Advertisement

ಐಪಿಎಲ್‌ ಭವಿಷ್ಯ ಮಂಗಳವಾರ ನಿರ್ಧಾರ?

09:59 AM Mar 22, 2020 | Sriram |

ಮುಂಬಯಿ: ಕೋವಿಡ್‌ 19 ಜೋರಾದ ಅನಂತರ ವಿಶ್ವದಲ್ಲಿ ಅತೀ ಹೆಚ್ಚು ತೊಂದರೆಗೊಳಗಾಗಿರುವ ಕ್ರೀಡಾಕೂಟವೆಂದರೆ ಒಲಿಂಪಿಕ್ಸ್‌. ಅದು ರದ್ದಾದರೆ ಏನು ಮಾಡುವುದು ಎಂಬ ತಲೆಬಿಸಿ ಜಪಾನ್‌ ಸಂಘಟಕರದು. ಭಾರತದ ಮಟ್ಟಿಗೆ ಅಂತಹ ತಲೆಬಿಸಿ ಹುಟ್ಟುಹಾಕಿರುವ ಕ್ರೀಡಾಕೂಟ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌.

Advertisement

ಸದ್ಯದ ಸ್ಥಿತಿಯಲ್ಲಿ ಐಪಿಎಲ್‌ ನಡೆಯುವ ಸಾಧ್ಯತೆ ಕಡಿಮೆ. ಸದ್ಯ ಎ. 15ರ ವರೆಗೆ ಕೂಟವನ್ನು ಮುಂದೂಡಲಾಗಿದೆ. ಮುಂದೇನು ಎಂಬ ಬಗ್ಗೆ ಮಾ. 24ರ ಮಂಗಳವಾರ ನಿರ್ಧಾರಕ್ಕೆ ಬರುವ ಸಾಧ್ಯತೆಯಿದೆ. ಅಂದು ಬಿಸಿಸಿಐ ಮತ್ತು 8 ಐಪಿಎಲ್‌ ಫ್ರಾಂಚೈಸಿಗಳ ನಡುವೆ ವೀಡಿಯೊ ಕಾನ್ಫರೆನ್ಸ್‌ ನಡೆಯಲಿದೆ.

ಸದ್ಯ ಬಿಸಿಸಿಐ ರಜೆಯಲ್ಲಿದೆ. ಅದರ ಯಾವುದೇ ಕಚೇರಿಗಳು ತೆರೆದಿಲ್ಲ. ಅದರ ಎಲ್ಲ ಚಟುವಟಿಕೆಗಳು ಮನೆಯಿಂದಲೇ ನಡೆಯುತ್ತಿವೆ. ಆದ್ದರಿಂದ ಹೊಟೇಲ್‌ಗ‌ಳಲ್ಲೂ ಸಭೆ ನಡೆಸಲು ಅವಕಾಶವಿಲ್ಲ. ಪರಿಣಾಮ ಬಿಸಿಸಿಐ ಮೊಬೈಲ್‌ ಮೂಲಕವೇ ಸಭೆ ನಡೆಸಲು ನಿರ್ಧರಿಸಿದೆ. ಎಂಟೂ ಫ್ರಾಂಚೈಸಿಗಳೊಂದಿಗೆ ವರ್ತಮಾನ ಪರಿಸ್ಥಿತಿಯನ್ನು ಬಿಸಿಸಿಐ ಚರ್ಚಿಸಲಿದೆ.

ದಿಢೀರ್‌ ಸಿದ್ಧತೆ ಕಷ್ಟ
ಸದ್ಯ ಹೇಗೆ ನೋಡಿದರೂ ಐಪಿಎಲ್‌ ನಡೆಸುವುದು ಬಿಸಿಸಿಐಗೆ ಕಷ್ಟವಾಗಲಿದೆ. ಮುಚ್ಚಿದ ಬಾಗಿಲಲ್ಲಿ, ಪ್ರೇಕ್ಷಕರಿಗೆ ಪ್ರವೇಶ ನೀಡದೇ ಐಪಿಎಲ್‌ ನಡೆಸುತ್ತೇವೆಂದರೂ ಅದು ಹೇಳಿಕೊಳ್ಳುವಷ್ಟು ಸುಲಭವಿಲ್ಲ. ಎ. 15ರ ವರೆಗೆ ಐಪಿಎಲ್‌ ನಡೆಯುವುದಿಲ್ಲ. ಸದ್ಯ ಅಲ್ಲಿಯವರೆಗೆ ಇಡೀ ದೇಶವೇ ಬಂದ್‌ ಆಗಿರುವ ಸ್ಥಿತಿಯಿದೆ. ಬಿಸಿಸಿಐಗೂ ಬೇರೆ ಯಾವುದೇ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಹೀಗಿರುವಾಗ ಒಮ್ಮೆಲೆ ಎ. 15ರ ನಂತರ ಕೂಟ ನಡೆಸಲು ಸಾಧ್ಯವೇ? ಅದಕ್ಕೆ ಕನಿಷ್ಠ 10 ದಿನ ಪೂರ್ವ ತಯಾರಿ ಬೇಕು. ಆದರೆ ಆ ಹೊತ್ತಿಗೂ ದೇಶದಲ್ಲಿ ಪರಿಸ್ಥಿತಿ ಸುಧಾರಿಸಿರುತ್ತದೆ ಎಂಬ ನಂಬಿಕೆ ಇಲ್ಲ. ಸುಧಾರಿಸಿದ್ದರೂ ಒಮ್ಮೆಲೇ ನಿಯಮಗಳನ್ನು ಸಡಿಲಿಸಿ, ಕೂಟ ನಡೆಸಲು ಕೇಂದ್ರ ಸರಕಾರ ಅನುಮತಿ ನೀಡುವುದು ಕಷ್ಟ. ಒಂದು ಸಣ್ಣ ತಪ್ಪಿನಿಂದ ಮತ್ತೆ ಕೋವಿಡ್‌ 19 ಕಪಿಮುಷ್ಠಿ ಬಿಗಿಗೊಳ್ಳುವ ಎಲ್ಲ ಸಾಧ್ಯತೆ ಇದೆ.

ಜುಲೈಗೆ ಮುಂದೂಡಿಕೆ?
ಸದ್ಯದ ಪರಿಸ್ಥಿತಿಯಲ್ಲಿ ಬಿಸಿಸಿಐಗೆ ಎರಡು ಅವಕಾಶಗಳಿವೆ. ಎಪ್ರಿಲ್‌ ಅಂತ್ಯದ ವೇಳೆ ಕೊರೊನಾ ಹಾವಳಿ ಕಡಿಮೆಯಾದರೆ, ಉಳಿಯುವ 20 ದಿನಗಳಲ್ಲಿ ಸಣ್ಣ ಮಟ್ಟದಲ್ಲಿ ಕೂಟವನ್ನು ನಡೆಸುವುದು. ಆಗ ಪಂದ್ಯಗಳ ಸಂಖ್ಯೆ ಕಡಿಮೆಗೊಳ್ಳುತ್ತದೆ. ಕೂಟದ ಮಾದರಿಯೇ ಬದಲಾಗುತ್ತದೆ. ಈಗಾಗಲೇ ಅಂತಹ ಹಲವು ದಾರಿಗಳನ್ನು ಹುಡುಕಿಕೊಳ್ಳಲಾಗಿದೆ.

Advertisement

ಇನ್ನೊಂದು ದಾರಿಯೆಂದರೆ ಕೂಟವನ್ನು ಮುಂದೂಡುವುದು. ಜುಲೈ-ಸೆಪ್ಟಂಬರ್‌ ತಿಂಗಳಲ್ಲಿ ನಡೆಸುವ ಚಿಂತನೆಯೊಂದು ಶುರುವಾಗಿದೆ. ಇದು ಎಷ್ಟರಮಟ್ಟಿಗೆ ಕಾರ್ಯಸಾಧು ಎನ್ನುವುದು ಖಚಿತವಿಲ್ಲ. ಆ ಹೊತ್ತಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಇರುತ್ತದೆ. ಬೇರೆ ದೇಶಗಳ ಕ್ರಿಕೆಟಿಗರು ಭಾರತಕ್ಕೆ ಬಂದು ಆಡುವುದು ಕಷ್ಟ. ಸ್ವತಃ ಭಾರತಕ್ಕೆ ತನ್ನ ವೇಳಾಪಟ್ಟಿ ಹೊಂದಿಸಿಕೊಳ್ಳುವುದು ಅಸಾಧ್ಯವಾಗಬಹುದು. ಅದಕ್ಕಿಂತ ಮುಖ್ಯವಾಗಿ, ಅಕ್ಟೋಬರ್‌ ತಿಂಗಳಲ್ಲಿ ಟಿ20 ವಿಶ್ವಕಪ್‌ ಇರುತ್ತದೆ. ಇದಕ್ಕೆ ಸಿದ್ಧಗೊಳ್ಳಲು ಎಲ್ಲ ತಂಡಗಳು ಪ್ರಯತ್ನಿಸುತ್ತಿರುವಾಗ, ಐಪಿಎಲ್‌ನಲ್ಲಿ ತೊಡಗಿಸಿಕೊಳ್ಳಲು ಯಾರಿಗೆ ಸಾಧ್ಯ ಎಂಬ ಪ್ರಶ್ನೆ ಎದುರಾಗುತ್ತದೆ.

ರದ್ದುಗೊಳಿಸುವುದೊಂದೇ ದಾರಿ!
ಎಲ್ಲ ರೀತಿಯಿಂದ ನೋಡಿದರೂ ಈ ಬಾರಿಯ ಕೂಟವನ್ನು ರದ್ದು ಮಾಡುವುದೊಂದೇ ಬಿಸಿಸಿಐಗೆ ಉಳಿದಿರುವ ದಾರಿಯಾಗಿದೆ. ಅದರಿಂದ ಆರ್ಥಿಕವಾಗಿ ನಷ್ಟವಾದರೂ, ಅನೇಕ ಸಮಸ್ಯೆಗಳಿಗೆ ತಲೆಯೊಡ್ಡುವುದು ತಪ್ಪುತ್ತದೆ. ದಿಢೀರ್‌ ಸವಾಲುಗಳಿಗೆ ತಲೆ ಕೊಡಬೇಕಾದ, ನಿರಂತರವಾಗಿ ಒತ್ತಡದಲ್ಲೇ ಇರಬೇಕಾದ ಪರಿಸ್ಥಿತಿಯಿಂದ ಹೊರಬರಬಹುದು. ಐಪಿಎಲ್‌ ನಡೆಸುವುದೆಂದರೆ ಒಂದು ವಿಶ್ವಕಪ್‌ ನಡೆಸಿದಷ್ಟೇ ಸವಾಲಿನ ಕೆಲಸ. ಅದನ್ನು ಗಡಿಬಿಡಿಯಲ್ಲಿ ಮಾಡಿದರೆ, ಉಪಯೋಗಕ್ಕಿಂತ ತೊಂದರೆಯೇ ಹೆಚ್ಚಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next