Advertisement

ಎಲ್ಲ ಜಿಲ್ಲೆಗಳಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆಗೆ ತೀರ್ಮಾನ

01:23 AM Oct 28, 2020 | mahesh |

ಮಂಗಳೂರು: ಪಕ್ಷ ಚಟುವಟಿಕೆಗಳ ವಿಕೇಂದ್ರೀಕರಣ ಮತ್ತು ಜಿಲ್ಲಾ ಘಟಕ ಹಾಗೂ ಕಾರ್ಯಕರ್ತರಲ್ಲಿ ಹೆಚ್ಚಿನ ಹುರುಪು ಮೂಡಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಬಿಜೆಪಿಯ ಮಹತ್ವದ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಇನ್ನು ಮುಂದೆ ಎಲ್ಲ ಜಿಲ್ಲೆಗಳಲ್ಲಿ ನಡೆಸಲು ಪಕ್ಷದ ವರಿಷ್ಠರು ತೀರ್ಮಾನಿಸಿದ್ದಾರೆ.

Advertisement

ಮೊದಲ ರಾಜ್ಯ ಕಾರ್ಯಕಾರಿಣಿ ಸಭೆಯು ದ.ಕ. ಜಿಲ್ಲೆಯಲ್ಲಿ ನ. 5ರಂದು ಮಂಗಳೂರಿನಲ್ಲಿ ನಿಗದಿಯಾಗಿದೆ. ಸಾಮಾನ್ಯವಾಗಿ ಮೂರು ತಿಂಗಳಿಗೊಮ್ಮೆ ನಡೆಯುತ್ತಿದ್ದ ಈ ಸಭೆಯನ್ನು ಇನ್ನು ಮುಂದೆ ಪ್ರತಿ ತಿಂಗಳು ಒಂದೊಂದು ಜಿಲ್ಲೆಯಲ್ಲಿ ನಡೆಸಲು ಉದ್ದೇಶಿಸಲಾಗಿದೆ.

ರಾಜ್ಯದಲ್ಲಿ ಮುಂದಿನ ಎರಡು ವರ್ಷಗಳು ಚುನಾವಣೆಯ ದೃಷ್ಟಿಯಲ್ಲಿ ಮಹತ್ವದ ಕಾಲಘಟ್ಟವಾಗಿದೆ. ಗ್ರಾ. ಪಂ., ಲೋಕಸಭಾ ಉಪ ಚುನಾವಣೆ, ತಾಲೂಕು, ಜಿ. ಪಂ. ಚುನಾವಣೆಗಳು ಹಾಗೂ 2023ರ ವೇಳೆಗೆ ವಿಧಾನಸಭಾ ಚುನಾವಣೆ ಎದುರಾಗಲಿದೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷ ಸಂಘಟನೆಯ ಕಾರ್ಯತಂತ್ರವಾಗಿ ಬಿಜೆಪಿ ಜಿಲ್ಲೆಗಳಲ್ಲಿ ರಾಜ್ಯ ಮಟ್ಟದ ಕಾರ್ಯಕಾರಿಣಿ ಸಭೆ ನಡೆಸುವ ಉಪಕ್ರಮವನ್ನು ಆರಂಭಿಸಿದೆ. ಜಿಲ್ಲಾಮಟ್ಟದಲ್ಲಿ ಇಂತಹ ಸಭೆ ನಡೆದಾಗ ವರಿಷ್ಠ ನಾಯಕರು ಮತ್ತು ವಿವಿಧ ಘಟಕಗಳ ಮುಖ್ಯಸ್ಥರು ಜಿಲ್ಲೆಗೆ ಆಗಮಿಸುವ ಹಿನ್ನೆಲೆಯಲ್ಲಿ ಹೊಸ ಸಂಚಲನ ಮತ್ತು ತಳಮಟ್ಟದಲ್ಲಿ ಪಕ್ಷ ಸಂಘಟನೆ ಕಾರ್ಯ ಇನ್ನಷ್ಟು ಚುರುಕುಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಮಂಗಳೂರಿನಲ್ಲಿ ಎರಡು ದಶಕದ ಬಳಿಕ
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ. ಬಿಜೆಪಿ ಕೋರ್‌ ಕಮಿಟಿ ಸಭೆ 2017ರ ನವೆಂಬರ್‌ನಲ್ಲಿ ಮಂಗಳೂರಿನಲ್ಲಿ ನಡೆದಿದ್ದು, ಇದರಲ್ಲಿ ರಾಜ್ಯ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಪಕ್ಷದ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆದಿತ್ತು.

ಮಂಗಳೂರು ಸಭೆಗೆ ಪಕ್ಷದ ಪ್ರಮುಖರು
ಮಂಗಳೂರಿನಲ್ಲಿ ನ. 5ರಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅಧ್ಯಕ್ಷತೆಯಲ್ಲಿ ಜರಗಲಿರುವ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಕೋರ್‌ ಕಮಿಟಿ ಸದಸ್ಯರಾದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ , ರಾಷ್ಟ್ರೀಯ ಸಂಚಾಲಕ ಬಿ.ಎಲ್‌. ಸಂತೋಷ್‌, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಡಿ.ವಿ. ಸದಾನಂದ ಗೌಡ, ರಾಜ್ಯ ಬಿಜೆಪಿ ಉಸ್ತುವಾರಿ ಸಿ.ಟಿ. ರವಿ, ರಾಜ್ಯ ಸಮಿತಿ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪ್ರಕೋಷ್ಠಗಳ ಸಂಚಾಲಕರು, ಸಹಸಂಚಾಲಕರು, ವಿಭಾಗ ಪ್ರಭಾರಿಗಳು, ಸಹ ಪ್ರಭಾರಿಗಳು ಸೇರಿದಂತೆ ಸುಮಾರು 150 ಮಂದಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Advertisement

ಎಲ್ಲ ಜಿಲ್ಲೆಗಳಲ್ಲಿ ಕಾರ್ಯಕಾರಿಣಿ ಸಭೆ
ಪಕ್ಷದ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆ ಇನ್ನು ಮುಂದೆ ಎಲ್ಲ ಜಿಲ್ಲೆಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ. ಪ್ರತಿ ತಿಂಗಳು ರಾಜ್ಯದ ಒಂದೊಂದು ಜಿಲ್ಲೆಗಳಲ್ಲಿ ಕಾರ್ಯಕಾರಿಣಿ ಸಭೆ ಜರಗಲಿದೆ. ಇದರನ್ವಯ ಪ್ರಥಮ ಸಭೆ ನ.5 ರಂದು ಮಂಗಳೂರಿನಲ್ಲಿ ನಿಗದಿಯಾಗಿದೆ. ಪಕ್ಷದ ನೂತನ ಉಪಕ್ರಮ ಪಕ್ಷದ ಕಾರ್ಯಕಾರಿಣಿ ಸಮಿತಿ ಪ್ರತಿಯೊಂದು ಜಿಲ್ಲೆಗೂ ಭೇಟಿ ನೀಡುವುದಕ್ಕೂ ಪೂರಕವಾಗಲಿದೆ.
-ನಳಿನ್‌ ಕುಮಾರ್‌ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next