Advertisement

ಸಣ್ಣ ಸಮಾಜಗಳ ಒಕ್ಕೂಟ ರಚಿಸಲು ತೀರ್ಮಾನ: ಮುದೂರ

03:27 PM Feb 05, 2018 | |

ಮುದ್ದೇಬಿಹಾಳ: ಶೀಘ್ರ ಮುದ್ದೇಬಿಹಾಳದಲ್ಲಿ ದಲಿತ, ದಮನಿತ, ಶೋಷಿತರ ಬೃಹತ್‌ ಸಮಾವೇಶ ನಡೆಸಲಿದ್ದು ಈಗಿನಿಂದಲೇ ಒಗ್ಗಟ್ಟಾಗಿ ಶಕ್ತಿ ಪ್ರದರ್ಶಿಸಬೇಕಿದೆ. ಇದಕ್ಕಾಗಿ ಎಲ್ಲ ಸಣ್ಣ ಸಮಾಜಗಳ ಒಕ್ಕೂಟ ರಚಿಸಲು ತೀರ್ಮಾನಿಸಲಾಗಿದೆ. ಸರ್ಕಾರದ ಸೌಲಭ್ಯ ಪಡೆಯಲು, ಅತ್ಯಾಚಾರ, ದೌರ್ಜನ್ಯ ನಡೆದಾಗ ಒಟ್ಟಾಗಿ ಪ್ರತಿಭಟಿಸಲು ಇದು ವೇದಿಕೆ ಆಗಲಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಡಿ.ಬಿ. ಮುದೂರ ಹೇಳಿದ್ದಾರೆ.

Advertisement

ಇಲ್ಲಿನ ತಾಪಂ ಸಭಾ ಭವನದಲ್ಲಿ ರವಿವಾರ ನಡೆದ ದಲಿತ, ದಮನಿತ, ಶೋಷಿತರ ಬೃಹತ್‌ ಸಮಾವೇಶ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘಟನೆ ಕಟ್ಟುವಾಗ ಸಂಶಯ, ಸಣ್ಣತನದ ವಿಚಾರ ಬದಿಗೊತ್ತಬೇಕು. ಸಣ್ಣ ಸಮಾಜಕ್ಕೆ ಸೇರಿದವರ ಮೇಲೆ ಅತ್ಯಾಚಾರ, ದೌರ್ಜನ್ಯ ನಡೆದಾಗ ಒಟ್ಟಾಗಿ ಹೋರಾಟ ನಡೆಸಲು ಇದರಿಂದ ಅವಕಾಶ ದೊರಕುತ್ತದೆ.

ಅಲ್ಲದೆ ಚುನಾವಣೆ ಸಂದರ್ಭ ಬಂಡವಾಳಶಾಹಿ, ಕುತಂತ್ರಿ ರಾಜಕಾರಣಿಗಳು ಸಣ್ಣ ಸಮಾಜಗಳ ಶೋಷಣೆ ನಡೆಸುವುದನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು. ಆಯಾ ಸಣ್ಣ ಸಮಾಜಗಳ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿಯನ್ನು ಒಕ್ಕೂಟದಲ್ಲಿ ಸೇರ್ಪಡೆ ಮಾಡಿ ಸಮಾವೇಶದಲ್ಲಿ ಸಮಾನ ಅವಕಾಶ ಕಲ್ಪಿಸಲಾಗುತ್ತದೆ. ಓಟಿಗೋಸ್ಕರ ಸಂಘಟನೆ ಮಾಡುತ್ತಿಲ್ಲ. ಒಳ್ಳೇಯವರಿಗೆ ಮತ ಹಾಕುವಂತೆ, ನಿಮ್ಮ ಮತ ನಿಮ್ಮ ಹಕ್ಕು ಎನ್ನುವುದರ ಅರಿವು ಮೂಡಿಸಲು ಸಂಘಟನೆ ಶ್ರಮಿಸುತ್ತದೆ ಎಂದರು.

ದಲಿತ ಮುಖಂಡರಾದ ಪರಶುರಾಮ ಕೊಣ್ಣೂರ, ಹರೀಶ ನಾಟೀಕಾರ ಮಾತನಾಡಿ ಸಣ್ಣ ಸಮಾಜಗಳು ಒಂದಾಗಿ ಎಲ್ಲರ ಮನಸ್ಸು ಬೆಸೆದುಕೊಳ್ಳಬೇಕು. ಅತ್ಯಾಚಾರ, ದೌರ್ಜನ್ಯ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆದಲ್ಲಿ ಯಶಸ್ಸು ಸಿಗುತ್ತದೆ. ಚುನಾವಣೆ ಎಲ್ಲರ ಹಕ್ಕು. ಯಾರಿಗಾದರೂ ಮತ ಹಾಕಬಹುದು. ಇದರಲ್ಲಿ ಒಕ್ಕೂಟದ ಹಸ್ತಕ್ಷೇಪ ಇರಬಾರದು. ಅನ್ಯಾಯ ಪ್ರತಿಭಟಿಸುವ ವೇದಿಕೆಯಾಗಿ ಒಕ್ಕೂಟ ರಚಿಸಿದಲ್ಲಿ ಯಶಸ್ಸು ಸಾಧ್ಯ ಎಂದರು.

ಸಭೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಡಿ ಬರುವ ಎಲ್ಲ ಸಣ್ಣ ಜಾತಿಗಳ ಸಮೇತ ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ಹೂಗಾರ, ಹಡಪದ, ಸಮಗಾರ, ಮಚಗಾರ, ಡೋರ, ಕುಂಬಾರ, ಮಡಿವಾಳ, ಭಜಂತ್ರಿ, ವಾಲ್ಮೀಕಿ, ಕಮ್ಮಾರ, ಕುಂಚಿಕೊರವ, ಡೋಂಬರ, ಬಳಿಗಾರ, ಚನ್ನದಾಸರ, ಬುಡಬುಡಿಕೆ, ಕಾಡಸಿದ್ದ ಸೇರಿದಂತೆ ಹಲವು ಸಣ್ಣ ಸಮಾಜಗಳ ಪಟ್ಟಿ ಮಾಡಿ ಎಲ್ಲರನ್ನೂ ಸಂಪರ್ಕಿಸಲು, ಮುಂದಿನ ಭಾನುವಾರ ಮತ್ತೇ ಸಭೆ ನಡೆಸಿ ಸಮಾವೇಶ ಕುರಿತು ಅಂತಿಮ ತೀರ್ಮಾನ ಕೈಕೊಳ್ಳಲು ನಿರ್ಧರಿಸಲಾಯಿತು.

Advertisement

ವಿವಿಧ ಸಂಘಟನೆಗಳ ಪ್ರಮುಖರಾದ ಅಶೋಕ ಅಜಮನಿ, ಲಕ್ಷ್ಮಣ ದಾಸರ, ಶರಣಬಸ್ಸು ಚಲವಾದಿ, ಯಮನಪ್ಪ ಹಂಗರಗಿ, ಪರಶುರಾಮ ನಾಲತವಾಡ, ಪ್ರಶಾಂತ ಕಾಳೆ, ಬಲಭೀಮ ನಾಯಕಮಕ್ಕಳ, ಚನ್ನಪ್ಪ ವಿಜಯಕರ, ವೈ.ಬಿ.ಚಲವಾದಿ, ಬಸವರಾಜ ಹೊಸಮನಿ, ಉದಯಕುಮಾರ ದೊಡಮನಿ, ಹಣಮಂತ ಮಾದರ, ಮುತ್ತು
ಮಡಿವಾಳರ, ಚಂದ್ರು ನಾಗರಬೆಟ್ಟ, ನಾಗೇಂದ್ರ ಹಳ್ಳೂರ, ಚಂದ್ರಶೇಖರ ಉಪ್ಪಲದಿನ್ನಿ, ಬಸವರಾಜ ಅಬ್ಬಿಹಾಳ,
ಮುತ್ತಪ್ಪ ಬಾವಲತ್ತಿ, ಪ್ರಹ್ಲಾದ ಹಡಪದ, ರಾಜು ವಾಲಿಕಾರ, ದೇವೇಂದ್ರ ಹೊಸಮನಿ, ಮಲ್ಲನಗೌಡ ಕಟಗೂರ, ಸಿ.ಬಿ.ಕವಡಿಮಟ್ಟಿ, ಬಸಲಿಂಗ ಮಾದರ, ಗೋಪಾಲ ದಾಸರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next