Advertisement

10 ಲಕ್ಷ ಮನೆ ವಿತರಣೆಗೆ ನಿರ್ಧಾರ

02:41 PM May 11, 2022 | Team Udayavani |

ಚಳ್ಳಕೆರೆ: ಪ್ರಧಾನಿ ಮೋದಿಯವರು ದೇಶದ ಪ್ರತಿಯೊಬ್ಬ ಬಡವರಿಗೂ ಸೂರು ಕಲ್ಪಿಸುವ ಸಂಕಲ್ಪ ಮಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಈವರೆಗೂ ಈವರೆಗೆ 3.96 ಲಕ್ಷ ಮನೆಗಳನ್ನು ವಿವಿಧ ಯೋಜನೆಗಳ ಅಡಿ ನಿರ್ಮಿಸಲಾಗಿದ್ದು, ವರ್ಷಾಂತ್ಯಕ್ಕೆ ಸುಮಾರು 10 ಲಕ್ಷ ಮನೆಗಳನ್ನು ನಿರ್ಮಿಸಿ ಕಡುಬಡವರಿಗೆ ವಿತರಣೆ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದು ವಸತಿ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆ ಸಚಿವ ವಿ. ಸೋಮಣ್ಣ ಹೇಳಿದರು.

Advertisement

ಪ್ರಧಾನಮಂತ್ರಿ ಅವಾಸ್‌ ಯೋಜನೆಯ ಸರ್ವರಿಗೂ ಸೂರು ಯೋಜನೆಯಡಿ ನಗರದ ಪಾವಗಡ ರಸ್ತೆಯ ಕೆಎಚ್‌ಬಿ ಲೇಔಟ್‌ನಲ್ಲಿ ನಿರ್ಮಿಸಲಾಗುವ 1008 ಜಿ+2 ಮನೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಈ ಹಿಂದೆ ಆಡಳಿತ ನಡೆಸಿದ ವಿವಿಧ ರಾಜಕೀಯ ಪಕ್ಷಗಳ ಸರ್ಕಾರಗಳು ವಸತಿ ಯೋಜನೆ ಗುರಿ ತಲುಪಲು ಸಾಧ್ಯವಾಗಲಿಲ್ಲ. ಬಡವರು ಚಿಕ್ಕ ಮನೆಯಲ್ಲಿ ವಾಸಿಸುವುದು ಕಷ್ಟ. ಮಳೆ ಮತ್ತು ಇನ್ನಿತರ ಸಂದರ್ಭಗಳಲ್ಲಿ ಅವರ ಸ್ಥಿತಿ ಚಿಂತಾಜನಕವಾಗುತ್ತದೆ. ಇದನ್ನು ಮನಗಂಡ ಮುಖ್ಯಮಂತ್ರಿಗಳು ಎಷ್ಟೇ ಕಷ್ಟವಾದರೂ ರಾಜ್ಯದ ಕಡುಬಡವರಿಗೆ ಪ್ರಧಾನಮಂತ್ರಿಗಳ ಆಶಯದಂತೆ ಸೂರು ಕಲ್ಪಿಸುವ ಯೋಜನೆಯನ್ನು ಪರಿಪೂರ್ಣವಾಗಿ ಜಾರಿಗೊಳಿಸಲು ಹೆಚ್ಚಿನ ಹಣಕಾಸು ನೆರವು ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ರಾಜೀವ್‌ ಗಾಂಧಿವಸತಿ ನಿಗಮ, ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ಸಹಕಾರದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇಂದಿರಾ ಆವಾಸ್‌, ಅಂಬೇಡ್ಕರ್‌, ದೇವರಾಜ ಅರಸು ನಿಗಮ, ಅಲೆಮಾರಿ, ಅರೆ ಅಲೆಮಾರಿ, ಬಸವ ವಸತಿ ಯೋಜನೆ, ಆಶ್ರಯ ಮುಂತಾದ ಯೋಜನೆಗಳ ಸಹಯೋಗದಲ್ಲಿ ಆಯ್ದ ಬಡವರಿಗೆ ಈ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು.

ನಗರ ಪ್ರದೇಶದಲ್ಲಿ ಮಾತ್ರ ಸರ್ಕಾರ ಜಿ+2 ಯೋಜನೆಯನ್ನು ಜಾರಿಗೊಳಿಸುತ್ತಿದೆ. ಏಕೆಂದರೆ ಗ್ರಾಮೀಣ ಭಾಗದ ವಾತಾವರಣಕ್ಕಿಂತ ನಗರ ಪ್ರದೇಶದ ವಾತಾವರಣ ಭಿನ್ನವಾಗಿದೆ. ಲಭ್ಯವಿರುವ ಜಾಗದಲ್ಲಿಯೇ ಎಲ್ಲರಿಗೂ ಸೂರು ಕಲ್ಪಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಆದರೆ ಕೆಲವೆಡೆ ಈ ಯೋಜನೆಯ ಬಗ್ಗೆ ಅಪರಸ್ವರವಿದೆ. ಕೆಲವರು ವೈಯಕ್ತಿಕವಾಗಿ ನಿವೇಶನ ಕೇಳುತ್ತಿದ್ದು, ಸ್ವಂತ ವೆಚ್ಚದಲ್ಲಿ ಮನೆ ನಿರ್ಮಿಸಿಕೊಳ್ಳುವುದಾಗಿ ಭರವಸೆ ನೀಡುತ್ತಾರೆ. ಆದರೆ ಸರ್ಕಾರ ಜಿ+2 ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಡಲಿದೆ. ಈ ಹಿಂದೆ ಎಸ್‌ಸಿ-ಎಸ್‌ಟಿ ಸಮುದಾಯದವರಿಗೆ 1.75 ಲಕ್ಷ ರೂ. ಸಹಾಯಧನವಿದ್ದು, ಅದನ್ನು 2 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಸಾಮಾನ್ಯ ವರ್ಗಕ್ಕೆ 3.96 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಲಿದ್ದು, ಬಹುತೇಕ ಸಾಲದ ರೂಪದಲ್ಲಿ ಫಲಾನುಭವಿಗಳಿಗೆ ಈ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ. ಜಿ+2 ನಿರ್ಮಾಣದಲ್ಲಿ ಎಲ್ಲಾ ಅಗತ್ಯ ಮೂಲ ಸೌಕರ್ಯಗಳನ್ನು ಸರ್ಕಾರ ಒದಗಿಸಿಕೊಡಲಿದೆ. ಇನ್ನು ಮೂರು ತಿಂಗಳಲ್ಲಿ 1008 ಮನೆಗಳ ಬುನಾದಿ ಕಾರ್ಯ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಟಿ. ರಘುಮೂರ್ತಿ ಮಾತನಾಡಿ, ಈ ಹಿಂದೆ ಕಾಡುಗೊಲ್ಲ ಸಮುದಾಯಕ್ಕೆ ಮನೆಗಳ ಮಂಜೂರಾತಿ ನೀಡಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ವಸತಿ ಸಚಿವರ ಗಮನಕ್ಕೆ ತಂದ ಕೂಡಲೇ ಮಂಜೂರಾತಿ ಆದೇಶ ನೀಡಿದರು. ಚಳ್ಳಕೆರೆ ಕ್ಷೇತ್ರದಲ್ಲಿ ಹಲವಾರು ಯೋಜನೆಗಳಲ್ಲಿ ಮನೆಗಳನ್ನು ನೀಡುವ ಭರವಸೆಯನ್ನು ಅವರು ನೀಡಿದ್ದಾರೆ ಎಂದು ಹೇಳಿದರು.

ನಗರಸಭಾ ಸದಸ್ಯ ಎಸ್‌. ಜಯಣ್ಣ ಮಾತನಾಡಿ, ಮಾಜಿ ಶಾಸಕ ಮಂಡಿಮಠ 1999-2000ರಲ್ಲಿ 198 ಫಲಾನುಭವಿಗಳಿಗೆ ಹಕ್ಕುಪತ್ರ ನೀಡಿದ್ದಾರೆ. ಅವರಿಗೂ ಮನೆಗಳನ್ನು ನೀಡುವಂತೆ ಸಚಿವರಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸೋಮಣ್ಣ, ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ, ರಾಜೀವ್‌ ಗಾಂಧಿ ವಸತಿ ನಿಗಮದ ಪ್ರಧಾನ ವ್ಯವಸ್ಥಾಪಕ ಎನ್.ಎಸ್. ಮಹದೇವಪ್ರಸಾದ್‌, ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಆರ್‌. ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷ ಆರ್‌. ರುದ್ರ ನಾಯಕ, ಸದಸ್ಯರಾದ ರಮೇಶ್‌ ಗೌಡ, ಚಳ್ಳಕೆರೆಯಪ್ಪ, ಕೆ. ವೀರಭದ್ರಪ್ಪ, ಟಿ. ಮಲ್ಲಿಕಾರ್ಜುನ್‌, ವೈ. ಪ್ರಕಾಶ್‌, ಶಿವಕುಮಾರ್‌, ಎಂ.ಜೆ. ರಾಘವೇಂದ್ರ, ಕವಿತಾ, ಸುಮಾ, ಸುಜಾತಾ, ಸಾವಿತ್ರಮ್ಮ, ಪಾಲಮ್ಮ, ಸಾಕಮ್ಮ, ಪ್ರಮೋದ್‌, ಸಿ. ಶ್ರೀನಿವಾಸ್‌, ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ, ತಹಶೀಲ್ದಾರ್‌ ಎನ್‌. ರಘುಮೂರ್ತಿ, ಯೋಜನಾ ನಿರ್ದೇಶಕ ಸತೀಶ್‌ ರೆಡ್ಡಿ, ಕಾರ್ಯಪಾಲಕ ಅಭಿಯಂತರ ಮತ್ತಿಕಟ್ಟೆ, ನಗರಸಭೆ ಪೌರಾಯುಕ್ತೆ ಟಿ. ಲೀಲಾವತಿ, ನಾಮನಿರ್ದೇಶನ ಸದಸ್ಯರಾದ ಮನೋಜ್‌, ಜಗದಾಂಬ, ಪಾಲನೇತ್ರ ನಾಯಕ, ಇಂದ್ರೇಶ್‌, ವೀರೇಶ್‌, ಗುತ್ತಿಗೆದಾರ ರವೀಂದ್ರನಾಥ ಮೊದಲಾದವರು ಭಾಗವಹಿಸಿದ್ದರು.

Advertisement

ಚಳ್ಳಕೆರೆಯ ಕರ್ನಾಟಕ ಗೃಹ ನಿರ್ಮಾಣ ಸಂಘಕ್ಕೆ ಸುಮಾರು 26 ಎಕರೆ ಜಮೀನು ನೀಡುವ ನಿರ್ಣಯ ಕೈಗೊಳ್ಳಲಾಗಿದೆ. 2008ರಲ್ಲಿ ಈ ಕ್ಷೇತ್ರದ ಶಾಸಕರಾಗಿದ್ದ ದಿ| ತಿಪ್ಪೇಸ್ವಾಮಿಯವರ ಹೆಸರನ್ನೇ ನೂತನ ಬಡಾವಣೆಗೆ ನಾಮಕರಣ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇಲ್ಲಿನ ಹಮಾಲರ ಸಂಘ ವೈಯಕ್ತಿಕವಾಗಿ ನಿವೇಶನ ನೀಡುವಂತೆ ಮನವಿ ಮಾಡಿದೆ. ಆದರೆ ಅದು ಸಾಧ್ಯವಾಗದು. ಮನೆ ಇಲ್ಲದ ಎಲ್ಲಾ ಹಮಾಲಿಗಳಿಗೂ ಮನೆಗಳನ್ನು ನೀಡುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೇನೆ. -ವಿ. ಸೋಮಣ್ಣ, ವಸತಿ ಮತ್ತು ಮೂಲ ಸೌಲಭ್ಯ ಇಲಾಖೆ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next