Advertisement

Supreme Court ಆದೇಶ ಪಾಲನೆಗೆ ನಿರ್ಣಯ:ಸೆ. 26ರ ವರೆಗೆ ನೀರು ಹರಿಸಲು ಸಚಿವ ಸಂಪುಟ ನಿರ್ಧಾರ

12:47 AM Sep 23, 2023 | Team Udayavani |

ಬೆಂಗಳೂರು: ತಮಿಳುನಾಡಿಗೆ 15 ದಿನಗಳ ಕಾಲ ನಿತ್ಯ 5 ಸಾವಿರ ಕ್ಯುಸೆಕ್‌ ನೀರು ಬಿಡಬೇಕು ಎಂಬ ಸುಪ್ರೀಂ ಕೋರ್ಟ್‌ ಆದೇಶ ಪಾಲಿಸಲು ರಾಜ್ಯ ಸರಕಾರ ನಿರ್ಧರಿಸಿದೆ.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ಯಲ್ಲಿ ಶುಕ್ರವಾರ ರಾತ್ರಿ ನಡೆದ ಸಚಿವ ಸಂಪುಟ ಸಭೆಯು ನೀರು ಬಿಡಬೇಕೆಂಬ ಸುಪ್ರೀಂ ಕೋರ್ಟ್‌ ತೀರ್ಪಿನಿಂದ ಉಂಟಾಗಿರುವ ಇಕ್ಕಟ್ಟಿನ ಪರಿಸ್ಥಿತಿಯ ಸಾಧಕ ಬಾಧಕಗಳು ಹಾಗೂ ಕಾವೇರಿ ಜಲಾನಯನ ಪ್ರದೇಶದ ಡ್ಯಾಂಗಳಲ್ಲಿರುವ ನೀರಿನ ಲಭ್ಯತೆಯನ್ನು ಪರಿಗಣಿಸಿ ಈ ತೀರ್ಮಾನಕ್ಕೆ ಬಂದಿದೆ.
ತಮಿಳುನಾಡಿಗೆ ನೀರು ಹರಿಸುವುದಕ್ಕೆ ಬಿಜೆಪಿ, ಜೆಡಿಎಸ್‌ ಮತ್ತು ರೈತ ಸಂಘಟನೆಗಳು, ಕನ್ನಡ ಸಂಘಟನೆಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರೂ ಸೆ. 26ರವರೆಗೆ ನಿತ್ಯ 5 ಸಾವಿರ ಕ್ಯುಸೆಕ್‌ಗಳಂತೆ ನೀರು ಹರಿಸುವುದು ಅನಿವಾರ್ಯವಾಗಿದೆ.

ಸಭೆ ಬಳಿಕ ಸುದ್ದಿಗಾರರ ಜತೆ ಮಾತ ನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ನ್ಯಾಯಾಲಯದ ಆದೇಶ ಪಾಲಿಸುತ್ತ ರೈತರ ಹಿತ ಕಾಯುತ್ತೇವೆ ಎಂದರು. ಸುಪ್ರೀಂನಲ್ಲಿ ಈ ಬಗ್ಗೆ ವಾದ ಮಾಡಿದ ಕಾನೂನು ತಂಡ ಹಾಗೂ ಅಡ್ವೊಕೇಟ್‌ ಜನರಲ್‌ ಅವರಿಂದ ಸಚಿವ ಸಂಪುಟ ಮಾಹಿತಿ ಪಡೆದುಕೊಂಡಿದೆ. ಜತೆಗೆ ಮೇಕೆದಾಟು ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸುತ್ತೇವೆ. ಸೆ. 26ವರೆಗೆ ನ್ಯಾಯಾಲಯದ ಆದೇಶ ಪಾಲಿಸಿ ಬಳಿಕ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ವಾದದ ಸಂದರ್ಭದಲ್ಲಿ ಮುಕುಲ್‌ ರೋಹಟಗಿ ಕನಿಷ್ಠ 7,200 ಕ್ಯುಸೆಕ್‌ ಆದರೂ ಆದೇಶಿಸುವಂತೆ ಅರ್ಜಿ ಸಲ್ಲಿಸಿದ್ದರು. ನಾವು 5 ಸಾವಿರ ಕ್ಯುಸೆಕ್‌ ನೀರು ಹರಿಸುವುದು ಕಷ್ಟ ಎಂದಿದ್ದೆವು. ನಮ್ಮ ಮನವಿಯನ್ನು ತಿರಸ್ಕರಿಸಿ ದ್ದಾರೆ. ಅವರ ಮನವಿಯನ್ನು ಪುರಸ್ಕರಿಸಿಲ್ಲ. ಈ ಮಧ್ಯೆ ಮೇಕೆದಾಟು ವಿಚಾರ ಕೋರ್ಟ್‌ ನಲ್ಲಿ ಪ್ರಸ್ತಾವನೆಯಾಗಿದೆ. ನೀವು ಏಕೆ ಮೇಕೆದಾಟು ಅಣೆಕಟ್ಟಿಗೆ ಅಡ್ಡ ಬರುತ್ತೀರಿ ಎಂದು ತಮಿಳುನಾಡಿಗೆ ಕೋರ್ಟ್‌ ಪ್ರಶ್ನಿಸಿದೆ.

ಕೋರ್ಟ್‌ಗೆ ದಾಖಲೆ ಸಲ್ಲಿಸಿ ಮೇಕೆದಾಟು ಯೋಜನೆ ಮುಂದುವರಿಸಲು ಅನುಮತಿ ಕೇಳುತ್ತೇವೆ. ಮೇಕೆದಾಟುವಿನಿಂದ ಎರಡೂ ರಾಜ್ಯಕ್ಕೆ ಅನುಕೂಲವಾಗುತ್ತದೆ ಎಂಬುದು ಕೋರ್ಟ್‌ಗೂ ಮನವರಿಕೆಯಾಗಿದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

Advertisement

ರಾಜ್ಯಸಭೆಯಲ್ಲಿ ಕಾವೇರಿ ಪ್ರಸ್ತಾವಿಸದ ಖರ್ಗೆ: ದೇವೇಗೌಡ
ಕಾವೇರಿ ವಿಚಾರದಲ್ಲಿ ಈ ಹಿಂದೆ ರಾಜ್ಯಸಭೆಯಲ್ಲಿ ನಾನೊಬ್ಬನೇ ಧ್ವನಿ ಎತ್ತಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿ ಕಾರ್ಜುನ ಖರ್ಗೆ ಮೌನಕ್ಕೆ ಶರಣಾಗಿ ದ್ದರು ಎಂದು ಎಚ್‌.ಡಿ. ದೇವೇ ಗೌಡ ತೀಕ್ಷ್ಣವಾಗಿ ಹೇಳಿದರು. ರಾಜ್ಯಸಭೆ ಯಲ್ಲಿ ಕಾವೇರಿ ವಿಚಾರವಾಗಿ ವಸ್ತುಸ್ಥಿತಿ ಅರಿಯಲು ಬೇರೆ ರಾಜ್ಯದ ಅಧಿಕಾರಿ ಗಳನ್ನು ಕಳುಹಿಸುವಂತೆ ಸಲಹೆ ನೀಡಿದ್ದೆ. ಆದರೆ ಖರ್ಗೆ ಯಾಕೆ ಚಕಾರ ಎತ್ತಲಿಲ್ಲ? ಅವರು ಒಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವುದರಿಂದ ನಾನು ಹೆಚ್ಚಿಗೆ ಏನೂ ಹೇಳುವುದಿಲ್ಲ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕಾವೇರಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಈಚೆಗೆ ವಿಧಾನ ಪರಿಷತ್ತಿನ ಸದಸ್ಯರೊಬ್ಬರನ್ನು ನನ್ನ ಬಳಿ ಕಳುಹಿಸಿದ್ದರು. ಈ ವಿಚಾರದಲ್ಲಿ ನನ್ನ ಸಹಕಾರ ಯಾವಾಗಲೂ ಇರುತ್ತದೆ ಎಂದು ಹೇಳಿದ್ದೇನೆ ಎಂದರು.

4,860 ಕೋಟಿ ರೂ. ಪರಿಹಾರ ಕೋರಲು ನಿರ್ಧಾರ
ಬೆಂಗಳೂರು: ಮಳೆ ಕೊರತೆಯಿಂದ ಬಳಲುತ್ತಿರುವ 195 ತಾಲೂಕುಗಳನ್ನು ಈಚೆಗೆ ಬರಪೀಡಿತ ಎಂದು ಘೋಷಿಸಿದ್ದ ರಾಜ್ಯ ಸರಕಾರವು ಶುಕ್ರವಾರ ಅದಕ್ಕೆ ಸಚಿವ ಸಂಪುಟದ ಅನುಮೋದನೆ ಪಡೆದಿದೆ. ಬರದಿಂದ ಒಟ್ಟು 30,430 ಕೋಟಿ ರೂ.ನಷ್ಟವಾಗಿದ್ದು, ಕೇಂದ್ರ ಸರಕಾರದಿಂದ ಒಟ್ಟು 4,860.13 ಕೋಟಿ ರೂ. ಪರಿಹಾರ ಕೋರಲಾಗುತ್ತದೆ ಎಂದು ಸರಕಾರ ತಿಳಿಸಿದೆ.

ಕಳೆದ ವಾರವಷ್ಟೇ 161 ತಾಲೂಕುಗಳನ್ನು ತೀವ್ರ ಬರಪೀಡಿತ ಮತ್ತು 34 ಸಾಧಾರಣ ಬರಪೀಡಿತ ಎಂದು ಸರಕಾರ ಘೋಷಿಸಿತ್ತು. ಆದರೆ ಸಚಿವ ಸಂಪುಟದ ಅನುಮೋದನೆ ಬಾಕಿ ಇತ್ತು. ಶುಕ್ರವಾರ ಈ ಆದೇಶಕ್ಕೆ ಘಟನೋತ್ತರ ಅನುಮೋದನೆ ನೀಡಲಾಯಿತು.

 

Advertisement

Udayavani is now on Telegram. Click here to join our channel and stay updated with the latest news.

Next