Advertisement

ಪ್ಲಾಸ್ಟಿಕ್‌ ಮುಕ್ತ ಗ್ರಾಮ ನಿರ್ಮಾಣಕ್ಕೆ ನಿರ್ಧಾರ: ಸಿಇಒ

11:20 AM Oct 16, 2019 | Suhan S |

ಬಾಗಲಕೋಟೆ: ಎನ್‌ಆರ್‌ಎಲ್‌ಎಂ ಸಂಜೀವಿನಿ ಯೋಜನೆಯಡಿ ರಚಿಸಲಾದ ಗ್ರಾಪಂ ಒಕ್ಕೂಟಗಳು ಹಾಗೂ ಸ್ವ-ಸಹಾಯ ಸಂಘಗಳ ಸಹಭಾಗಿತ್ವದಲ್ಲಿ ಎಲ್ಲ ಗ್ರಾಮಗಳನ್ನು ಪ್ಲಾಸ್ಟಿಕ್‌ ಮುಕ್ತವನ್ನಾಗಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿ.ಪಂ. ಸಿಇಒ ಗಂಗೂಬಾಯಿ ಮಾನಕರ ಹೇಳಿದರು.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ಲಾಸ್ಟಿಕ್‌ ಚೀಲ ಬದಲಾಗಿ ಬಟ್ಟೆ ಚೀಲ ಬಳಸಲು ಸೂಚಿಸಲಾಗಿದೆ. ಇದಕ್ಕಾಗಿ ಸ್ತ್ರೀ ಶಕ್ತಿ ಸಂಘಗಳ ಮಹಿಳೆಯರಿಂದ ಬಟ್ಟೆ, ಪೇಪರ್‌ ಚೀಲ ತಯಾರಿಸಲು ತರಬೇತಿ ನೀಡಲಾಗುತ್ತಿದೆ. ಇದರಿಂದ ಮಹಿಳೆಯರಿಗೆ ಸ್ವ-ಉದ್ಯೋಗ ಕಲ್ಪಿಸುವ ಜೊತೆಗೆ ಪ್ಲಾಸ್ಟಿಕ್‌ ಮುಕ್ತವನ್ನಾಗಿಸಲು ಮಹಿಳೆಯರಿಗೆ ಪ್ರೋತ್ಸಾಹಿಸಲಾಗುತ್ತಿದೆ. ಪ್ಲಾಸ್ಟಿಕ್‌ ಮುಕ್ತ ಅಭಿಯಾನದಲ್ಲಿಯೂ ಮಹಿಳೆಯರನ್ನು ತೊಡಗಿಸಿಕೊಂಡು ಅರಿವು ಮೂಡಿಸಲಾಗುತ್ತಿದೆ ಎಂದರು.

ಗ್ರಾಮೀಣ ಭಾಗದಲ್ಲಿ ತ್ಯಾಜ್ಯ ಸಂಗ್ರಹ: ಸ್ವಚ್ಛ ಭಾರತ ಮಿಷನ್‌ ಯೋಜನೆಯಡಿ ಗ್ರಾ.ಪಂಗಳಲ್ಲಿ ಸ್ವಚ್ಛತೆ, ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಘನ ಮತ್ತು ದ್ರವ್ಯ ತ್ಯಾಜ್ಯವನ್ನು ಮನೆ ಮನೆಗೆ ಹೋಗಿ ಸಂಗ್ರಹಿಸುವ ಕೆಲಸ ಮಾಡಲಾಗುತ್ತಿದೆ. ಈ ಕಾರ್ಯ ಯಡಹಳ್ಳಿ ಮತ್ತು ಹಿರೇಪಡಸಲಗಿ ಗ್ರಾಮದಲ್ಲಿ ನಡೆದಿದೆ. ತ್ಯಾಜ್ಯ ಸಂಗ್ರಹಿಸಲು 15 ಗ್ರಾ.ಪಂಗಳಲ್ಲಿ ಸ್ಥಳ ಗುರುತಿಸಲಾಗಿದೆ. ಅಲ್ಲದೇ ತ್ಯಾಜ್ಯ ಬೇರ್ಪಡಿಸುವ ಘಟಕ, ಕಸ ಸಾಗಾಣಿಕೆ ವಾಹನ ಖರೀದಿಸಲು ಹಾಗೂ ಪ್ರತಿ ಮನೆಗೆ ಕಸದ ಬುಟ್ಟಿ ಖರೀದಿಸಲು ಪ್ರತಿ ಪಂಚಾಯತಿಗೆ 10 ಲಕ್ಷ ರೂ.ಗಳಂತೆ ಒಟ್ಟು 150 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಉದ್ಯೋಗ ಖಾತ್ರಿ ಯೋಜನೆ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪ್ರಸಕ್ತ ಸಾಲಿಗೆ 38.50 ಲಕ್ಷ ಮಾನವ ಗುರಿ ಪೈಕಿ 23.37 ಲಕ್ಷ ಸೃಜನೆ ಮಾಡಿ ಶೇ.60.17 ಪ್ರಗತಿ ಸಾಧಿಸಲಾಗಿದೆ. ಅಕ್ಟೋಬರ್‌ ಮಾಹೆಯಲ್ಲಿ 19.75 ಲಕ್ಷ ಗುರಿಗೆ ಶೇ.118.34 ಪ್ರಗತಿ ಸಾಧಿಸಿ ರಾಜ್ಯಕ್ಕೆ 8ನೇ ಸ್ಥಾನದಲ್ಲಿರುವುದಾಗಿ ತಿಳಿಸಿದರು. ಕಳೆದ ಜೂನ್‌ ಮತ್ತು ಜುಲೈ ಮಾಹೆಯಲ್ಲಿ 4ನೇ ಸ್ಥಾನ ಪಡೆದುಕೊಂಡಿತ್ತು ಎಂದು ತಿಳಿಸಿದರು.

ಮಾತೃಪೂರ್ಣ ಯೋಜನೆ: ಗರ್ಭಿಣಿ ಮತ್ತು ಬಾಣಂತಿಯರಿಗೆ ಮಧ್ಯಾಹ್ನ ಪೌಷ್ಟಿಕ ಬಿಸಿ ಊಟ ನೀಡುವ ಯೋಜನೆ ಇದಾಗಿದ್ದು, ಜಿಲ್ಲೆಯಲ್ಲಿ 2,221 ಅಂಗನವಾಡಿ ಕೇಂದ್ರಗಳಲ್ಲಿ ಒಟ್ಟು 20,0166 ಗರ್ಭಿಣಿಯರು ಹಾಗೂ 19,508 ಬಾಣಂತಿಯರು ನೋಂದಾಯಿಸಿಕೊಂಡಿದ್ದು, ಪ್ರಯೋಜನ ಪಡೆಯುತ್ತಿದ್ದಾರೆ. ಕಳೆದ 10 ತಿಂಗಳಲ್ಲಿ ಯೋಜನೆ ಅನುಷ್ಠಾನದಲ್ಲಿ ರಾಜ್ಯಕ್ಕೆ ಮೊದಲನೇ ಸ್ಥಾನ ಪಡೆದುಕೊಂಡಿತ್ತು ಎಂದರು.

Advertisement

ಮಾತೃವಂದನಾ, ಮಾತೃಶ್ರೀ ಯೋಜನೆ: ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯಡಿ 5 ಸಾವಿರ ರೂ. ಸಹಾಯಧನ ಗರ್ಭಿಣಿಯರಿಗೆ ಮೂರು ಹಂತಗಳಲ್ಲಿ ಸಹಾಯಧನ ನೀಡಲಾಗುತ್ತಿದೆ. ಆ.30ರವರೆಗೆ ಒಟ್ಟು 5,578 ಫಲಾನುಭವಿಗಳು ನೋಂದಾಯಿಸಿದ್ದು, ಶೇ.93.72 ಪ್ರಗತಿ ಸಾಧಿಸಲಾಗಿದೆ. ಇಲ್ಲಿವರೆಗೆ 9.36 ಕೋಟಿ ರೂ. ನೀಡಲಾಗಿದೆ ಎಂದರು.

ಮುಖ್ಯಮಂತ್ರಿ ಮಾತೃಶ್ರೀ ಯೋಜನೆಯಡಿ ಆದ್ಯತಾ ಕುಟುಂಬದ ಗರ್ಭಿಣಿ, ಬಾಣಂತಿಯರಿಗೆ ಸೌಲಭ್ಯ ಒದಗಿಸಲಾಗುತ್ತಿದೆ. ಹೆರಿಗೆ ಪೂರ್ವದ 3 ತಿಂಗಳು ಹಾಗೂ ಬಾಣಂತಿಯರಿಗೆ ಹೆರಿಗೆ ನಂತರದ 3 ತಿಂಗಳ ಕಾಲ ಮಾಸಿಕ 1 ಸಾವಿರ ರೂ. ನೀಡಲಾಗುತ್ತದೆ. ಈ ಯೋಜನೆ ಮೊದಲ ಎರಡು ಮಕ್ಕಳಿಗೆ ಮಾತ್ರ ಅನ್ವಯವಾಗುತ್ತಿದೆ. ಇಲ್ಲಿವರೆಗೆ 10,225 ಫಲಾನುಭವಿಗಳು ಇದರ ಪ್ರಯೋಜನ ಪಡೆದು ಶೇ.95.16 ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದರು. ಜಿಪಂ ಯೋಜನಾ ನಿರ್ದೇಶಕ ವಿ.ಎಸ್‌. ಹಿರೇಮಠ ಉಪಸ್ಥಿತರಿದ್ದರು.

ಪ್ರತಿಯೊಂದು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿ ಊಟದ ನಂತರ ಉಳಿದ ಆಹಾರ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಪರಿವರ್ತಿಸಲು ಸ್ವತ್ಛ ಭಾರತ ಅಭಿಯಾನದಡಿ ಪೈಪ್‌ ಕಾಂಪೋಸ್ಟ್‌ ತಗ್ಗುಗಳ ಘಟಕಗಳನ್ನು ಅನುಷ್ಠಾನಗೊಳಿಸಲು ಕ್ರಮ ಜರುಗಿಸಲಾಗುತ್ತಿದೆ. ಗ್ರಾ.ಪಂನಿಂದ ಈಗಾಗಲೇ 2 ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಗೊಬ್ಬರ ತಯಾರಿಸಿ ತೋರಿಸಲಾಗಿದೆ. ಇದಕ್ಕೆ ತಗಲುವ ವೆಚ್ಚ ಭರಿಸಲು ಆಯಾ ಶಾಲೆಯ ಎಸ್‌ಡಿಎಂಸಿ ಮೂಲಕ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಲಾಗಿದೆ. ಗಂಗೂಬಾಯಿ ಮಾನಕರ, ಜಿಪಂ ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next