ಚಾಮರಾಜನಗರ: ಮುಂಬರುವ ದಸರಾ ಜಾತ್ರಾ ಮಹೋತ್ಸವದಲ್ಲಿ ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳನ್ನು ಮಾತ್ರ ನೆರವೇರಿಸಿ ಸಾರ್ವಜನಿಕರು ಮತ್ತು ಭಕ್ತಾದಿಗಳಿಗೆ ದರ್ಶನಕ್ಕೆ ಮತ್ತು ಜಾತ್ರೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸದಿರಲು ಪ್ರಾಧಿಕಾರಿದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ದಸರಾ, ದೀಪಾವಳಿ ಮತ್ತು ಕಾರ್ತಿಕ ಮಾಸದ ಹಿನ್ನೆಲೆ ಪ್ರಾಧಿಕಾರದ ಉಪಾಧ್ಯಕ್ಷ ಹಾಗೂ ಸಚಿವ ಸುರೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ಸಭೆಯನ್ನು ಏರ್ಪಡಿಸಲಾಗಿತ್ತು.
ಸಭೆಯಲ್ಲಿ ದಸರಾ ಜಾತ್ರಾ ಮಹೋತ್ಸವದ ಹಿನ್ನೆಲೆ ಚರ್ಚಿಸಿ ಕೋವಿಡ್ ಹೆಚ್ಚಳವಾಗುತ್ತಿರುವ ಮತ್ತು ಕೋವಿಡ್ ನಿಯಮಾವಳಿಗಳನ್ನು ಪಾಲನೆ ಮಾಡಲು ಸಾಧ್ಯವಾಗದಿರುವ ಹಿನ್ನೆಲೆ ಈ ಬಾರಿ ಜಾತ್ರೆಗೆ ಸಾರ್ವಜನಿಕರಿಗೆ ಮತ್ತು ಭಕ್ತಾದಿಗಳಿಗೆ ಅವಕಾಶ ಕಲ್ಪಿಸುವುದು ಸೂಕ್ತವಲ್ಲ ಎಂದು ತೀರ್ಮಾನ ಕೈಗೊಂಡು ಕೇವಲ ಅರ್ಚಕರು ಮತ್ತು ಪ್ರಾಧಿಕಾರದವರು ಸರಳವಾಗಿ ಸಾಂಪ್ರದಾಯಿಕವಾಗಿ ಪೂಜಾ ಕೈಂಕರ್ಯಗಳನ್ನು ನೆರವೇರಿಸುವ ಮೂಲಕ ಜಾತ್ರೆ ನಡೆಸಲು ತೀರ್ಮಾಣ ಕೈಗೊಳ್ಳಲಾಯಿತು.
ಹೆಚ್ಚಿನ ಸಿಬ್ಬಂದಿ ನಿಯೋಜನೆಗೆ ಡಿವೈಎಸ್ಪಿಗೆ ಸೂಚನೆ: ಶನಿವಾರ, ಭಾನುವಾರ, ಸೋಮವಾರ ಮತ್ತು ಸರ್ಕಾರಿ ರಜಾ ಸಂದರ್ಭಗಳಲ್ಲಿ ಶ್ರೀ ಕ್ಷೇತ್ರಕ್ಕೆ ಹೆಚ್ಚಿನ ಭಕ್ತಾದಿಗಳು ಭೇಟಿ ನೀಡುತ್ತಾರೆ. ಈ ವೇಳೆ ಥರ್ಮಲ್ ಸ್ಕ್ರೀನಿಂಗ್, ಸಾಮಾಜಿಕ ಅಂತರ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲು ಸಮಸ್ಯೆಯಾಗುತ್ತಿರುವ ಬಗ್ಗೆ ಚರ್ಚಿಸಿ ಮುಂಬರುವ ದಿನಗಳಲ್ಲಿ ಪ್ರಾಧಿಕಾರದ ಸಿಬ್ಬಂದಿ ಜೊತೆ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಅಗತ್ಯ ಬಂದೋಬಸ್ತ್ ಕೈಗೊಳ್ಳಲು ಸಭೆಯಲ್ಲಿದ್ದ ಡಿವೈಎಸ್ಪಿ ನಾಗರಾಜು ಅವರಿಗೆ ಸಚಿವರು ಸೂಚನೆ ನೀಡಿದರು.
ನಂತರ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‍ಕುಮಾರ್ ಮಲೆ ಮಹದೇಶ್ವರ ಬೆಟ್ಟ ಸುತ್ತಮುತ್ತಲ ಕಾಡಂಚಿನ ಗ್ರಾಮಗಳಾದ ಮೆದಗನಾಣೆ, ಇಂಡಿಗನತ್ತ ಮತ್ತು ತುಳಸಿಕೆರೆ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರಿಂದ ಸಮಸ್ಯೆಗಳ ಕುರಿತು ಅಗತ್ಯ ಮಾಹಿತಿ ಪಡೆದರು.
ಈ ವೇಳೆ ಮೆದಗನಾಣೆ ಗ್ರಾಮದ ಸಾರ್ವಜನಿಕರು ರಸ್ತೆ, ಚರಂಡಿ ವಿದ್ಯುತ್ ಸಮಸ್ಯೆ, ಪಡಿತರ ಹೊತ್ತು ತರಲು ಇರುವ ಸಮಸ್ಯೆ, ಮಕ್ಕಳ ಶಿಕ್ಷಣದ ಬಗೆಗಿನ ತೊಡಕುಗಳ ಬಗ್ಗೆ ಸಮಸ್ಯೆಗಳ ಸುರಿಮಳೆಯನ್ನೇ ಗೈಯ್ದರು. ಈ ವೇಳೆ ಸಚಿವ ಸುರೇಶ್‍ಕುಮಾರ್ ತಮ್ಮ ಸಮಸ್ಯೆಗಳನ್ನು ಅರಿತು ಅವುಗಳನ್ನು ಈಡೇರಿಸಲು ಬಂದಿರುವುದಾಗಿ ತಿಳಿಸಿ ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಇದೇ ವೇಳೆ ಮಾತನಾಡಿ ಮಲೆ ಮಹದೇಶ್ವರ ಬೆಟ್ಟ ಸುತ್ತಮುತ್ತಲ ಅರಣ್ಯದೊಳಗಿನ ಗ್ರಾಮಗಳಿಗೆ ಮುಂದಿನ 30 – 45 ದಿನಗಳೊಳಗಾಗಿ ಅರಣ್ಯ ಇಲಾಖಾವತಿಯಿಂದ ಕಚ್ಛಾ ರಸ್ತೆ ನಿರ್ಮಾಣ ಮಾಡಿ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ತುಳಸಿಕೆರೆ ಗ್ರಾಮದಲ್ಲಿ ಜಿಲ್ಲಾಡಳಿತ, ಅರಣ್ಯ ಇಲಾಖೆ ಮತ್ತು ವಿವಿಧ ಇಲಾಖೆಗಳ ಸಭೆಯಲ್ಲಿ ಮಾತನಾಡಿದ ಸಚಿವ ಸುರೇಶ್ ಕುಮಾರ್ ಕಳೆದ ಸೆ.7ರಂದು ಚಾಮರಾಜನಗರದಲ್ಲಿ ಜರುಗಿದ ರೈತ ಮುಖಂಡರ ಸಭೆಯಲ್ಲಿ ಕೆರೆಗಳ ವೀಕ್ಷಣೆ ಮತ್ತು ಅಭಿವೃದ್ಧಿ, ಕಾಡಂಚಿನ ಗ್ರಾಮಗಳಿಗೆ ಭೇಟಿ ಮತ್ತು ಜಲಸಂಪನ್ಮೂಲ ಸಚಿವರನ್ನು ಜಿಲ್ಲೆಗೆ ಕರೆತರುವುದು ಸೇರಿದಂತೆ 3 ಪ್ರಮುಖ ಬೇಡಿಕೆಗಳನ್ನು ತಿಳಿಸಿದ್ದರು. ಈ ಪೈಕಿ ಈಗಾಗಲೇ ಜಿಲ್ಲೆಯ ವಿವಿಧ ಕೆರೆಗಳ ಪರಿಶೀಲನೆ ನಡೆಸಿ ಅಭಿವೃದ್ಧಿಗಾಗಿ ಕ್ರಮವಹಿಸಲಾಗಿದೆ. ಇದೀಗ ಕಾಡಂಚಿನ ಗ್ರಾಮಗಳಿಗೆ ಭೇಟಿ ನೀಡಿ ವಾಸ್ತವಾಂಶ ಅರಿತಿದ್ದು ಅವುರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ನಡೆಸಲಾಗುತ್ತಿದೆ. ಇನ್ನು ಬಾಕಿ ಉಳಿದಿರುವ ಒಂದು ಬೇಡಿಕೆಯನ್ನು ಮುಂಬರುವ ದಿನಗಳಲ್ಲಿ ಈಡೇರಿಸಿ ಕೊಡುವುದಾಗಿ ತಿಳಿಸಿದರು.