ಬಾಗಲಕೋಟೆ: ಜಿಲ್ಲೆಯಲ್ಲಿ ಮೇ 3ರಂದು ಬಸವ ಜಯಂತಿ, 6ರಂದು ಶಂಕರಾಚಾರ್ಯ ಜಯಂತಿ, 8ರಂದು ಭಗೀರಥ ಹಾಗೂ 10ರಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ |ಕೆ. ರಾಜೇಂದ್ರ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿವಿಧ ಜಯಂತಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಬಸವ ಜಯಂತಿಯನ್ನು ನವನಗರದ ಸೆಕ್ಟರ್ ನಂ.32ರಲ್ಲಿರುವ ಬಸವ ಮಂಟಪದಿಂದ ಡಾ|ಬಿ.ಆರ್. ಅಂಬೇಡ್ಕರ್ ಭವನದವರೆಗೆ ಮೆರವಣಿಗೆ, ನಂತರ ಅಂಬೇಡ್ಕರ್ ಭವನದಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಅದೇ ರೀತಿಯ ಜಿಪಂ ಸಭಾಭವನದಲ್ಲಿ ಶಂಕರಾಚಾರ್ಯ ಜಯಂತಿ ಆಚರಿಸಲು ನಿರ್ಧರಿಸಲಾಯಿತು. ಉಪನ್ಯಾಸಕರಾಗಿ ಪ್ರತೀಕ್ ಭಟ್ ಅವರನ್ನು ಕರೆಸಲು ತಿಳಿಸಲಾಯಿತು. ಭಗೀರಥ ಜಯಂತಿಯನ್ನು ಸಹ ನವನಗರದ ಡಾ| ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಚರಿಸಲು ನಿರ್ಧರಿಸಲಾಯಿತು.
ಉತ್ತಮ ಉಪನ್ಯಾಸಕರನ್ನು ಆಹ್ವಾನಿಸಲು ತಿಳಿಸಿದ ಅವರು ವೇದಿಕೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮಾಡಲು ತಿಳಿಸಿದರು. ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಸಹ ಅಂಬೇಡ್ಕರ್ ಭವನದಲ್ಲಿ ಜರುಗಿಸಲು ನಿರ್ಧರಿಸಲಾಯಿತು. ಉಪನ್ಯಾಸಕರಾಗಿ ಎಸ್ .ಟಿ.ಮಳಲಿ ಅವರನ್ನು ಕರೆಯಿಸಲು ತಿಳಿಸಲಾಯಿತು.
ಕಾರ್ಯಕ್ರಮಗಳಲ್ಲಿ ಎಲ್ಲ ಸಮುದಾಯದವರು ಪಾಲ್ಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸಮುದಾಯ ಬಾಂಧವರಲ್ಲಿ ಮನವಿ ಮಾಡಿಕೊಂಡರು. ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಎನ್. ಹೇಮಾವತಿ, ವಿವಿಧ ಸಮುದಾಯದ ಮುಖಂಡರಾದ ಜೆ.ಎನ್. ನಾಶಿ, ಬಸವರಾಜ ಮುಕ್ಕುಪ್ಪಿ, ಎಸ್.ಎಸ್. ಕುಲಕರ್ಣಿ, ಮುತ್ತು ಜೋಳದ, ಅರವಿಂದ ಮುಚಖಂಡಿ, ಟಿ.ಎಚ್. ಕುಲಕರ್ಣಿ, ಶಿವರಾಮ ಹೆಗಡೆ, ಉಮೇಶ ಭಟ್ಟ, ಗೋವಿಂದ ಭಟ್, ವೆಂಟಕೇಶ ಜ್ಯೋಶಿ, ಮಾಸೂರಕರ, ಬ್ರಹ್ಮಶ್ರೀ ಆನಂದ ಉಪಸ್ಥಿತರಿದ್ದರು.