Advertisement

ಸಾಲ ಮನ್ನಾ ಪ್ರಸ್ತಾವನೆಗೆ ನಿರ್ಧಾರ

02:27 PM Jun 24, 2017 | Team Udayavani |

ಧಾರವಾಡ: ಬರದಿಂದ ತತ್ತರಿಸಿ ಹೋಗಿರುವ ರೈತರ ರಾಷ್ಟ್ರೀಕೃತ ಬ್ಯಾಂಕ್‌ನ 2 ಲಕ್ಷ ರೂ.ವರೆಗಿನ ಸಾಲ ಮನ್ನಾ ಮಾಡುವಂತೆ ಕೋರಿ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಧಾರವಾಡ ತಾಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. 

Advertisement

ಇಲ್ಲಿಯ ತಾಪಂ ಸಭಾಂಗಣದಲ್ಲಿ ತಾಪಂ ಅಧ್ಯಕ್ಷ ಮಲ್ಲಪ್ಪ ಭಾವಿಕಟ್ಟಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ತಾಪಂ ಸದಸ್ಯರೆಲ್ಲರ ಒಮ್ಮತದ ನಿರ್ಣಯದ ಮೇರೆಗೆ ಧಾರವಾಡ ತಾಲೂಕಿನ ರೈತರ 2 ಲಕ್ಷ ರೂ. ವರೆಗಿನ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಮಾಡುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಯಿತು. 

ಮುಂಗಾರಿನ ಹಂಗಾಮಿನಲ್ಲಿ ವಾಡಿಕೆ ಮಳೆಗಿಂತ ಶೇ.52ರಷ್ಟು ಮಳೆಯ ಕೊರತೆ ಹಿನ್ನೆಲೆಯಲ್ಲಿ ಈವರೆಗೆ ಶೇ.10ರಷ್ಟು ಮಾತ್ರವೇ ಬಿತ್ತನೆ ಆಗಿರುವ ಬಗ್ಗೆ ಮಾಹಿತಿ ಪಡೆದ ಸಭೆಯು, ಮಳೆಯ ಕೊರತೆ ನೀಗಿಸಲು ಈ ಭಾಗದಲ್ಲಿ ಮೋಡ ಬಿತ್ತನೆ ಮಾಡುವಂತೆ ಕೃಷಿ ಇಲಾಖೆ ಮೂಲಕ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಒಮ್ಮತದಿಂದ ನಿರ್ಧಾರ ಕೈಗೊಳ್ಳಲಾಯಿತು. 

ಶೇ.10ರಷ್ಟೇ ಬಿತ್ತನೆ: ವಾಡಿಕೆ ಮಳೆ ಪ್ರಮಾಣದಂತೆ 279 ಮೀ.ಮೀ. ನಷ್ಟು ಮಳೆ ಆಗಬೇಕಿತ್ತು. ಆದರೆ ಈವರೆಗೆ 130 ಮಿ.ಮೀ. ಮಳೆ ಆಗುವ ಮೂಲಕ ಶೇ.52ರಷ್ಟು ಮಳೆಯ ಕೊರತೆ ಆಗಿದೆ. ಇದರಿಂದ ಧಾರವಾಡ ತಾಲೂಕಿನಲ್ಲಿ 57,300 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಆಗುವ ಬದಲು 5370 ಹೆಕ್ಟೇರ್‌ ಪ್ರದೇಶದಲ್ಲಿ ಅಷ್ಟೇ ಬಿತ್ತನೆ ಆಗಿದೆ. ಬಿತ್ತನೆ ಆಗಿರುವ ಬೆಳೆಯೂ ಮಳೆ ಇಲ್ಲದೇ ಒಣಗುವ ಸ್ಥಿತಿ ತಲುಪಿವೆ.

ಒಟ್ಟಿನಲ್ಲಿ ಶೇ.10ರಷ್ಟೇ ಬಿತ್ತನೆ ಆಗಿದ್ದು, ರೈತರು ಅಂತೂ ಬಿತ್ತನೆಗೆ ಬೀಜ ಖರೀದಿಸಿ ಮನೆಯಲ್ಲಿ ತಂದು ಇಟ್ಟುಕೊಂಡಿದ್ದು, ಮಳೆಯ ನಿರೀಕ್ಷೆಯಲ್ಲಿ ಇದ್ದಾರೆ ಎಂಬ ಮಾಹಿತಿಯನ್ನು ಕೃಷಿ ಇಲಾಖೆ ಅಧಿಕಾರಿಗಳು ಸಭೆಯ ಮುಂದಿಟ್ಟರು. ಇದಕ್ಕೆ ಧ್ವನಿಗೂಡಿಸಿ ತಾಪಂ ಸದಸ್ಯರು, ಮಳೆಯ ನಿರೀಕ್ಷೆಯಲ್ಲಿ ಇರುವ ರೈತರ ಸಂಕಷ್ಟ ಪರಿಹರಿಸಲು ಮೋಡ ಬಿತ್ತನೆ ಆಗಬೇಕಿದ್ದು, ಅದಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಒಮ್ಮತದಿಂದ ಕೃಷಿ ಇಲಾಖೆಗೆ ಸೂಚಿಸಿದರು. 

Advertisement

ಕೃಷಿ ಅಧಿಕಾರಿಯ ಬದಲಾವಣೆ: ಅಮ್ಮಿನಬಾವಿಯ ಹೋಬಳಿಯ ಕೃಷಿ ಅಧಿಕಾರಿ ವಂದನಾ ಪೂಜಾರಿ ಕಾರ್ಯ ನಿರ್ವಹಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯರು, ಈ ಅಧಿಕಾರಿಯನ್ನು ಬದಲಾವಣೆ ಮಾಡುವಂತೆ ಒತ್ತಾಯಿಸಿದಾಗ, ತಾಪಂ ಅಧ್ಯಕ್ಷರು ಹಾಗೂ ಇಒ ಅಧಿಕಾರಿ ಬದಲಾವಣೆಗೆ ಸೂಚಿಸಿದರು. 

ಏಜೆಂಟರ್‌ ಹಾವಳಿಗೆ ಕಡಿವಾಣ: ಕಂದಾಯ ಇಲಾಖೆಯಲ್ಲಿ ಹೆಚ್ಚುತ್ತಿರುವ ಏಜೆಂಟರ್‌ ಹಾವಳಿ ಬಗ್ಗೆ ತಹಶೀಲ್ದಾರ ಪ್ರಕಾಶ ಕುದರಿ ಅವರ ಗಮನ ಸೆಳೆದ ಸದಸ್ಯರು, ನಾಡಕಚೇರಿ ಸೇರಿದಂತೆ ಕಂದಾಯ ಇಲಾಖೆಯಲ್ಲಿ ಎಲ್ಲದಕ್ಕೂ ಏಜೆಂಟರ್‌ ಹಾವಳಿ ಹೆಚ್ಚಿದೆ. ಇದಕ್ಕೂ ಇಲಾಖಾ ಅಧಿಕಾರಿಗಳು ಕೈ ಜೋಡಿಸಿದ್ದು, ಏಜೆಂಟರ್‌ ಈ ಹಾವಳಿ ತಪ್ಪಿಸುವಂತೆ ಆಗ್ರಹಿಸಿದರು. 

ಇದಕ್ಕೆ ಸ್ಪಂದಿಸಿದ ತಹಶೀಲ್ದಾರ್‌, ಈ ವಿಷಯ ಈಗಾಗಲೇ ನನ್ನ ಗಮನಕ್ಕೆ ಬಂದಿದೆ. ಏಜೆಂಟರ್‌ ಎಷ್ಟಿದ್ದಾರೆ ಎಂಬ ಮಾಹಿತಿ ಕಲೆ ಹಾಕಲು ಸೂಚಿಸಿದ್ದು, ಸರ್ವೇ ಮಾಡಲಾಗುತ್ತಿದೆ. ಇದು ಮುಗಿದ ಬಳಿಕ ಏಜೆಂಟರ್‌ ಹಾವಳಿ ಕಡಿವಾಣ ಹಾಕಲಾಗುವುದು ಎಂದು ಭರವಸೆ ನೀಡಿದರು. 

ವಾಟ್ಸಪ್‌ ಗ್ರೂಪ್‌ ರಚನೆಗೆ ಸೂಚನೆ: ಧಾರವಾಡ ತಾಲೂಕಿನಲ್ಲಿ ಇರುವ ಹಳೆಯ ವಿದ್ಯುತ್‌ ತಂತಿ, ಕಂಬಗಳ ಬದಲಾವಣೆ ಸೇರಿದಂತೆ ಕಾಮಗಾರಿಗಳನ್ನು ಅಗತ್ಯಕ್ಕೆ ಅನುಸಾರವಾಗಿ ಡಿಸೆಂಬರ್‌ ಅಂತ್ಯದೊಳಗೆ ಪರಿಹರಿಸಬೇಕು. ಇದಲ್ಲದೇ ಹೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಸಮಸ್ಯೆಗಳ ಶೀಘ್ರ ಪರಿಹಾರಕ್ಕಾಗಿ ಅಧಿಕಾರಿಗಳ ಗಮನಕ್ಕೆ ತರಲು ತಾಪಂ ಸದಸ್ಯರು ಹಾಗೂ ಅಧಿಕಾರಿಗಳನ್ನು ಒಳಗೊಂಡ ವಾಟ್ಸಪ್‌ ಗ್ರೂಪ್‌ ರಚಿಸುವಂತೆ ತಾಪಂ ಅಧ್ಯಕ್ಷ ಮಲ್ಲಪ್ಪ ಭಾವಿಕಟ್ಟಿ ಸೂಚಿಸಿದರು.

ಇದಾದ ಬಳಿಕ ಶಿಕ್ಷಣ ಇಲಾಖೆ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ತಾಪಂ ಇಒ ಜಿ.ಡಿ. ಜೋಶಿ, ಉಪಾಧ್ಯಕ್ಷ ಮುತ್ತಪ್ಪ ನಾಯ್ಕರ, ಸ್ಥಾಯಿ ಸಮಿತಿ ಅಧ್ಯಕ್ಷ ಫಕ್ಕೀರಪ್ಪ ಬುಡ್ಡಿಕಾಯಿ ಸೇರಿದಂತೆ ಇಲಾಖೆ ಅಧಿಕಾರಿಗಳು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next