Advertisement

Bantwal ಕಾಲೇಜು-ಪಾಲಿಟೆಕ್ನಿಕ್‌ಗಳ ಹಾಸ್ಟೆಲ್‌ ಬಳಕೆಗೆ ತೀರ್ಮಾನ

12:30 AM Nov 08, 2023 | Team Udayavani |

ಬಂಟ್ವಾಳ: ಸರಕಾರಿ ಪ್ರಥಮ ದರ್ಜೆ ಕಾಲೇಜು, ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಬಳಿ ಖಾಲಿ ಇರುವ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಅಧೀನದ ಸುಮಾರು 224 ವಿದ್ಯಾರ್ಥಿ ನಿಲಯ (ಹಾಸ್ಟೆಲ್‌) ಕಟ್ಟಡಗಳ ಪೈಕಿ ರಾಜ್ಯದಲ್ಲಿ ಮೊದಲ ಹಂತದಲ್ಲಿ 71 ವಿದ್ಯಾರ್ಥಿ ನಿಲಯ ಕಟ್ಟಡಗಳನ್ನು ತಾತ್ಕಾಲಿಕವಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (ಬಿಸಿಡಬ್ಲ್ಯುಡಿ)ಗೆ ನೀಡಲು ಸರಕಾರ ತೀರ್ಮಾನಿಸಿ ಆದೇಶ ನೀಡಿದೆ.

Advertisement

ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಸಾಕಷ್ಟು ಹಾಸ್ಟೆಲ್‌ಗ‌ಳು ಬಾಡಿಗೆ ಕಟ್ಟಡದಲ್ಲಿ ಕಾರ್ಯಾ ಚರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಅದರ ಬಾಡಿಗೆ ಪಾವತಿ ಇಲಾಖೆಗೆ ಹೊರೆಯಾಗುತ್ತಿದೆ. ಜತೆಗೆ ಸರಕಾರಿ ಕಾಲೇಜು, ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಹಾಸ್ಟೆಲ್‌ಗ‌ಳಿಗೆ ಹಣ ಸಂದಾಯ ಮಾಡಬೇಕಿರುವುದರಿಂದ ವಿದ್ಯಾರ್ಥಿ ಗಳು ಅಲ್ಲಿ ದಾಖಲಾತಿಯನ್ನು ಪಡೆದುಕೊಳ್ಳದೆ ಹಾಸ್ಟೆಲ್‌ ಕಟ್ಟಡ ಖಾಲಿಯಾಗಿದೆ.

ಹೀಗಾಗಿ ಸರಕಾರ ಅವುಗಳನ್ನು ಬಳಕೆ ಮಾಡುವ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬಂದಿದೆ. ಸರಕಾರದ ಈ ನಿರ್ಧಾರದಿಂದ ಒಬಿಸಿ ಇಲಾಖೆಗೆ ಬಾಡಿಗೆಯ ಮೊತ್ತ ಉಳಿಕೆಯಾಗಲಿದ್ದು, ಜತೆಗೆ ಹಾಸ್ಟೆಲ್‌ ಕಟ್ಟಡಗಳು ಪಾಳು ಬಿದ್ದು ಹಾನಿಯಾಗುವ ಜತೆಗೆ ಅದರ ಸ್ವತ್ಛತೆ ಕಾಪಾಡುವುದಕ್ಕೂ ಅನುಕೂಲ ವಾಗಲಿದೆ.

ಎಲ್ಲೆಲ್ಲಿ ಹಾಸ್ಟೆಲ್‌ ಕಟ್ಟಡ ಹಸ್ತಾಂತರ?
ರಾಜ್ಯದಲ್ಲಿ ಖಾಲಿ ಇರುವ 13,169 ವಿದ್ಯಾರ್ಥಿಗಳ 224 ಹಾಸ್ಟೆಲ್‌ಗ‌ಳಿದ್ದು, ಮೊದಲ ಹಂತದಲ್ಲಿ ಸುಮಾರು 20 ಜಿಲ್ಲೆಗಳ 71 ಹಾಸ್ಟೆಲ್‌ ಕಟ್ಟಡಗಳನ್ನು ಹಿಂದುಳಿದ ವರ್ಗಗಳ ಇಲಾಖೆಗೆ ಹಸ್ತಾಂತರಿಸಲಾಗುತ್ತಿದೆ. ದ.ಕ.ಜಿಲ್ಲೆಯಲ್ಲಿ ಒಟ್ಟು 3 ಹಾಸ್ಟೆಲ್‌ಗ‌ಳು ಹಸ್ತಾಂತರಗೊಳ್ಳಲಿದ್ದು, ಮಂಗಳೂರು ಕದ್ರಿಯಲ್ಲಿ ಕೆಪಿಟಿ ಅಧೀನದ 2 ಹಾಸ್ಟೆಲ್‌ ಕಟ್ಟಡ ಹಾಗೂ ಬಂಟ್ವಾಳ ಸರಕಾರಿ ಪಾಲಿಟೆಕ್ನಿಕ್‌ ಅಧೀನದ 1 ಹಾಸ್ಟೆಲ್‌ ಕಟ್ಟಡ ವರ್ಗಾವಣೆಗೊಳ್ಳುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಯಾವುದೇ ಹಾಸ್ಟೆಲ್‌ ಕಟ್ಟಡಗಳನ್ನು ಗುರುತಿಸಲಾಗಿಲ್ಲ.ಉಳಿದಂತೆ ಬೆಂಗಳೂರು ನಗರ ಜಿಲ್ಲೆಯಲ್ಲಿ 3, ಕೋಲಾರದಲ್ಲಿ 3, ಶಿವಮೊಗ್ಗದಲ್ಲಿ 2, ತುಮಕೂರಿನಲ್ಲಿ 1, ಚಿಕ್ಕಮಗಳೂರಿನಲ್ಲಿ 4, ಹಾಸನದಲ್ಲಿ 8, ಕೊಡಗಿನಲ್ಲಿ 3, ಮೈಸೂರಿನಲ್ಲಿ 3, ಬಾಗಲಕೋಟೆಯಲ್ಲಿ 7, ಬೆಳಗಾವಿ 4, ಧಾರವಾಡ 1, ಗದಗ 5, ಉತ್ತರಕನ್ನಡ 4, ಬೀದರ್‌ 4, ಕಲಬುರ್ಗಿ 2, ಯಾದಗಿರಿ 4, ಕೊಪ್ಪಳ 4, ರಾಯಚೂರು 1 ಹಾಗೂ ವಿಜಯನಗರ ಜಿಲ್ಲೆಯಲ್ಲಿ 4 ಹಾಸ್ಟೆಲ್‌ ಕಟ್ಟಡ ಒಬಿಸಿ ಇಲಾಖೆಗೆ ಹಸ್ತಾಂತರಗೊಳ್ಳುತ್ತಿದೆ.

ಷರತ್ತಿನೊಂದಿಗೆ ಹಸ್ತಾಂತರ ಪ್ರಕ್ರಿಯೆ
ಹಿಂದುಳಿದ ವರ್ಗಗಳ ಇಲಾಖೆಗೆ ಹಾಸ್ಟೆಲ್‌ ಕಟ್ಟಡ ಹಸ್ತಾಂತರ ಮಾಡುವ ನಿರ್ಧಾರ ತಾತ್ಕಾಲಿಕವಾಗಿದ್ದು, ಯಾವುದೇ ಸಂದರ್ಭದಲ್ಲಿ ರದ್ದು ಪಡಿಸುವ ಹಕ್ಕು ಉನ್ನತ ಶಿಕ್ಷಣ ಇಲಾಖೆಗೆ ಸೇರಿದೆ ಎಂಬ ಷರತ್ತಿನೊಂದಿಗೆ ಹಸ್ತಾಂತರ ಕಾರ್ಯ ನಡೆಯಲಿದೆ. ಹಾಸ್ಟೆಲ್‌ ಕಟ್ಟಡದ ಮೂಲ ವಿನ್ಯಾಸಕ್ಕೆ ಧಕ್ಕೆಯಾಗದ ರೀತಿಯಲ್ಲಿ ಅದನ್ನು ನಿರ್ವಹಣೆ ಮಾಡುವ ಜವಾಬ್ದಾರಿ ಒಬಿಸಿ ಇಲಾಖೆಯದ್ದಾಗಿದ್ದು, ಮರು ಹಸ್ತಾಂತರದ ಸಂದರ್ಭ ಕಟ್ಟಡ ಸುಸ್ಥಿತಿಯಲ್ಲಿರುವುದು ಕಡ್ಡಾಯವಾಗಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.

Advertisement

ದುರಸ್ತಿ ಕೆಲಸದ ಬಳಿಕ ಸ್ಥಳಾಂತರ
ದ.ಕ.ಜಿಲ್ಲೆಯ ಮಂಗಳೂರಿನಲ್ಲಿ 2 ಹಾಗೂ ಬಂಟ್ವಾಳದಲ್ಲಿ 1 ಹಾಸ್ಟೆಲ್‌ ಕಟ್ಟಡ ಈಗಾಗಲೇ ನಮ್ಮ ಇಲಾಖೆಗೆ ಹಸ್ತಾಂತರವಾಗಿದ್ದು, ಬಂಟ್ವಾಳದಲ್ಲಿ ಹೊಸ ಕಟ್ಟಡವಿದೆ. ಆದರೆ ಮಂಗಳೂರಿನಲ್ಲಿ ಹಳೆ ಕಟ್ಟಡ ಆಗಿರುವುದರಿಂದ ಕೊಂಚ ದುರಸ್ತಿ ಕೆಲಸವಿದ್ದು, ಅದನ್ನು ಪೂರ್ಣಗೊಳಿಸಿದ ಬಳಿಕ ಹಾಸ್ಟೆಲ್‌ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಲಾಗುತ್ತದೆ.
– ಸಚಿನ್‌ ಕುಮಾರ್‌
ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಇಲಾಖೆ, ದ.ಕ.ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next