ಕಲಬುರಗಿ: ಕೃಷ್ಣಾ ಮತ್ತು ಭೀಮಾ ನದಿ ಕಣಿವೆಯ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶದಲ್ಲಿ ನೀರಿನ ಅಭಾವ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಜಲ ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನಾಲ್ಕು ರಾಜ್ಯಗಳ ಜನಪ್ರತಿನಿಧಿಗಳು, ಜಲ ತಜ್ಞರು ಮತ್ತು ವಿವಿಧ ಸಂಘಟನೆಗಳನ್ನು ಒಳಗೊಂಡ ಸಮಾವೇಶ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ತೆಲಂಗಾಣ ಜಲ ಸಂಪನ್ಮೂಲ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿ. ಪ್ರಕಾಶರಾವ್ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲ ಸಂರಕ್ಷಣೆ ಬಗ್ಗೆ ತೆಲಂಗಾಣದಲ್ಲಿ ಈಗಾಗಲೇ ಅರಿವು ಮೂಡಿಸುವ ಕಾರ್ಯ ಆಗುತ್ತಿದೆ. ವಿವಿಧ ಸಂಘಟನೆಗಳ ಒಕ್ಕೂಟದೊಂದಿಗೆ ‘ಜಲ ಭಗೀರತಿ’, ‘ಜಲ ಬಿರಾದಾರಿ’ ಎನ್ನುವ ಸಮಾವೇಶಗಳನ್ನು ಸಂಘಟಿಸಲಾಗುತ್ತಿದೆ. ಮೇ ತಿಂಗಳಲ್ಲಿ ನಡೆದ ಸಮಾವೇಶದಲ್ಲಿ ಜಲ ತಜ್ಞ ರಾಜೇಂದ್ರ ಸಿಂಗ್ ಪಾಲ್ಗೊಂಡಿದ್ದರು. ಇದೇ ಮಾದರಿಯಲ್ಲಿ ಕೃಷ್ಣಾ ಮತ್ತು ಭೀಮಾ ಕೊಳ್ಳದ ಪ್ರದೇಶದಲ್ಲಿ ಸಮಾವೇಶ ಆಯೋಜಿಸಲಾಗುವುದು ಎಂದರು.
ಗಿಡ ಮರಗಳನ್ನು ಕಡಿದು ಪರಿಸರ ನಾಶ ಮಾಡಿದ್ದರಿಂದ ಮಳೆ ಕೊರತೆ ಉಂಟಾಗುತ್ತಿದೆ. ಬರ ಪೀಡಿತ ಪ್ರದೇಶದಲ್ಲಿ ವಾಡಿಕೆಯಷ್ಟು ಮಳೆ ಆಗುತ್ತಿಲ್ಲ. ಇದರಿಂದ ದಿನದಿಂದ ದಿನಕ್ಕೆ ನೀರಿನ ಬವಣೆ ಹೆಚ್ಚಾಗಿದೆ. ಅಂತರ್ಜಲ ಮಟ್ಟ ಪಾತಾಳ ತಲುಪಿದೆ. ಹೀಗಾಗಿ ಈಗಲೇ ಜಾಗೃತವಾಗಿ ಜಲ ಸಂರಕ್ಷಣೆ ಮಾಡುವ ಅವಶ್ಯತೆ ಇದೆ. ಇಲ್ಲವಾದಲ್ಲಿ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ ಎಂದರು.
ಮನೆಯಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳಬೇಕು. ಹೊಲ, ಗದ್ದೆಗಳಲ್ಲಿ ಮಳೆ ನೀರು ಬಿದ್ದ ಸ್ಥಳದಲ್ಲೇ ಇಂಗಿಸುವ ಕೆಲಸವಾಗಬೇಕು. ಅಲ್ಲಲ್ಲಿ ಚೆಕ್ ಡ್ಯಾಂಗಳನ್ನು ನಿರ್ಮಿಸಬೇಕು. ಕೆರೆ, ನದಿಗಳಲ್ಲಿ ತುಂಬಿರುವ ಹೂಳೆತ್ತುವ ಕಾರ್ಯವಾಗಬೇಕು. ಕೆರೆಗಳು, ಚೆಕ್ ಡ್ಯಾಂಗಳ ಬದುವಿನಲ್ಲಿ ಮರಗಳನ್ನು ಬೆಳೆಸಬೇಕು. ನಗರ, ಪಟ್ಟಣಗಳಲ್ಲಿ ಸ್ನಾನ ಮಾಡಿದ ನೀರನ್ನು ಚರಂಡಿಗೆ ಹರಿಬಿಡದೆ ಮನೆ ಅಂಗಳದಲ್ಲೇ ಇಂಗಿಸಬೇಕೆಂದರು.
ಆಳಂದ ತಾಲೂಕಿನಲ್ಲಿ ಮಾಜಿ ಶಾಸಕ ಬಿ.ಆರ್. ಪಾಟೀಲ ಐದು ಚೆಕ್ ಡ್ಯಾಂಗಳನ್ನು ನಿರ್ಮಿಸಿದ್ದಾರೆ. ಅಲ್ಲಿ ಸುಮಾರು 2.5 ಕೋಟಿ ಲೀಟರ್ ನೀರು ಸಂಗ್ರಹವಿದೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿದ್ದು, ಅಕ್ಕ-ಪಕ್ಕದ ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತಿದೆ. ಈ ಮಾದರಿಯನ್ನು ಇತರ ಕಡೆಗಳಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಹೈದ್ರಾಬಾದ್ ಸುತ್ತಮತ್ತಲಿನ ರಂಗಾರೆಡ್ಡಿ, ಕರೀಂ ನಗರ, ನಲ್ಗೊಂಡ ಜಿಲ್ಲೆಗಳಲ್ಲಿ 181 ನೀರು ಮರುಪೂರಣ ಘಟಕಗಳನ್ನು ಸ್ಥಾಪಿಸಲಾಗಿದೆ. ಇದೀಗ 600 ಗ್ರಾಮದಲ್ಲಿ ಇದೇ ಮಾದರಿಯ ಮರುಪೂರಣ ಘಟಕಗಳ ಸ್ಥಾಪನೆಗೆ ಸರ್ಕಾರ 70 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಜತೆಗೆ ಚೆಕ್‌ಡ್ಯಾಂ ನಿರ್ಮಾಣಕ್ಕೆ ನಾಲ್ಕು ಸಾವಿರ ಕೋಟಿ ರೂ. ವ್ಯಯಿಸಲು ತೆಲಂಗಾಣ ಸರ್ಕಾರ ತೀರ್ಮಾನಿಸಿದೆ ಎಂದರು.
ಜಲ ಸಂರಕ್ಷಣೆ ಬಗ್ಗೆ ವಿವಿಧ ಸಂಘಟನೆಗಳಿಂದ ಹಿಡಿದು ಶಾಲಾ-ಕಾಲೇಜು ವಿದ್ಯಾರ್ಥಿಗಳ ವರೆಗೆ ಅರಿವು ಮೂಡಿಸುವ ಕೆಲಸವಾಗಬೇಕು. ಇದಕ್ಕೆ ಜನಪ್ರತಿನಿಧಿಗಳು, ಸರ್ಕಾರಗಳ ಸಹಕಾರ ಅಗತ್ಯ.ಅಲ್ಲದೇ, ಜಲ ಸಂರಕ್ಷಣೆಗೆ ನಿರ್ದಿಷ್ಟ ಅನುದಾನವನ್ನು ಸರ್ಕಾರಗಳು ಮೀಸಲಿಡಬೇಕು ಎಂದರು.
ಮಾಜಿ ಶಾಸಕ ಬಿ.ಆರ್. ಪಾಟೀಲ ಮಾತನಾಡಿ, ಆಳಂದದಲ್ಲಿ ನೀರು ಸಂಗ್ರಹ ಯೋಜನೆಗೆ ನಾನು ಶಾಸಕನಾಗಿದ್ದಾಗ 90 ಕೋಟಿ ರೂ. ಅನುದಾನ ಕೇಳಿದ್ದೆ. ಆದರೆ, ಸರ್ಕಾರ 20 ಕೋಟಿ ರೂ. ಅನುದಾನ ಕೊಟ್ಟಿತ್ತು ಎಂದರು. ಮಹಿಳಾ ಜನವಾದಿ ಸಂಘಟನೆ ಉಪಾಧ್ಯಕ್ಷೆ ಕೆ.ನೀಲಾ, ಭೂ ತಜ್ಞ ನಸೀರುಲ್ಲಾ, ಡಾ| ಂಪತ್‌ರಾವ್ ಇದ್ದರು.