Advertisement

ಸನ್ನಿ ಕಾರ್ಯಕ್ರಮ ಬೇಕೋ ಬೇಡವೋ ಬೇಗ ನಿರ್ಧರಿಸಿ

10:05 AM Dec 22, 2017 | Team Udayavani |

ಬೆಂಗಳೂರು: ಹೊಸ ವರ್ಷಾಚರಣೆ ದಿನದಂದು ಬಾಲಿವುಡ್‌ ನಟಿ ಸನ್ನಿಲಿಯೋನ್‌ ನೃತ್ಯ ಕಾರ್ಯಕ್ರಮ ಆಯೋಜನೆಗೆ ಅನುಮತಿ ನೀಡುವ ಸಂಬಂಧ ಅರ್ಜಿದಾರರ ಮನವಿ ಪರಿಗಣಿಸಿ ಕಾನೂನು ಪ್ರಕಾರ ಡಿ. 25ರೊಳಗೆ ನಿರ್ಧಾರ ತೆಗೆದುಕೊಳ್ಳುವಂತೆ ರಾಜ್ಯಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

Advertisement

ಸನ್ನಿಲಿಯೋನ್‌ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ ನಗರ ಪೊಲೀಸರ ಕ್ರಮ ಪ್ರಶ್ನಿಸಿ ಆಯೋಜಕರಾದ ಟ್ರೈಮ್ಸ್‌ ಕ್ರಿಯೇಷನ್ಸ್‌ ಸಂಸ್ಥೆ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಗುರುವಾರ ಇತ್ಯರ್ಥಪಡಿಸಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ರಜಾಕಾಲದ ಏಕಸದಸ್ಯ ಪೀಠ ಈ ನಿರ್ದೇಶನ ನೀಡಿದೆ.

ಹೊಸ ವರ್ಷಾಚರಣೆ ದಿನ ಇದೇ ರೀತಿಯ ಎಷ್ಟು ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗಿದೆ ಎಂಬುದರ ಬಗ್ಗೆ ಪೊಲೀಸರು ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದು ನಗರದಲ್ಲಿ ಯಾವುದೇ ಸಂಸ್ಥೆಗೂ ಅನುಮತಿ ನೀಡಿಲ್ಲವೆಂದು ತಿಳಿಸಿದ್ದಾರೆ.ಅರ್ಜಿದಾರರು ಸಲ್ಲಿಸಿರುವ ಮನವಿ ಪತ್ರದಲ್ಲಿ ಕೆಲವೊಂದು ಆಕ್ಷೇಪಣೆಗಳಿಗೆ ಸ್ಪಷ್ಟೀಕರಣ ಬೇಕಿದ್ದು ಅದಕ್ಕಾಗಿ ಅನುಮತಿ ನೀಡಲಾಗಿಲ್ಲ. ಜೊತೆಗೆ ಈಗಾಗಲೇ ಪೊಲೀಸ್‌ ಆಯುಕ್ತರು ಹೊಸ ವರ್ಷಾಚರಣೆ ದಿನ ಕೈಗೊಂಡಿರುವ ಭದ್ರತಾ ಕ್ರಮಗಳ ಬಗೆಗಿನ ವಿವರಗಳನ್ನೊಳಗೊಂಡ ಅಫಿಡವಿಟ್‌ನ್ನು ಈಶಾನ್ಯ ವಿಭಾಗದ ಡಿಸಿಪಿ ಗಿರೀಶ್‌ ಪರವಾಗಿ ನ್ಯಾಯಪೀಠಕ್ಕೆ ರಾಜ್ಯಸರ್ಕಾರದ ಪರ ವಕೀಲರು ಹೇಳಿಕೆ ದಾಖಲಿಸಿದರು.

ಅನುಮತಿ ಸಾಧ್ಯವಿಲ್ಲ: ಅನುಮತಿಗೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಅರ್ಜಿದಾರರಿಗೆ ಅನುಮತಿ ನೀಡುವ ಬಗ್ಗೆ ಸರ್ಕಾರದ ನಿಲುವೇನು ಎಂಬುದನ್ನು ತಿಳಿಸುವಂತೆ ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿದಾಗ ಉತ್ತರಿಸಿದ ಸರ್ಕಾರದ ಪರ ವಕೀಲರು, ಈ ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಪಾಲ್ಗೊಳ್ಳುತ್ತಾರೆ. ಹೊಸ ವರ್ಷಾಚರಣೆ ದಿನ ನಗರಾದ್ಯಂತ ಬಿಗಿ ಪೊಲೀಸ್‌ ಬಂದೋಬಸ್ತ್ನಲ್ಲಿ ಪೊಲೀಸ್‌ ಸಿಬ್ಬಂದಿ ನಿಯೋಜನೆಗೊಂಡಿರುತ್ತಾರೆ.ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅನುಮತಿ ನಿರಾಕರಿಸಲಾಗಿದೆ. ಅನುಮತಿ ನೀಡುವುದು ಸಾಧ್ಯವಿಲ್ಲ ಎಂದು ತಿಳಿಸಿದರು.

ಅರ್ಜಿದಾರರ ಪರ ವಕೀಲರು ಇದಕ್ಕೆ ಆಕ್ಷೇಪವ್ಯಕ್ತಪಡಿಸಿ ನಗರಾದ್ಯಂತ 50ಕ್ಕೂ ಹೆಚ್ಚು ಆಯೋಜಕರಿಗೆ ಇದೇ ರೀತಿಯ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಲಾಗಿದೆ. ಆದರೆ ಡಿ.1ರಂದು ಮನವಿ ಪತ್ರ ನೀಡಿದರೂ ಅರ್ಜಿದಾರರಿಗೆ ಅನುಮತಿ ನೀಡಿಲ್ಲ. ಭದ್ರತೆ ನೆಪ ಹೇಳುತ್ತಿದ್ದಾರೆ. ನಮಗೆ ಕಡಿಮೆ ಪೊಲೀಸ್‌ ಸಿಬ್ಬಂದಿಯ ಅಗತ್ಯವಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

Advertisement

ಪೊಲೀಸರ ಆಕ್ಷೇಪಣೆಗಳೇನು? : ಡಿಸೆಂಬರ್‌ 31ರಂದು ರಾತ್ರಿ ಮಾನ್ಯತಾ ಟೆಕ್‌ಪಾರ್ಕ್‌ನಲ್ಲಿ ಟೈಮ್ಸ್‌ ಕ್ರಿಯೇಷನ್ಸ್‌ ಬಾಲಿವುಡ್‌ ನಟಿ ಸನ್ನಿಲಿಯೋನ್‌ ನೃತ್ಯ ಕಾರ್ಯಕ್ರಮ ಆಯೋಜಿಸಿದ್ದು ಅನುಮತಿ ನೀಡುವಂತೆ ಮನವಿ ಪತ್ರ ನೀಡಲಾಗಿದೆ. ಆದರೆ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ, ಅರ್ಜಿದಾರರಿಂದ ಕಾರ್ಯಕ್ರಮಕ್ಕೆ ಎಷ್ಟು ಜನ ಪಾಲ್ಗೊಳ್ಳುತ್ತಾರೆ. ಭದ್ರತೆಗೆ ಯಾವ ಕ್ರಮಗಳನ್ನು
ಅನುಸರಿಸಲಾಗಿದೆ. ಇತರೆ ಸಕ್ಷಮ ಪ್ರಾಧಿಕಾರಗಳಿಂದ ಅನುಮತಿ ಪಡೆದುಕೊಂಡಿರುವ ಪತ್ರಗಳು, ಕಾರ್ಯಕ್ರಮಕ್ಕೆ ಎಷ್ಟು ಜನಕ್ಕೆ ಆಹ್ವಾನವಿದೆ. ಮುಂಜಾಗ್ರತಾ ಕ್ರಮವಾಗಿ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದಕ್ಕೆ ಉತ್ತರ ಬೇಕಿದೆ. ಹೀಗಾಗಿ ಅನುಮತಿ ನಿರಾಕರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಪೊಲೀಸರ ಭದ್ರತೆ, ಕಾನೂನು ಸುವ್ಯವಸ್ಥೆ ನೆಪ ಪೊಲೀಸರು ಕೇಳಿರುವ ಆಕ್ಷೇಪಣೆಗಳಿಗೆ ಸಂಬಂಧಿಸಿದಂತೆ ಡಿಸಿಪಿ ಬಳಿ ಹಾಜರಾಗಿ ಅರ್ಜಿದಾರರು ಸೂಕ್ತ ಸ್ಪಷ್ಟೀಕರಣ ನೀಡಬೇಕು. ಬಳಿಕ ಈ ಸಂಬಂಧ ಅವಲೋಕಿಸಿ ಕಾನೂನು ಪ್ರಕಾರ ಡಿಸೆಂಬರ್‌ 25ರೊಳಗೆ ಕಾರ್ಯಕ್ರಮಕ್ಕೆ ಅನುಮತಿ ನೀಡುವ ಬಗ್ಗೆ ಡಿಸಿಪಿ ನಿರ್ಧಾರ ಕೈಗೊಳ್ಳಬೇಕು ಎಂದು ನ್ಯಾಯಪೀಠ ಆದೇಶ ನೀಡಿತ್ತು. ಇದಕ್ಕೂ ಮೊದಲು ನಡೆದ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಬಾಲಿವುಡ್‌ ನಟಿ ಸನ್ನಿಲಿಯೋನ್‌ ನೃತ್ಯ ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಕೆಲವು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ, ಪೊಲೀಸರು ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ನೆಪ ಹೇಳಿ ಅನುಮತಿ ನಿರಾಕರಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಈಗಾಗಲೇ ಲಕ್ಷಾಂತರ ರೂ. ಖರ್ಚು ಮಾಡಲಾಗಿದ್ದು, ಸಾವಿರಾರು ಟಿಕೆಟ್‌ ಮಾರಾಟಗೊಂಡಿವೆ. ಹೀಗಾಗಿ ಅನುಮತಿ ನೀಡಲು ನಿರ್ದೇಶಿಸುವಂತೆ ನ್ಯಾಯಪೀಠಕ್ಕೆ ಕೋರಿದರು.

 ಭದ್ರತೆ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈಗಾಗಲೇ ಅನುಮತಿ ನಿರಾಕರಣೆ„ ಮಾನ್ಯತಾ ಟೆಕ್‌ ಪಾರ್ಕಿನ ಕಾರ್ಯಕ್ರಮದ ವಿವರ ನೀಡಿಲ್ಲ ಎಂದಿರುವ ಪೊಲೀಸರು.

Advertisement

Udayavani is now on Telegram. Click here to join our channel and stay updated with the latest news.

Next