Advertisement

ದಾವಣಗೆರೆಯಲ್ಲಿ ಕೇಸರಿ ಮಹಾಸಂಗಮ: ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ನಿರ್ಧಾರ

01:01 AM Feb 04, 2023 | Team Udayavani |

ಬೆಂಗಳೂರು: ಸರಾಸರಿ ಶೇ. 50 ರಷ್ಟು ಮತಗಳಿಕೆ ಗುರಿಯೊಂದಿಗೆ ಸ್ವತಂತ್ರವಾಗಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಸಂಕಲ್ಪವನ್ನು ಶುಕ್ರವಾರ ನಡೆದ ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ಕೈಗೊಳ್ಳಲಾಗಿದ್ದು, ಮಾರ್ಚ್‌ ಮಧ್ಯ ಭಾಗ ದಲ್ಲಿ ದಾವಣಗೆರೆಯಲ್ಲಿ “ಕೇಸರಿ ಮಹಾಸಂಗಮ’ ನಡೆಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

Advertisement

ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌, ಸಹ ಪ್ರಭಾರಿ ಡಿ.ಕೆ. ಅರುಣಾ ಕುಮಾರಿ, ಕೆ.ಎಸ್‌. ಈಶ್ವರಪ್ಪ, ಸಿ.ಟಿ. ರವಿ, ಪ್ರಹ್ಲಾದ್‌ ಜೋಷಿ ಅವರನ್ನು ಒಳಗೊಂಡ ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ಚುನಾವಣೆ ಕಾರ್ಯತಂತ್ರಕ್ಕೆ ಸಂಬಂಧಪಟ್ಟಂತೆ 3 ತಾಸು ಚರ್ಚೆ ನಡೆಸಲಾಗಿದೆ.

ಫೆಬ್ರವರಿ ಕೊನೆಯ ವಾರದಲ್ಲಿ ರಾಜ್ಯದ 4 ಭಾಗಗಳಿಂದ “ವಿಜಯ ಸಂಕಲ್ಪ’ ರಥಯಾತ್ರೆ ನಡೆಸಲಾಗುತ್ತದೆ. ಈ ರಥಯಾತ್ರೆಗಳು ಮಾ. 18ರಿಂದ 20ರ ಅವಧಿಯಲ್ಲಿ ದಾವಣಗೆರೆಗೆ ಬಂದು ಸೇರುವಂತೆ ಮಾರ್ಗ ನಕಾಶೆ ರೂಪಿಸಲಾಗುತ್ತಿದೆ.

ಸರ್ವೇ ರಿಪೋರ್ಟ್‌ ಗಳ ಚರ್ಚೆ ವಿವಿಧ ಕ್ಷೇತ್ರಗಳಿಗೆ ಸಂಬಂಧಪಟ್ಟ ಸರ್ವೇ ರಿಪೋರ್ಟ್‌ ಬಗ್ಗೆಯೂ ಈ ಸಭೆಯಲ್ಲಿ ಚರ್ಚೆ ಯಾಗಿದ್ದು, ಎ, ಬಿ, ಸಿ, ಡಿ ಎಂದು ವಿಂಗಡಿಸಿ ಗೆಲ್ಲುವ ಗುರಿ ಹಂಚಲಾಗಿದೆ.

“ಎ’ ವಿಭಾಗದಲ್ಲಿ 60ರಿಂದ 65 ಸ್ಥಾನ, “ಬಿ’ಯಲ್ಲಿ 25ರಿಂದ 30 ಕ್ಷೇತ್ರಗಳ ಗುರಿ ಹೊಂದಲಾಗಿದ್ದು, ಇವುಗಳ ಮೇಲೆ ಹೆಚ್ಚು ಶ್ರಮ ಹಾಕಬೇಕು. “ಸಿ’ ಮತ್ತು “ಡಿ’ ವಿಭಾಗಗಳಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪ್ರಭಾವ ಹೊಂದಿದ್ದು, ಇಲ್ಲಿ ಹೆಚ್ಚಿನ ಶ್ರಮ ವಹಿಸಬೇಕೆಂದು ಸಭೆಯಲ್ಲಿ ಚರ್ಚೆ ತೀರ್ಮಾನಿಸಲಾಗಿದೆ. ಹಳೆ ಮೈಸೂರು ಭಾಗದಲ್ಲಿ ಯೋಗಿ ಆದಿತ್ಯನಾಥ ಪ್ರವಾಸ ಆಯೋಜಿಸಲು ನಿರ್ಧರಿಸಲಾಗಿದೆ.

Advertisement

ಪ್ರತೀ ಕ್ಷೇತ್ರದಲ್ಲಿ ಶೇ. 50ರಷ್ಟು ಮತಗಳನ್ನು ಪಡೆದು, ಯಾರ ಹಂಗು ಇಲ್ಲದೆ ಅಧಿಕಾರಕ್ಕೆ ಬರುತ್ತೇವೆ. ಮತ್ತೆ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಸಭೆ ಬಳಿಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿಳಿಸಿದ್ದಾರೆ.

ವರಿಷ್ಠರ ಪ್ರವಾಸ
ಫೆಬ್ರವರಿಯಲ್ಲಿ ಎರಡರಿಂದ ಮೂರು ಬಾರಿ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ಕೊಡಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸರಕಾರದ ಪ್ರಭಾವಿ ಸಚಿವರು ರಾಜ್ಯ ಪ್ರವಾಸ ನಡೆಸಲಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆ ಮತ್ತು ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗಿ ಯಾಗಲಿದ್ದಾರೆ. ಪ್ರತೀ ಕ್ಷೇತ್ರದಲ್ಲಿ ಶೇ. 70ರಿಂದ 80ರಷ್ಟು ಮತದಾರರು ಸರಕಾರದ ವಿವಿಧ ಕಾರ್ಯ ಕ್ರಮಗಳ ಫ‌ಲಾನುಭವಿಗಳಾಗಿದ್ದು, ಅವರನ್ನು ತಲುಪುವುದಕ್ಕೆ ಯೋಜನೆ ರೂಪಿಸಲಾಗಿದೆ.

ರಥಯಾತ್ರೆ
ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಹಳೆ ಮೈಸೂರು ಹಾಗೂ ಕರಾವಳಿ ಭಾಗದಿಂದ ನಾಲ್ಕು ತಂಡಗಳಲ್ಲಿ ವಿಜಯಸಂಕಲ್ಪ ರಥಯಾತ್ರೆ ನಡೆಯುತ್ತದೆ. ಇದರ ಜತೆಗೆ ಪ್ರತೀ ಜಿಲ್ಲೆಯಲ್ಲಿ ವಿವಿಧ ಮೋರ್ಚಾಗಳ ಸಮಾವೇಶ ಮಾಡಲು ಯೋಜನೆ ರೂಪಿಸಲಾಗಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಯಾತ್ರೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next