ಚಾಮರಾಜನಗರ: ಉಪ್ಪಾರ ಸಮಾಜದ 88 ಗಡಿಮನೆ ಹಾಗೂ ಕಟ್ಟೆಮನೆಯ ಯಜಮಾನರು ಭಾನುವಾರ ಸಭೆ ಸೇರಿ, ತಮ್ಮ ಸಮಾಜದಲ್ಲಿರುವ ಬಾಲ್ಯ ವಿವಾಹ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಮಹತ್ವದ ನಿರ್ಣಯ ಕೈಗೊಂಡರು.
ಸಮೀಪದ ಮಂಗಲ ಗ್ರಾಮದ ಶಂಕರೇಶ್ವರ ಬೆಟ್ಟದ ಸಮೀಪ ಶ್ರೀ ಮಂಜುನಾಥ ಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಉಪ್ಪಾರ ಸಮುದಾಯಲ್ಲಿ ಬಾಲ್ಯವಿವಾಹ ಜೀವಂತವಾಗಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಉಪ್ಪಾರ ಸಮುದಾಯದ 88 ಗಡಿ, ಕಟ್ಟೆಮನೆಗಳ ಸ್ವಾಮೀಜಿ ಶ್ರೀ ಮಂಜುನಾಥ ಸ್ವಾಮಿ, ಈ ಪಿಡುಗನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಬಗ್ಗೆ ಸಮುದಾಯ ಸಂಕಲ್ಪ ಮಾಡಬೇಕು ಎಂದು ಸಲಹೆ ನೀಡಿದರು.
ಅನಿಷ್ಟ ಪದ್ಧತಿಯಿಂದ ಹೊರ ಬನ್ನಿ: ಸಮುದಾಯದವರು ಮೂಢನಂಬಿಕೆ, ಅಜ್ಞಾನಗಳಿಂದ ಹೊರ ಬರಬೇಕು. ಬಾಲ್ಯದಲ್ಲೇ ಹೆಣ್ಣು ಮಕ್ಕಳನ್ನು ವಿವಾಹ ಮಾಡುವ ಅನಿಷ್ಟ ಪದ್ಧತಿಯಿಂದ ಹೊರಬರಬೇಕು. 18 ವರ್ಷ ತುಂಬುವವರೆಗೂ ಯಾವುದೇ ಕಾರಣಕ್ಕೂ ಮದುವೆ ಮಾಡುವ ನಿರ್ಧಾರ ಕೈಗೊಳ್ಳಬಾರದು. ಈ ಸಂಬಂದ ಸಮುದಾಯದ ಯಜಮಾನರು, ಮುಖಂಡರು ಹಾಗೂ ಪೋಷಕರ ಸಮ್ಮುಖದಲ್ಲಿ ತೆಗೆದುಕೊಂಡಿರುವ ನಿರ್ಣಯಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ಸೂಚಿಸಿದರು.
ಬಾಲ್ಯ ವಿವಾಹ ಕಾನೂನಿಗೆ ವಿರುದ್ಧ: ಬಾಲ್ಯ ವಿವಾಹದಿಂದ ಹೆಣ್ಣು ಮಕ್ಕಳ ಮೇಲೆ ಅನೇಕ ದುಷ್ಪರಿಣಾಮಗಳು ಉಂಟಾಗಲಿದೆ. ಜೊತೆಗೆ ಕಾನೂನಿಗೂ ವಿರುದ್ಧವಾಗಿದೆ. ಆದ್ದರಿಂದ ಇಂತಹ ಅನಿಷ್ಟ ಪದ್ಧತಿಗೆ ಮೊರೆ ಹೋಗುವುದನ್ನು ಬಿಟ್ಟು, ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಶಿಕ್ಷಣದ ಮೂಲಕ ಅವರಲ್ಲಿ ಜ್ಞಾನ ಮೂಡಿಸಬೇಕು. ಹಾಗಾದಾಗ ಮಾತ್ರ ಜಾಗೃತಿ ಉಂಟಾಗಿ ಒಳಿತು, ಕೆಡಕಿನ ಬಗ್ಗೆ ಅರಿವು ಮೂಡಲಿದೆ ಎಂದು ಹೇಳಿದರು.
ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ: ಶಿಕ್ಷಣದಿಂದ ಮಾತ್ರ ಉಪ್ಪಾರ ಸಮಾಜವನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಮೇಲೆತ್ತಲು ಸಾಧ್ಯ. ಆದ್ದರಿಂದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ಮದುವೆಯಾಗುವ ಹುಡುಗಿಗೆ 18 ವರ್ಷ ತುಂಬಿರಬೇಕು. ಈ ಕುರಿತು ಶಾಲಾ ದಾಖಲಾತಿ ಮತ್ತು ಜನನ ಪ್ರಮಾಣ ಪತ್ರದ ಆಧಾರದ ಮೇಲೆ ಕಾನೂನು ಬದ್ಧವಾಗಿ ವಿವಾಹ ಮಾಡಬೇಕಾಗುತ್ತದೆ. ಈ ಕುರಿತು ಸಮಾಜದಲ್ಲಿರುವ ಸಂಘಟನೆಗಳು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸ್ವಾಮೀಜಿ ತಿಳಿಸಿದರು.
ಮೂಢನಂಬಿಕೆ, ಬಾಲ್ಯವಿವಾಹಗಳಂತಹ ಸಾಮಾಜಿಕ ಪಿಡುಗಿನಿಂದ ಹೊರ ಬರಲು ಉಪ್ಪಾರ ಸಮಾಜದ ಗಡಿ ಯಜಮಾನರು, ಕುಲಸ್ಥರು ತಿಳಿವಳಿಕೆ ನೀಡಬೇಕು. ಮುಂದೆ ಯಾವುದೇ ಬಾಲ್ಯ ವಿವಾಹಗಳು ನಡೆಯದಂತೆ ನಿರ್ಮೂಲನೆ ಮಾಡಿ, ಅವರಲ್ಲಿ ಶಿಕ್ಷಣ ಕೊಡಿಸುವಂತಹ ಉತ್ತಮ ನಿರ್ಧಾರಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಂಗಲ ಗ್ರಾಮದ ಉಪ್ಪಾರ ಸಮಾಜದ ನೂತನ ಪೀಠಾಧ್ಯಕ್ಷರಾದ ಶ್ರೀಪುರುಷೋತ್ತಮ ಸ್ವಾಮೀಜಿ ಅವರನ್ನು ಮುಖಂಡರು ಅಭಿನಂದಿಸಿದರು. ಅಯ್ಯನಸರಗೂರು ಮಠದ ಚಿನ್ನಸ್ವಾಮೀಜಿ, ಮುಖಂಡರಾದ ಮಂಗಲ ಶಿವಕುಮಾರ್ ಹನುಮಂತಶೆಟ್ಟಿ, ಗೋವಿಂದರಾಜು ಗಡಿಯಾಜಮಾನ ಕೃಷ್ಣ, ಜಯಸ್ವಾಮಿ ಕ್ಯಾತಶಟ್ಟರು ಶಿವಣ್ಣ ಮಹದೇವಸ್ವಾಮಿ, ಅಣ್ಣಪ್ಪಸ್ವಾಮಿ ಕೆ.ಟಿ ನಾಗಶೆಟ್ಟಿ, ರೇವಣ್ಣ ಮಹಾಲಿಂಗಸ್ವಾಮಿ ಸೇರಿದಂತೆ 88 ಗಡಿ-ಕಟ್ಟಮನೆ ಯಜಮಾನರು ಹಾಗೂ ಕುಲಸ್ಥರು ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.