ಹಳಿಯಾಳ: ಗ್ರಾಮ ಪಂಚಾಯತ ಮಟ್ಟದಿಂದ ಜಿಲ್ಲಾ ಕೇಂದ್ರದ ವರೆಗೂ ಕಸಮುಕ್ತವನ್ನಾಗಿ ಮಾಡುವ ಗುರಿಯನ್ನು ಜಿಲ್ಲಾ ಪಂಚಾಯತ ಹೊಂದಿದ್ದು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಪಂ ಸಿಒಓ ಮೊಹಮ್ಮದ ರೋಷನ್ ಹೇಳಿದರು.
ಪಟ್ಟಣದ ಮಿನಿವಿಧಾನಸೌಧದ ಸಭಾಭವನದಲ್ಲಿ ಜಿಪಂ ಕಾರವಾರ ಹಾಗೂ ಹಳಿಯಾಳ ತಾಲೂಕ ಪಂಚಾಯತನಿಂದ ಆಯೋಜಿಸಿದ್ದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳ ಸಮಾಲೋಚನೆ-ಚಿಂತನಮಂಥನ ವಿಶೇಷ ಸಭೆಗೆ ಚಾಲನೆ ನೀಡಿ ಮಾತನಾಡಿದರು.
ಆಡಳಿತಾತ್ಮಕ ವಿಷಯದಲ್ಲಿ ಏನಾದರು ತೊಂದರೆ ಇದ್ದರೆ ಅವುಗಳನ್ನು ಅಧಿಕಾರಿಗಳ ಸಮಕ್ಷಮದಲ್ಲಿ ಬಗೆಹರಿಸುವ ವಿಶೇಷ ಸಭೆಯು ಇದಾಗಿದೆ ಎಂದ ಸಿಇಓ ಅವರು ಪ್ಲಾಸ್ಟಿಕ್ ನಿಷೇಧ ಹಾಗೂ ಎಲ್ಲ ಗ್ರಾಮ ಪಂಚಾಯತಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಿ ಸ್ವಚ್ಚ ಭಾರತದ ಕಲ್ಪನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಗಂಭೀರ ಚಿಂತನೆ ನಡೆಸಲಾಗಿದ್ದು ಗ್ರಾಮೀಣ ಮಟ್ಟದಿಂದ ಹಿಡಿದು ಎಲ್ಲರ ಸಹಕಾರ ಅವಶ್ಯಕವಾಗಿದೆ ಎಂದರು.
ಭಾಗವಹಿಸಿದ್ದ ಜಿಪಂ, ತಾಪಂ ಸದಸ್ಯರು, ಗ್ರಾಪಂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ತಮ್ಮ ಪಂಚಾಯತಿಯಲ್ಲಿ ಯಾವ ರೀತಿ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯಬೇಕು. ಹಸಿಕಸ ಮತ್ತು ಒಣಕಸಗಳ ಘಟಕಗಳ ಸ್ಥಾಪನೆ ಕುರಿತು, ರಸ್ತೆಗಳ ಅಗಲೀಕರಣ, ವಿದ್ಯುತ್, ಕುಡಿಯುವ ನೀರಿನ ಸಮಸ್ಯೆಗಳು, ಶಾಲೆಗಳ ಕಟ್ಟಡಗಳು ಭಾರಿ ಮಳೆಯಿಂದ ಹಾನಿಯಾಗಿದ್ದು ಇವುಗಳನ್ನು ಸರಿ ಪಡಿಸುವುದು, ಗ್ರಾಮೀಣ ಮಕ್ಕಳಿಗಿರುವ ಬಸ್ಸಿನ ವ್ಯವಸ್ಥೆ ಸರಿಪಡಿಸುವ ಬಗ್ಗೆ ಚರ್ಚೆಗಳು ನಡೆದವು.
ಇನ್ನೂ ರೈತರು ಬೆಳೆದ ಬೆಳೆಗಳನ್ನು ಕಾಡು ಪ್ರಾಣಿಗಳು ಪ್ರತಿ ವರ್ಷ ಹಾನಿ ಮಾಡುತ್ತಾ ಬರುತ್ತಿದ್ದು ಇವುಗಳಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಕೆಲವೊಂದು ಗ್ರಾಮ ಪಂಚಾಯಿತಿಯಲ್ಲಿ ಸಿಬ್ಬಂದಿ ಕೊರತೆ ಕುರಿತು ಸು ದೀರ್ಘ ಚರ್ಚೆಗಳು ನಡೆದು ಮುಂದಿನ ದಿನಗಳಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.
ಜಿಪಂ ಉಪಕಾರ್ಯದರ್ಶಿ(ಅಭಿವೃದ್ಧಿ) ವಿಎಂ ಹೆಗಡೆ, ಜಿಪಂ ಎಸ್‌ಬಿಎಮ್ ನೋಡಲ್ ಅಧಿಕಾರಿ ಸೂರ್ಯನಾರಾಯಣ ಭಟ್, ಜಿಪಂ ಉಪಾಧ್ಯಕ್ಷ ಸಂತೋಷ ರೇಣಕೆ, ತಾಪಂ ಅಧ್ಯಕ್ಷೆ ರೀಟಾ ಸಿದ್ದಿ, ಜಿಪಂ ಸದಸ್ಯರಾದ ಕೃಷ್ಣಾ ಪಾಟೀಲ್, ಲಕ್ಷ್ಮೀ ಕೊರ್ವೆಕರ, ಮಹೇಶ್ರಿ ಮಿಶ್ಯಾಳೆ, ತಾಪಂ ಅಧಿಕಾರಿ ಪ್ರವೀಣಕುಮಾರ ಸಾಲಿ, ಡಾ| ಮಹೇಶ ಕುರಿಯವರ, ಪಿಡಿಓಗಳು ಮೊದಲಾದವರು ಇದ್ದರು.