Advertisement

16ರಂದು ಚಡಚಣ ಬಂದ್‌ಗೆ ವಿವಿಧ ಸಂಘಟನೆಗಳ ನಿರ್ಧಾರ

03:35 PM May 13, 2019 | Team Udayavani |

ಚಡಚಣ: ಸ್ಥಳೀಯ ಜವಳಿ ವ್ಯಾಪಾರಿ ಅಜೀತ ಮುತ್ತೀನ ಮೇಲೆ ಮಾರಣಾಂತಿಕ ಹಲ್ಲೆಗೈದ ಆರೋಪಿಗಳನ್ನು ಬಂಧಿಸುವುದು ಸೇರಿದಂತೆ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಮೇ 16ರಂದು ಚಡಚಣ ಬಂದ್‌ಗೆ ಕರೆ ನೀಡಲಾಗಿದೆ ಎಂದು ಕರವೇ ವಲಯಾಧ್ಯಕ್ಷ ಸೋಮಶೇಖರ ಬಡಿಗೇರ ಹೇಳಿದರು.

Advertisement

ಬಂದ್‌ ಹಿನ್ನೆಲೆಯಲ್ಲಿ ಸ್ಥಳೀಯ ಎಪಿಎಂಸಿ ಆಡಳಿತ ಭವನದಲ್ಲಿ ರವಿವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆ ನಂತರ ಅವರು ಮಾತನಾಡಿದರು.

ಅಜೀತ ಅವರ ಮೇಲೆ ಹಲ್ಲೆಗೈದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಮೇ 15ರಂದು ಚಡಚಣ ಬಂದ್‌ಗೆ ಕರೆ ನೀಡಲಾಗಿತ್ತು. ಆದರೆ ಸಭೆಯಲ್ಲಿ ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಯಿತು. ಈ ಸಂದರ್ಭದಲ್ಲಿ ಗಣ್ಯ ಕಿರಾಣಿ ವ್ಯಾಪಾರಿ ಎಸ್‌.ಆರ್‌. ಅವಜಿ ಮಾತನಾಡಿ, ಮೇ 15 ಬುಧವಾರ ಪಟ್ಟಣದ ವಾರದ ಸಂತೆ ನೆರೆಯುತ್ತದೆ. ಈ ಸಂತೆ ಪ್ರಾರಂಭಿಸಲು ನಮ್ಮ ಪೂರ್ವಜರು ಸಾಕಷ್ಟು ಶ್ರಮ ವಹಿಸಿದ್ದಾರೆ. ಅಂದು ಬಂದ್‌ ಆಚರಿಸಿದರೆ ಸಾಕಷ್ಟು ಬಡ ಕುಟುಂಬಗಳ ಆರ್ಥಿಕ ಸ್ಥಿತಿಗೆ ತೊಂದರೆ ಉಂಟಾಗುತ್ತದೆ. ಅಲ್ಲದೆ, ಪಟ್ಟಣದ ಇತಿಹಾಸ ಕೆದಕಿದರೆ ಎಂದಿಗೂ ಕೂಡ ಬುಧವಾರ ಬಂದ್‌ ಆಚರಿಸಿಲ್ಲ. ಈ ಕೆಟ್ಟ ಸಾಂಪ್ರದಾಯಕ್ಕೆ ನಾಂದಿ ಹಾಡುವುದು ಬೇಡ ಎಂದು ಅವರು ಹೇಳಿದರು.

ಇದಕ್ಕೆ ಎಲ್ಲ ಸಂಘಟನೆಯವರು ಸಹಮತ ವ್ಯಕ್ತಪಡಿಸಿದ ನಂತರ ಮೇ 16 ಗುರುವಾರ ಇಡಿ ದಿನ ಬಂದ್‌ ಆಚರಿಸಲು ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು. ಅಂದು ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಬಂದ್‌ ಆಚರಿಸಲು ನಿರ್ಧರಿಸಲಾಗಿದ್ದು, ತುರ್ತು ಸೇವೆಗಳಾದ ಆಸ್ಪತ್ರೆ, ಔಷಧ ಅಂಗಡಿ ಹೊರತುಪಡಿಸಿ ಉಳಿದ ಎಲ್ಲ ಅಂಗಡಿ ಮುಂಗಟ್ಟುಗಳು, ಬಸ್‌, ಆಟೋ, ಮ್ಯಾಕ್ಸಿಕ್ಯಾಬ್‌, ಸಿನಿಮಾ ಮಂದಿರ ಸೇರಿದಂತೆ ಎಲ್ಲ ವ್ಯಾಪಾರ ವಹಿವಾಟುಗಳನ್ನು ಬಂದ್‌ ಮಾಡಿ, ಪಟ್ಟಣದ ಪ್ರತಿಯೊಬ್ಬರೂ ಬಂದ್‌ನಲ್ಲಿ ಪಾಲ್ಗೊಂಡು ಬಂದ್‌ ಯಶಸ್ವಿಗೊಳಿಸಬೇಕು.ಬಂದ್‌ ಕುರಿತು ಡಂಗುರ ಸಾರುವುದು ಸೇರಿದಂತೆ ಬಂದ್‌ಗೆ ಕೈಗೊಳ್ಳಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಆಯಾ ಸಂಘಟನೆಯವರಿಗೆ ಜವಾಬ್ದಾರಿ ವಹಿಸಲಾಯಿತು.

ಪಪಂ ಅಧ್ಯಕ್ಷ ಬಾಬುಗೌಡ ಪಾಟೀಲ ಮಾತನಾಡಿ, ಬಂದ್‌ಗೆ ಪಪಂ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ಪಟ್ಟಣದ ಎಲ್ಲ ವರ್ತಕರು ತಮ್ಮ ವ್ಯಾಪಾರ ವಹಿವಾಟನ್ನು ಅಂದು ಸ್ಥಗಿತಗೊಳಿಸಿ ಬಂದ್‌ಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿದರು.

Advertisement

ಈ ಸಂದರ್ಭದಲ್ಲಿ ಕಿರಾಣಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜಿ.ಡಿ. ಪಾವಲೆ, ಸರಾಫ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎಂ.ಎಸ್‌. ಬಿರಾದಾರ, ವರ್ತಕರಾದ ರಾಜೇಂದ್ರ ಮುತ್ತೀನ, ರವಿ ಪಾವಲೆ, ಮಹಾದೇವ ಯಂಕಂಚಿ, ಸಂತೋಷ ವನಕುದರೆ, ಉದಯ ಅವಟಿ, ಎಪಿಎಂಸಿ ನಿರ್ದೇಶಕ ಬಾಬು ಚವ್ಹಾಣ, ಪಪಂ ಮಾಜಿ ಸದಸ್ಯ ರಾಜು ಕೋಳಿ, ಸಂಘಟನೆಗಳ ಮುಖಂಡರಾದ ಪ್ರಭಾಕರ ನಿರಾಳೆ, ಮಹಾದೇವ ಬನಸೋಡೆ, ದಶರಥ ಬನಸೋಡೆ, ಚೇತನ ಮಠ, ಶಕೀಲ ಖಾಟಿಕ, ರಾಹುಲ್ ಲೋಖಂಡೆ, ವಿಕಾಸ ಮಲ್ಲಾಡಿ, ನಾಗೇಶ ಗಾಯಕವಾಡ ಸೇರಿದಂತೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next