದು ಸೂಕ್ತ ಎಂಬುದು ಅಂತಿಮವಾಗದೆ ಪ್ರಸ್ತಾವನೆ ಜಿಲ್ಲಾಧಿಕಾರಿ ಕಚೇರಿಯಲ್ಲಿತ್ತು. ಈಗ ಶಾಸಕ ಡಾ| ಭರತ್ ಶೆಟ್ಟಿ ಅವರ ಮುತುವರ್ಜಿಯಲ್ಲಿ ವಾರದೊಳಗೆ ನಿರ್ಧಾರವಾಗುವ ನಿರೀಕ್ಷೆ ಇದೆ. ಕಾವೂರಿನಲ್ಲಿ 1.3 ಎಕರೆ ಜಮೀನಿದ್ದು, ಅದೇ ಸೂಕ್ತ ಎಂಬ ತೀರ್ಮಾನಕ್ಕೆ ಜಿಲ್ಲಾಡಳಿತ ಬಂದಿದೆ.
ಮಂಗಳೂರಿನಲ್ಲಿ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಪ್ರಾದೇಶಿಕ ಕೇಂದ್ರ ನಿರ್ಮಾಣವಾದರೆ, ವಿವಿಯ ಯಾವುದೇ ಆವಶ್ಯಕತೆಗಳಿಗೆ ಕರಾವಳಿಯ ವಿದ್ಯಾರ್ಥಿಗಳು ಬೆಂಗಳೂರಿಗೆ ಅಲೆದಾಡ ಬೇಕಿಲ್ಲ. ದ.ಕ. ಮತ್ತು ಉಡುಪಿಯಲ್ಲಿ ಈ ವಿವಿಗೆ 70 ವೈದ್ಯಕೀಯ ಕಾಲೇಜುಗಳು ಸಂಯೋಜನೆಗೊಂಡಿವೆ. ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸೇವಾ ಕೋರ್ಸ್ ಕಲಿಯುವ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಸನಿಹದಲ್ಲಿಯೇ ಎಲ್ಲ ಸೇವೆಗಳನ್ನು ಕಲ್ಪಿಸುವುದು ಪ್ರಾದೇಶಿಕ ಕೇಂದ್ರ ತೆರೆಯುವ ಉದ್ದೇಶ. ಡಿಜಿಟಲ್ ಮೌಲ್ಯಮಾಪನ, ಪ್ರಾಧ್ಯಾಪಕರ ತರಬೇತಿ ಪ್ರಾದೇಶಿಕ ಕೇಂದ್ರದಲ್ಲಿ
ನಡೆಯುತ್ತದೆ. ವಿದ್ಯಾರ್ಥಿಗಳಿಗೆ ಸಮಸ್ಯೆ ಇದ್ದರೂ ಇಲ್ಲಿ ದೂರು ನೀಡಬಹುದು.ನಾಲ್ಕು ಕಡೆ ಕೇಂದ್ರಮಂಗಳೂರು, ದಾವಣಗೆರೆ, ಬೆಳಗಾವಿ, ಕಲಬುರಗಿಗಳಲ್ಲಿ ಪ್ರಾದೇಶಿಕ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶವನ್ನು ಆರೋಗ್ಯ ವಿವಿ ಹೊಂದಿದ್ದು, ಕಲಬುರಗಿಯದು ಮೂರು ತಿಂಗಳುಗಳಲ್ಲಿ ಕಾರ್ಯಾರಂಭ ಮಾಡಲಿದೆ. ದಾವಣಗೆರೆಯಲ್ಲಿ ಪ್ರಾದೇಶಿಕ ಉಪಕೇಂದ್ರದ ಜತೆಗೆ ಆಡಿಟೋರಿಯಂ ಕೂಡ ನಿರ್ಮಾಣವಾಗಲಿದೆ. ಇದು ಕೂಡ ಸದ್ಯವೇ ಆರಂಭವಾಗುವ ನಿರೀಕ್ಷೆ ಇದೆ. ಬೆಳಗಾವಿಯಲ್ಲಿ ಇನ್ನಷ್ಟೇ ಆಗಬೇಕಿದೆ.
Related Articles
ರಾಜೀವ ಗಾಂಧಿ ಆರೋಗ್ಯ ವಿವಿಯ ಕ್ರೀಡಾ ಸಂಕೀರ್ಣವನ್ನೂ ಮಂಗಳೂರಿನಲ್ಲಿ ಸ್ಥಾಪಿಸುವ ಯೋಜನೆ ಇದ್ದು, ಇದಕ್ಕಾಗಿ ಮಂಗಳೂರು ವಿವಿ ಕ್ಯಾಂಪಸ್‌ನಲ್ಲಿ 5 ಎಕರೆ ಕೇಳಲಾಗಿದೆ. ಈ ಸಂಬಂಧ ಪ್ರಕ್ರಿಯೆ ನಡೆಯುತ್ತಿದೆ ಎಂದು ರಾಜೀವಗಾಂಧಿ ಆರೋಗ್ಯ ವಿವಿಯ ಸೆನೆಟ್ ಸದಸ್ಯ ಯು.ಟಿ. ಇಫ್ತಿಕಾರ್ ತಿಳಿಸಿದ್ದಾರೆ.
Advertisement
ಶೀಘ್ರ ಜಾಗ ಅಂತಿಮಪ್ರಾದೇಶಿಕ ಕೇಂದ್ರಕ್ಕೆ ಮೇರಿ ಹಿಲ್ ಮತ್ತು ಕಾವೂರಿನಲ್ಲಿ ಸ್ಥಳ ಗುರುತಿಸಲಾಗಿದೆ. ಈಗಾಗಲೇ ಎರಡೂ ಸ್ಥಳಗಳ ಬಗ್ಗೆ ಪರಿಶೀಲನೆ ನಡೆದಿದೆ. ಶೀಘ್ರ ಜಿಲ್ಲಾಧಿಕಾರಿ ಯವರೊಂದಿಗೆ ತೆರಳಿ ಇನ್ನೊಂದು ಹಂತದ ಪರಿಶೀಲನೆ ನಡೆಸಿ ಅಂತಿಮಗೊಳಿಸಲಾಗುವುದು.
-ಡಾ| ವೈ. ಭರತ್ ಶೆಟ್ಟಿ, ಶಾಸಕರು ಪ್ರಾದೇಶಿಕ ಕೇಂದ್ರಕ್ಕೆ ಜಾಗ ಗುರುತಿಸುವ ಸಂಬಂಧ ಜಿಲ್ಲಾಧಿಕಾರಿಗೆ ತಿಳಿಸಲಾಗಿದೆ. ಕಾವೂರು ವ್ಯಾಪ್ತಿಯಲ್ಲಿ ಎರಡು ಜಮೀನು ತೋರಿಸಿದ್ದರು. ಸ್ಥಳೀಯ ಶಾಸಕ ಡಾ| ಭರತ್ ಶೆಟ್ಟಿ ಮತ್ತು ವಿವಿಯ ಸೆನೆಟ್ ಸದಸ್ಯರು ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಜಾಗ ಅಂತಿಮಗೊಂಡ ಬಳಿಕ ಕೇಂದ್ರ ನಿರ್ಮಾಣದ ಒಟ್ಟು ರೂಪುರೇಖೆ, ವೆಚ್ಚದ ಬಗ್ಗೆ ತೀರ್ಮಾನಿಸಲಾಗುವುದು.
-ಡಾ| ಸಚ್ಚಿದಾನಂದ, ರಾಜೀವ ಗಾಂಧಿ ಆರೋಗ್ಯ ವಿವಿ ಉಪಕುಲಪತಿ -ಧನ್ಯಾ ಬಾಳೆಕಜೆ