Advertisement

27ರಿಂದ ನೀರು ಹರಿಸಲು ತೀರ್ಮಾನ

10:38 AM Jul 21, 2019 | Team Udayavani |

ಆಲಮಟ್ಟಿ: ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯ ವ್ಯಾಪ್ತಿಯ ಆಲಮಟ್ಟಿ ಎಡದಂಡೆ, ಆಲಮಟ್ಟಿ ಬಲದಂಡೆ, ತಿಮ್ಮಾಪುರ ಏತ ನೀರಾವರಿ, ಚಿಮ್ಮಲಗಿ ಏತ ನೀರಾವರಿ ಹಾಗೂ ಮುಳವಾಡ ಏತ ನೀರಾವರಿ ಯೋಜನೆಗಳು ಸೇರಿದಂತೆ ವ್ಯಾಪ್ತಿ ಕಾಲುವೆಗಳಿಗೆ ಜು. 27ರ ಮಧ್ಯರಾತ್ರಿಯಿಂದ ಮತ್ತು ನಾರಾಯಣಪುರ ಬಸವಸಾಗರ ಜಲಾಶಯದಿಂದ ಜು. 21ರಿಂದ ಎಲ್ಲ ಕಾಲುವೆಗಳಿಗೆ ನೀರು ಬಿಡಲು ಐಸಿಸಿ ಸಭೆಯಲ್ಲಿ ತೀರ್ಮಾನಿಸಲಾಯಿತು.

Advertisement

ಶನಿವಾರ ಬೆಂಗಳೂರಿನ ವಿಧಾನಸೌಧದ 313ನೇ ಕೊಠಡಿಯಲ್ಲಿ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಅವಳಿ ಜಲಾಶಯಗಳ ನೀರಿನ ಲಭ್ಯತೆ ಗಮನಿಸಿ 2019ನೇ ಆಗಸ್ಟ್‌ ಅಂತ್ಯದವರೆಗೂ ನಿರಂತರವಾಗಿ ಎಲ್ಲ ಕಾಲುವೆಗಳಿಗೆ ನೀರು ಹರಿಸುವುದು ಮತ್ತು ಸೆಪ್ಟೆಂಬರ್‌ ಮೊದಲ ವಾರದಲ್ಲಿ ಜಲಾಶಯಗಳಲ್ಲಿನ ನೀರಿನ ಸಂಗ್ರಹ ಗಮನಿಸಿ ಮತ್ತೂಮ್ಮೆ ಸಭೆ ಸೇರಿ ಮುಂದಿನ ತೀರ್ಮಾನ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಆಲಮಟ್ಟಿ ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯ ವ್ಯಾಪ್ತಿಯಲ್ಲಿ ಕಾಲುವೆಗಳ ದುರಸ್ತಿಯ ಕ್ಲೋಸರ್‌ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಹನುಮಾಪುರ ಜಾಕ್‌ವೆಲ್ ದುರಸ್ತಿ ಕೂಡಾ ಇನ್ನೂ ಮುಗಿದಿಲ್ಲ, ಇವುಗಳನ್ನು ಗಮನದಲ್ಲಿಟ್ಟುಕೊಂಡು ಜು. 27ರ ಮಧ್ಯರಾತ್ರಿಯಿಂದ ಆಗಸ್ಟ್‌ವರೆಗೆ ಯಾವುದೇ ವಾರಾಬಂದಿಯಿಲ್ಲದಂತೆ ನೀರು ಹರಿಸಲು ತೀರ್ಮಾನಿಸಲಾಗಿದೆ. ಒಳಹರಿವು ಸ್ಥಗಿತಗೊಂಡ ನಂತರ ಆಗಸ್ಟ್‌ ಕೊನೆ ವಾರದಲ್ಲಿ ಸಭೆ ಸೇರಿ ವಾರಾಬಂದಿ ಅವಧಿ ನಿಗದಿ ಪಡಿಸಲು ನಿರ್ಧರಿಸಿತು.

ಮಹಾರಾಷ್ಟ್ರದಲ್ಲಿ ಮಳೆ ಕಡಿಮೆಯಾಗುತ್ತಿದ್ದು ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಕ್ಷೀಣಿಸಿದೆ. ಜಲಾಶಯದ ಒಳಹರಿವು ಸ್ಥಗಿತಗೊಂಡ ನಂತರ ವಾರಾಬಂದಿ ಅಳವಡಿಸಿದಾಗ ಪ್ರತಿ ನೀರಾವರಿ ಯೋಜನೆಯ ಮೊದಲು ಟೇಲ್ ಎಂಡ್‌ ಭಾಗಕ್ಕೆ ನೀರು ಹರಿಸಿ, ನಂತರ ಹಂತ ಹಂತವಾಗಿ ಆ ಯೋಜನೆಯ ಎಲ್ಲ ಕಾಲುವೆಗೆ ನೀರು ಹರಿಸಲು ಐಸಿಸಿ ನಿರ್ಣಯಿಸಿತು. ಸಭೆಯಲ್ಲಿ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಜೇವರ್ಗಿ ಶಾಸಕ ಅಜಯಸಿಂಗ್‌, ಜಮಖಂಡಿ ಶಾಸಕ ಆನಂದ ನ್ಯಾಮಗೌಡ, ದೇವದುರ್ಗ ಶಾಸಕ ಶಿವನಗೌಡ ನಾಯಕ, ರಾಯಚೂರು ಗ್ರಾಮೀಣ ಶಾಸಕ ದದ್ದಲ್ ಬಸನಗೌಡ ಪಾಲ್ಗೊಂಡು ತಮ್ಮ ಭಾಗದ ನೀರಾವರಿ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next