ಬಾಗಲಕೋಟೆ: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಈ ಬಾರಿ ಕೋವಿಡ್ -1 ಹಿನ್ನೆಲೆಯಲ್ಲಿ ಸುರಕ್ಷಿತ ಕ್ರಮಗಳೊಂದಿಗೆ ಸರಳವಾಗಿ ಡಾ|ಸರ್ವೇಪಲ್ಲಿ ರಾಧಾಕೃಷ್ಣನ್ ಜಯಂತಿ ಅಂಗವಾಗಿ ಶಿಕ್ಷಕರ ದಿನಾಚರಣೆಯನ್ನು ಆಯೋಜಿಸಲು ಶುಕ್ರವಾರ ನಗರದ ಬಿಆರ್‌ಸಿ ಕೇಂದ್ರದಲ್ಲಿ ನಡೆದ ಜಿಲ್ಲಾ ಹಂತದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
ಡಿಡಿಪಿಐ ಶ್ರೀಶೈಲ ಎಸ್. ಬಿರಾದಾರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಸ್ತುತ ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯ ಹಾಗೂ ಸುರಕ್ಷಾ ದೃಷ್ಟಿಯಿಂದ ಸರ್ಕಾರದ ಮಾರ್ಗಸೂಚಿ ಅನುಸಾರ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು, ಜಿಲ್ಲಾ ಕಾರಿಗಳು, ಜಿಪಂ ಅಧ್ಯಕ್ಷರು, ಜಿಪಂ ಮುಖ್ಯಕಾರ್ಯ ನಿರ್ವಹಣಾಧಿಕಾರಿ, ಡಿಡಿಪಿಐ ಆಡಳಿತ ಅವರನ್ನು ಜಿಲ್ಲಾ ಮಟ್ಟದ ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿ ಗಳನ್ನು, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಮಟ್ಟದ ಅಧ್ಯಕ್ಷರನ್ನು, ಮಾಧ್ಯಮದ ಪ್ರತಿನಿಧಿಗಳನ್ನು ಹಾಗೂ ಪ್ರಶಸಿ ಪುರಸ್ಕೃತ ಶಿಕ್ಷಕರನ್ನು ಜಿಲ್ಲಾ ಹಂತದ ಕಾರ್ಯಕ್ರಮಕ್ಕೆ ಆಹ್ವಾನಿಸಲು ನಿರ್ಧರಿಸಲಾಯಿತು. ಸಮಾರಂಭದ ಎಲ್ಲ ಹಂತಗಳಲ್ಲಿಯೂ ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸುವುದು, ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರೂ ಪ್ರವೇಶ ದ್ವಾರದಲ್ಲಿಯೇ ಥರ್ಮಲ್ ಸ್ಕ್ರೀನಿಂಗ್‌ಗೆ ಒಳಗಾಗುವುದು, ಮಾಸ್ಕ್ ಧರಿಸುವುದು ಕಡ್ಡಾಯವಾಗಿರುತ್ತದೆ. ಯಾವ ಹಂತಗಳಲ್ಲಿಯೂ ಸಹ ಮಕ್ಕಳು ಭಾಗವಹಿಸುವಂತಿಲ್ಲ, ನಾಡಗೀತೆ ಮತ್ತು ರೈತ ಗೀತೆ ಎಲ್ಲವನ್ನೂ ಶಿಕ್ಷಕರೇ ಹಾಡುವುದು ಎಂದೂ ನಿರ್ಧರಿಸಲಾಯಿತು.
ತಾಲೂಕು ಹಂತದ ಸಮಾರಂಭಗಳಲ್ಲಿಯೂ ಮೇಲಿನ ಮಾರ್ಗಸೂಚಿ ಅನುಸರಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಲು ತಿಳಿಸಲಾಯಿತು. ಪ್ರತಿ ಶಾಲೆಯಲ್ಲಿ ಶಾಲಾ ಮುಖ್ಯಸ್ಥರು, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಮತ್ತು ಎಲ್ಲಾ ಶಿಕ್ಷಕರು ಸೇರಿ ಡಾ| ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸೂಚಿಸಿ ಸರಳವಾಗಿ ಶಿಕ್ಷಕರ ದಿನಾಚರಣೆ ಆಯೋಜಿಸಲು ಡಿಡಿಪಿಐ ಎಸ್.ಎಸ್. ಬಿರಾದಾರ ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಬಿಇಒ ಪಿ.ಬಿ. ಹಿರೇಮಠ, ಶಿಕ್ಷಣಾಧಿಕಾರಿ ಅಶೋಕ ಬಸಣ್ಣವರ, ಕ್ಷೇತ್ರ ಸಮನ್ವಾಧಿಕಾರಿ ಎಚ್.ಕೆ. ಗುಡೂರ, ಜಿಲ್ಲಾ ನೋಡಲ್ ಡಿ.ಎಂ. ಯಾವಗಲ್ಲ, ತಾಲೂಕು ನೋಡಲ್ ಡಾ|ಎಸ್.ಬಿ. ಹುಲ್ಯಾಳ, ಅಕ್ಷರ ದಾಸೋಹ ಅಧಿಕಾರಿ ಎ.ಎ. ರಾಮತೀರ್ಥ, ಪ್ರಾ.ಶಾ.ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಪಿ. ಬಾಗೇನವರ, ಸಿ.ಬಿ. ಕಲ್ಲೋಳ ಉಪಸ್ಥಿತರಿದ್ದರು.