Advertisement

ಕೇಂದ್ರದ ಸೂಚನೆ ಬಳಿಕ ತೀರ್ಮಾನ

10:17 AM May 05, 2020 | Suhan S |

ಕೋವಿಡ್ 19 ಸಮಸ್ಯೆಗೆ ಸಿನಿಮಾರಂಗ ಅಕ್ಷರಶಃ ತತ್ತರಿಸಿದೆ. ಕಾರ್ಮಿಕರ ಸಮಸ್ಯೆಯಂತೂ ಹೇಳತೀರದು. ನಿರ್ಮಾಪಕರಿಗೆ ಆಗುತ್ತಿರುವ ತೊಂದರೆಯೂ ಇದಕ್ಕೆ ಹೊರತಾಗಿಲ್ಲ. ಈಗಾಗಲೇ ಲಾಕ್‌ಡೌನ್‌ ಅನ್ನು ತುಸುಮಟ್ಟಿಗೆ ಸಡಿಲಗೊಳಿಸಲಾಗಿದೆ. ಎಲ್ಲಾ ವಲಯಗಳಲ್ಲೂ ಒಂದಷ್ಟು ಕೆಲಸಗಳು ಶುರುವಾಗಿವೆ.

Advertisement

ಈಗ ಚಿತ್ರ ರಂಗ ಕೂಡ ತನ್ನ ಕಾರ್ಯಚಟುವಟಕೆಗೆ ಸಜ್ಜಾಗಿದ್ದರೂ, ಸರ್ಕಾರ ಮಾತ್ರ ಇನ್ನೂ ಶೂಟಿಂಗ್‌ಗೆ ಅನುಮತಿ ಕೊಟ್ಟಿಲ್ಲ. ಆ ನಿಟ್ಟಿನಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌ ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಈ ಸಂಬಂಧ “ಉದಯವಾಣಿ’ ಜೊತೆ ಮಾತನಾಡಿದ ಫಿಲ್ಮ್ ಛೇಂಬರ್‌ ಅಧ್ಯಕ್ಷ ಜೈರಾಜ್‌, “ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ಕುರಿತಂತೆ ಮಾತುಕತೆ ನಡೆಯುತ್ತಿದೆ. ಈಗಾಗಲೇ ಟೆಲಿವಿಷನ್‌ ಅಸೋಸಿಯೇಷನ್‌ನಿಂದ ಸಿಎಂಗೆ ಮನವಿ ಮಾಡಲಾಗಿದೆ. ಆದರೆ, ಅದಕ್ಕಿನ್ನೂ ಯಾವುದೇ ಉತ್ತರ ಬಂದಿಲ್ಲ. ಸದ್ಯಕ್ಕೆ ಕೇಂದ್ರ ಸರ್ಕಾರ ಒಂದು ಸೂಚನೆ ಕೊಟ್ಟಿದೆ. ಈಗಾಗಲೇ ಮಾರ್ಗಸೂಚಿ ಬಿಡುಗಡೆಯಾಗಿದೆ ಎನ್ನಲಾಗಿದೆ. ಆದರೆ ಆ ಪ್ರತಿ ನಮ್ಮ ಕೈಗೆ ಸಿಕ್ಕಿಲ್ಲ.

ಅದನ್ನು ನೋಡಿ, ಏನೆಲ್ಲಾ ಸೂಚನೆ ನೀಡಿದ್ದಾರೆ ಎಂಬುದನ್ನು ಗಮನಿಸಿ ನಾವು ಪ್ರತಿಕ್ರಿಯೆ ಕೊಡುತ್ತೇವೆ. ಸದ್ಯಕ್ಕೆ ಶೂಟಿಂಗ್‌ಗೆ ಮಾತ್ರ ಅನುಮತಿ ಕೋರುತ್ತಿದ್ದೇವೆ. ಚಿತ್ರಮಂದಿರಗಳ ಆರಂಭ ಕಷ್ಟ. ಯಾಕೆಂದರೆ, ಅಲ್ಲಿ ಜನರು ಬರುತ್ತಾರೆ ಎಂಬುದನ್ನು ಸ್ಪಷ್ಟವಾಗಿ ಹೇಳಲು ಆಗಲ್ಲ. ಸರ್ಕಾರ ಕೂಡ ಅದಕ್ಕೆ ಅನುಮತಿಯನ್ನೇ ಇನ್ನೂ ನೀಡಿಲ್ಲ. ಇನ್ನು, ಚಿತ್ರೀಕರಣದಲ್ಲಿ ಭಾಗವಹಿಸುವ ಎಲ್ಲಾ ಕಾರ್ಮಿಕರಿಗೆ, ತಂತ್ರಜ್ಞರಿಗೆ ಆರೋಗ್ಯ ವಿಮೆ, ಜೀವ ವಿಮೆ ಮಾಡಿಸಬೇಕು ಇತ್ಯಾದಿ ಸೂಚನೆಗಳು ಇವೆ ಎಂದು ಹೇಳಲಾಗುತ್ತಿದೆ. ಈ ರೀತಿಯ ಕಟ್ಟುನಿಟ್ಟಿನ ಸೂಚನೆ ಇದ್ದರೆ, ಕಷ್ಟ ಆಗಬಹುದು. ಕೇಂದ್ರ ಸರ್ಕಾರ ಏನೆಲ್ಲಾ ಸೂಚನೆ ಕೊಟ್ಟಿದೆ ಎಂಬುದನ್ನು ನೋಡಬೇಕಿದೆ.

ನಾವು ಎರಡು ದಿನದಲ್ಲಿ ಫಿಲ್ಮ್ ಛೇಂಬರ್‌ ಓಪನ್‌ ಮಾಡ್ತೀವಿ. ಆ ಬಳಿಕ ಪದಾಧಿಕಾರಿಗಳ ಜೊತೆ ಚರ್ಚಿಸಿ, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ, ಆಮೇಲೆ ಏನು ಮಾಡಬೇಕು ಎಂಬುದನ್ನು ಯೋಚಿಸುತ್ತೇವೆ. ಶೂಟಿಂಗ್‌ಗೆ ಅನುಮತಿ ನೀಡಿದರೆ, ಸಾಮಾಜಿಕ ಅಂತರ ಕಾಪಾಡಿಕೊಂಡು ಕೆಲಸ ಮಾಡ್ತೀವಿ. ಆದರೆ, ಅವಕಾಶ ಕೊಡುತ್ತಾರೋ, ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ ಎನ್ನುತ್ತಾರೆ ಅಧ್ಯಕ್ಷ  ಜೈರಾಜ್‌.

Advertisement

Udayavani is now on Telegram. Click here to join our channel and stay updated with the latest news.

Next