ಅಂಕೋಲಾ: ತಾಲೂಕಿನಾದ್ಯಂತ ಭೀಕರ ಬರಗಾಲ ಎದುರಾಗಿದೆ. ಈ ವೇಳೆ ಅನೇಕರು ಜಲದಾನ ಮಾಡುವುದರ ಮೂಲಕ ಸಾರ್ವಜನಿಕರ ಸೇವೆಯಲ್ಲಿ ನಿರತರಾಗಿದ್ದಾರೆ.
ಪಟ್ಟಣ ವ್ಯಾಪ್ತಿಯಲ್ಲಿನ ಹೊನ್ನೆಕೇರಿ ಕನಸೆಗದ್ದೆಯಲ್ಲಿ ನೀರಿನ ಸಮಸ್ಯೆಯಿದ್ದು, ಇಲ್ಲಿ ಪುರಸಭೆ ಸದಸ್ಯೆ ಶಾಂತಲಾ ಅರುಣ ನಾಡಕರ್ಣಿ ತಮ್ಮ ಬಾವಿಯಿಂದ ಪಂಪ್‌ಸೆಟ್ ಮುಖಾಂತರ ಜನರಿಗೆ ನೀರು ನೀಡುತ್ತಿದ್ದಾರೆ. ಬೆಳಂಬಾರದಲ್ಲಿಯೂ ದಂತ ವೈದ್ಯ ರವಿ ಗೌಡ ನೀರನ್ನು ಸಾರ್ವಜನಿಕರಿಗೆ ಕೊಡುತ್ತಿದ್ದಾರೆ.
ಶಾಂತಲಾ ನಾಡಕರ್ಣಿಯವರು ತಮ್ಮ ಸ್ವಂತ ತೋಟದ ತೆಂಗು ಅಡಿಕೆ ಮರಗಳಿಗೆ ನೀರು ಹಾಕುವುದನ್ನು ನಿಲ್ಲಿಸಿ, ಹೊನ್ನೇಕೆರಿ ಭಾಗದ ಜನರ ಸಮಸ್ಯೆ ಮನಗಂಡು ನೀರು ನೀಡುತ್ತಿದ್ದಾರೆ. ಕಳೆದ 3 ವರ್ಷದಿಂದ ಬೇಸಿಗೆಯಲ್ಲಿ ನೀರಿನ ಕೊರತೆ ಇರುವ ಕಡೆ ನೀರನ್ನು ಪೂರೈಸುತ್ತಿದ್ದಾರೆ.
ಇತ್ತ ಬೆಳಂಬಾರ ಗ್ರಾಮದಲ್ಲಿ ನೀರಿಲ್ಲದೆ ಜನರ ಗೋಳು ಹೇಳತಿರದಾಗಿದ್ದು, ನೀರಿಲ್ಲದೆ ಪರಿತಪಿಸುತ್ತಿರುವ ಜನರಿಗೆ ವೈದ್ಯ ರವಿ ಗೌಡ ತಮ್ಮ ತೋಟದಲ್ಲಿ ಹಾಕಿರುವ ಬೋರ್‌ವೇಲ್ನಿಂದ ನೀರನ್ನು ನೀಡುತ್ತಿದ್ದಾರೆ. ನಾವು ಈಗಾಗಲೇ ಪ್ರತಿದಿನ ಮಧ್ಯಾಹ್ನದವರೆಗೆ ಸಾಕಷ್ಟು ನೀರನ್ನು ಕೊಡುತ್ತೇವೆ. ಮುಂದೆಯೂ ಪುರಸಭೆ ಟ್ಯಾಂಕರ್ ನೀಡಿದರೆ ಅವಶ್ಯಕವಿರುವ ಅಂಬಾರಕೊಡ್ಲ, ಪುರಲಕ್ಕಿಬೇಣ, ಅಜ್ಜಿಕಟ್ಟಾದ ಹರಿಜನ ಕೇರಿಗೆ ನೀರು ನೀಡಲು ಸಿದ್ಧರಿದ್ದೇವೆ. ದುಡಿಯುವ ಕೈಗಳ ಸಮಯ ಮತ್ತು ಶ್ರಮ ಉಳಿತಾಯ ಮಾಡಬೇಕೆನ್ನುವುದು ನಮ್ಮ ಉದ್ದೇಶವಾಗಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಅರುಣ ನಾಡಕರ್ಣಿ ತಿಳಿಸಿದ್ದಾರೆ. ನೀರಿಲ್ಲದೆ ಪರಿತಪಿಸುತ್ತಿರುವ ಜನರಿಗೆ ನೀರನ್ನು ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
•ಅರುಣ ಶೆಟ್ಟಿ