Advertisement

ಪಂಪ್‌ವೆಲ್‌ –ಪಡೀಲ್‌ ರಸ್ತೆ ಅಭಿವೃದ್ಧಿಗೆ ನಿರ್ಧಾರ

09:14 AM Jun 06, 2020 | mahesh |

ಮಂಗಳೂರು: ಪಂಪ್‌ವೆಲ್‌ನಿಂದ ಪಡೀಲ್‌ವರೆಗೆ ನಗರ ಪ್ರವೇಶಿಸುವ ಪ್ರಮುಖ ರಸ್ತೆಯನ್ನು ಸುಮಾರು 26 ಕೋ. ರೂ. ವೆಚ್ಚದಲ್ಲಿ ಸ್ಮಾರ್ಟ್‌ಸಿಟಿಯಡಿಯಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಸಂಸದ ನಳಿನ್‌ ಕುಮಾರ್‌ಕಟೀಲು ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜರಗಿದ ಸ್ಮಾರ್ಟ್‌ಸಿಟಿ ನಗರ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಾಗಿದೆ.

Advertisement

ಸುಮಾರು 2,800 ಮೀ. ಉದ್ದದ ಈ ರಸ್ತೆಯ ಅಭಿವೃದ್ಧಿ ತುರ್ತು ಅಗತ್ಯವಾಗಿದ್ದು, ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಇದಕ್ಕೆ ಅನುದಾನ ಕಾದಿರಿಸಲಾಗಿದೆ. ಈ ಯೋಜನೆಯಡಿ ಕೈಗೊಂಡಿರುವ ಸ್ಮಾರ್ಟ್‌ ರಸ್ತೆ ಪ್ಯಾಕೇಜ್‌ಗಳಲ್ಲಿ ಹಲವು ಕಡೆಗಳಲ್ಲಿ ರಸ್ತೆ ಅಗಲಗೊಳಿಸುವುದು ಕಷ್ಟವಾದ ಕಾರಣ ಈ ಕಾಮಗಾರಿಗಳಲ್ಲಿ ಉಳಿಕೆಯಾಗುವ ಮೊತ್ತದಲ್ಲಿ ಹೆಚ್ಚುವರಿ ಸಂಪರ್ಕ ರಸ್ತೆಗಳ ಅಭಿವೃದ್ಧಿ ಕೈಗೊಳ್ಳಲು ನಿರ್ಧರಿಸಲಾಗಿದೆ.

ಆರ್ಥಿಕ ಸಂಪನ್ಮೂಲ ಸದೃಢಗೊಳಿಸಿ: ನಳಿನ್‌
ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ಮಂಗಳೂರು ನಗರದ ಅಭಿವೃದ್ಧಿಗೆ ಕೇಂದ್ರ-ರಾಜ್ಯ ಸರಕಾರಗಳಿಂದ ವಿವಿಧ ಯೋಜನೆಗಳಡಿ ಬೃಹತ್‌ ಮೊತ್ತದ ಅನುದಾನವೇ ಪಾಲಿಕೆಗೆ ಬಂದಿದೆ. ಆದರೂ, ತೆರಿಗೆ ಸಹಿತ ಪಾಲಿಕೆಯ ಆಂತರಿಕ ಸಂಪನ್ಮೂಲ ಸಂಗ್ರಹ ಉತ್ತಮವಾಗಿಲ್ಲ. ಈ ಹಿನ್ನೆಲೆಯಲ್ಲಿ ಪಾಲಿಕೆಯು ತನ್ನ ಆಂತರಿಕ ಹಣಕಾಸು ವ್ಯವಸ್ಥೆಯನ್ನು ಸದೃಢಗೊಳಿಸಬೇಕಿದೆ. ತೆರಿಗೆ ಸಂಗ್ರಹವನ್ನು ಹೆಚ್ಚು ಶಿಸ್ತಿನಿಂದ ನಡೆಸಬೇಕು. ದೀರ್ಘ‌ಕಾಲದಿಂದ ಬಾಕಿ ಇರುವ ಎಲ್ಲ ಶುಲ್ಕ ಹಾಗೂ ತೆರಿಗೆಗಳನ್ನು ನಿರ್ದಾಕ್ಷಿಣ್ಯವಾಗಿ ಸಂಗ್ರಹಿಸಿ, ತನ್ನ ಆರ್ಥಿಕ ಸಂಪನ್ಮೂಲವನ್ನು ಸದೃಢಗೊಳಿಸಬೇಕು. ಸಾರ್ವಜನಿಕ ಸೇವೆಯನ್ನು ಜನಸ್ನೇಹಿಯಾಗಿಸಬೇಕು ಎಂದು ಹೇಳಿದರು.

ಪಂಪ್‌ವೆಲ್‌ನಲ್ಲಿ ಪಿ.ಪಿ.ಪಿ. ಮಾದರಿ ಯಡಿ ಅತ್ಯಾಧುನಿಕ ಬಸ್‌ ನಿಲ್ದಾಣ ನಿರ್ಮಾ ಣಕ್ಕೆ ಈಗಾಗಲೇ ಟೆಂಡರ್‌ ಕರೆಯಲಾಗಿದೆ. ಟೆಂಡರ್‌ ಸಲ್ಲಿಸಲು ಜು.27ರ ವರೆಗೆ ಕಾಲಾವಕಾಶ ಇದೆ. ಸ್ಟೇಟ್‌ಬ್ಯಾಂಕ್‌ ಬಳಿ ಇರುವ ಸರ್ವಿಸ್‌ ಬಸ್‌ ನಿಲ್ದಾಣ ನವೀಕರಣ ಕಾಮಗಾರಿಯೂ ಅಗತ್ಯವಿದೆ. ಈ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳಲು ಸಂಸದರು ಸೂಚಿಸಿದರು. ಕ್ಲಾಕ್‌ಟವರ್‌ನಿಂದ ಎ.ಬಿ. ಶೆಟ್ಟಿ ವೃತ್ತದವರೆಗೆ ಏಕಮುಖ ರಸ್ತೆ ಪ್ರಾಯೋಗಿಕವಾಗಿ ಸಾಧುವಲ್ಲ ಎಂದು ನಳಿನ್‌ ಕುಮಾರ್‌ ತಿಳಿಸಿದರು.

ಹೆರಿಟೇಜ್‌ ವಿನ್ಯಾಸವಿಲ್ಲ
ಡಿಸಿ ಕಚೇರಿಯ ಹಳೆ ಕಟ್ಟಡ ಗಳನ್ನು ಹೆರಿಟೇಜ್‌ ವಿನ್ಯಾಸದಂತೆ ಅಭಿವೃದ್ಧಿ ಪಡಿಸುವ ಪ್ರಸ್ತಾವವನ್ನು ಕೈಬಿಡಲು ನಿರ್ಧರಿ ಸಲಾಯಿತು. ಅಲ್ಲದೆ ಕಾರ್‌ಸ್ಟ್ರೀಟ್‌ ಪುನರ್‌ ನಿರ್ಮಾಣ/ ಪುನಶ್ಚೇತನ ಅಡಿ ವೆಂಕಟ ರಮಣ ದೇವಸ್ಥಾನ ಜಂಕ್ಷನ್‌ ಅನ್ನು ವಿಶೇಷ ವಿನ್ಯಾಸದಲ್ಲಿ ಅಭಿವೃದ್ಧಿಪಡಿಸಲು ತೀರ್ಮಾ ನಿಸಲಾಯಿತು. ಹಂಪನಕಟ್ಟೆ ಹಳೆ ಸರ್ವಿಸ್‌ ಬಸ್‌ ನಿಲ್ದಾಣದಲ್ಲಿ ಬಹುಮಹಡಿ ಪಾರ್ಕಿಂಗ್‌ ಕಟ್ಟಡ ನಿರ್ಮಾಣ ಪ್ರಕ್ರಿಯೆ ಶೀಘ್ರವೇ ಆರಂಭಿಸಲು ನಿರ್ಧರಿಸಲಾಯಿತು.

Advertisement

9 ರಸ್ತೆ ಅಭಿವೃದ್ಧಿಗೆ ಅನುಮೋದನೆ
ನಗರದ ಕೇಂದ್ರ ವ್ಯಾಪ್ತಿಯಲ್ಲಿ 9 ರಸ್ತೆಗಳನ್ನು ಅಭಿವೃದ್ಧಿಪಡಿಸಲು ಪಾಲಿ ಕೆಯು ಸ್ಮಾಟ್‌ಸಿಟಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಸುಮಾರು 20.50 ಕೋ. ರೂ.ವೆಚ್ಚದಲ್ಲಿ ಅಭಿವೃದ್ಧಿ ಗೊಳಿಸಲು ಅನುಮೋದನೆ ನೀಡಲಾಯಿತು. ಅಲ್ಲದೆ 18.13 ಕೋ. ರೂ. ವೆಚ್ಚದಲ್ಲಿ ಅಭಿವೃದ್ಧಿಗೆ ಈಗಾಗಲೇ ಅನುಮೋದನೆ ನೀಡಿರುವ ಬೆಂಗರೆ ಫೆರಿ ರಸ್ತೆ, ಬೆಂಗರೆ ಫಿಶರೀಶ್‌ ರಸ್ತೆ, ಮುಳಿಹಿತ್ಲು ರಸ್ತೆ ಹಾಗೂ ಗುಜ್ಜರಕೆರೆ ರಸ್ತೆಗಳನ್ನು ಈಗಾಗಲೇ ಬೇರೆ ಇಲಾಖೆಗಳು ಅಭಿವೃದ್ಧಿ ಪಡಿಸಿರುವುದರಿಂದ ಆ ಯೋಜನೆಗಳನ್ನು ಕೈಬಿಡಲು ತೀರ್ಮಾನಿಸಲಾಯಿತು.

ಗುಜ್ಜರಕೆರೆಯನ್ನು 4 ಕೋ. ರೂ. ಹಾಗೂ ಕಾವೂರು ಕೆರೆಯನ್ನು 8 ಕೋ. ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗು ವುದು. ಕದ್ರಿ ಉದ್ಯಾನವನ ವನ್ನು 12 ಕೋ. ರೂ. ವೆಚ್ಚದಲ್ಲಿ ಸಮಗ್ರ ವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಎಮ್ಮೆಕೆರೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈಜು ಕೊಳ ನಿರ್ಮಾಣ ಹಾಗೂ ಸಮುದಾಯ ಮಟ್ಟದ ಸೌಲಭ್ಯಗಳ ಅಭಿವೃದ್ಧಿಗೆ 24.94 ಕೋ.ರೂ. ವಿನಿಯೋಗಿಸಲಾಗುವುದು ಎಂದು ಸ್ಮಾರ್ಟ್‌ಸಿಟಿ ವ್ಯಸ್ಥಾಪಕ ನಿರ್ದೇಶಕ ಮಹಮ್ಮದ್‌ ನಝೀರ್‌ ತಿಳಿಸಿದರು.

ಮಂಗಳಾ ಕ್ರೀಡಾಂಗಣದಲ್ಲಿ 10 ಕೋ. ರೂ. ವೆಚ್ಚದಲ್ಲಿ ಉನ್ನತೀಕರಣ ಹಾಗೂ ಸೆಂಟ್ರಲ್‌ ಮಾರುಕಟ್ಟೆಯನ್ನು 145 ಕೋ. ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು.ಪಾಲಿಕೆ ವ್ಯಾಪ್ತಿಯಲ್ಲಿ 24×7 ನೀರು ಸರಬರಾಜು ಅನುಷ್ಠಾನಕ್ಕೆ ವಿತರಣೆ ವ್ಯವಸ್ಥೆಗೆ 114 ಕೋ.ರೂ . ವೆಚ್ಚ ಮಾಡಲಾಗುವುದು ಎಂದರು. ಜಿಲ್ಲಾಧಿ ಕಾರಿ ಸಿಂಧೂ ಬಿ.ರೂಪೇಶ್‌, ಪಾಲಿಕೆ ಉಪ ಆಯುಕ್ತ ಸಂತೋಷ್‌ ಕುಮಾರ್‌, ಸ್ಮಾರ್ಟ್‌ಸಿಟಿ ಸಲಹಾ ಸಮಿತಿ ಸದಸ್ಯರಿದ್ದರು.

ಪ್ರತಿ ವಾರ ಸಭೆ ಶಾಸಕ ಕಾಮತ್‌
ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ನಗರದಲ್ಲಿ ರಸ್ತೆ ಅಭಿವೃದ್ಧಿಗಿಂತಲೂ ರಸ್ತೆ ಅಗಲೀಕರಣ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ತಾನು ಪ್ರತಿ ವಾರ ಸಭೆ ನಡೆಸಿ, ರಸ್ತೆ ಅಗಲೀಕರಣ ಅಗತ್ಯ ಇರುವ ಕಡೆಗಳಲ್ಲಿ ಅಡೆತಡೆಗಳನ್ನು ನಿವಾರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next