Advertisement

ವೈಜ್ಞಾನಿಕ ರಸ್ತೆ ನಿರ್ಮಾಣಕ್ಕೆ ಡಿಸೆಂಬರ್‌ ಗಡುವು

10:24 AM Oct 07, 2019 | Team Udayavani |

ಉಡುಪಿ ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳು ಚತುಷ್ಪಥವಾಗುತ್ತಿವೆ. ಇಲ್ಲಿನ ರಸ್ತೆ ಸಂಚಾರಕ್ಕೆ ಯೋಗ್ಯವಾಗಿದ್ದರೂ ಅವೈಜ್ಞಾನಿಕ ಕಾಮಗಾರಿ ಅಪಘಾತಗಳಿಗೆ ಕಾರಣವಾಗುತ್ತಿದೆ. ಅಪಾಯಕಾರಿ ಜಂಕ್ಷನ್‌, ಸರ್ವೀಸ್‌ ರಸ್ತೆ ಇಲ್ಲದಿರುವುದು, ರಾಂಗ್‌ ಸೈಡ್‌ನ‌ಲ್ಲಿ ಪ್ರಯಾಣ, ಅನಧಿಕೃತ ಡಿವೈಡರ್‌, ಇನ್ನೂ ಪೂರ್ತಿಗೊಳ್ಳದ ಫ್ಲೈಓವರ್‌ಗಳ ಬಗ್ಗೆ ವಾಸ್ತವ ವರದಿಯನ್ನು “ಉದಯವಾಣಿ’ ಪ್ರಕಟಿಸಿದೆ. ಈ ಸಂಬಂಧ ಪತ್ರಿಕೆ ಕೇಳಿದ ಪ್ರಶ್ನೆಗಳಿಗೆ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಉತ್ತರಿಸಿದ್ದಾರೆ.

Advertisement

– ಜಿಲ್ಲೆಯ ಹೆದ್ದಾರಿ ಸಂಚಾರ ದುಸ್ತರವಾಗಿದೆ. ಇದಕ್ಕೆ ಏನು ಕ್ರಮ ಕೈಗೊಂಡಿದ್ದೀರಿ?
ಹೆಜಮಾಡಿಯಿಂದ ಹೆಮ್ಮಾಡಿ-ಶಿರೂರು ವರೆಗಿನ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿದೆ. ಈ ಸಂಬಂಧ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ನವಯುಗ ಕನ್‌ಸ್ಟ್ರಕ್ಷನ್‌ ಅವರಿಂದ ವಿವರಣೆ ಕೇಳಿದ್ದಾರೆ. ವೈಜ್ಞಾನಿಕ ರೀತಿಯಲ್ಲಿ ಕಾಮಗಾರಿಗಳು ನಡೆಯದಿದ್ದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದಾರೆ.

-  ಅನಧಿಕೃತ ಡಿವೈಡರ್‌ ಕ್ರಾಸಿಂಗ್‌ಗೆ ಯಾರು ಹೊಣೆ?
ಹೆದ್ದಾರಿ ಇಲಾಖೆಯ ಪ್ರಕಾರ 2 ಕಿ.ಮೀ.ಗೊಂದರಂತೆ ಡಿವೈಡರ್‌ನಲ್ಲಿ ಕ್ರಾಸಿಂಗ್‌ ವ್ಯವಸ್ಥೆ ಇರಬೇಕು. ನೇರಾನೇರ ಕ್ರಾಸಿಂಗ್‌ ನೀಡ ಬಾರದೆಂಬ ನಿಯಮವಿದೆ. ಆದರೆ ಬಹುತೇಕ ಕಡೆ ಸ್ಥಳೀಯರ ಮತ್ತು ರಾಜಕೀಯ ಹಸ್ತಕ್ಷೇಪದಿಂದ ಕ್ರಾಸಿಂಗ್‌ ನೀಡಲಾಗಿದೆ. ಇದು ಕೂಡ ಅಪಘಾತಕ್ಕೆ ಕಾರಣವಾಗುತ್ತಿದೆ. ಇವುಗಳನ್ನು ಮುಚ್ಚಿ ನಿಯಮಗಳಂತೆಯೇ ರೂಪಿಸಲು ಇಲಾಖೆಗೆ ತಿಳಿಸಲಾಗಿದೆ.

-  ಕುಂದಾಪುರದ ಫ್ಲೈ ಓವರ್‌ ಕಾಮಗಾರಿ ಯಾವಾಗ ಪೂರ್ಣಗೊಳ್ಳಬಹುದು?
ಕಾಮಗಾರಿಯನ್ನು ಪೂರ್ಣಗೊಳಿಸಲು ನವಯುಗ ಕಂಪೆನಿಗೆ ಡಿಸೆಂಬರ್‌ವರೆಗೆ ಕಾಲಾವಕಾಶ ನೀಡಲಾಗಿದೆ. ತಪ್ಪಿದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಲಾಗಿದೆ.

-  ಕಳಪೆ ಕಾಮಗಾರಿಗೆ ಹಣ ಕಾಸು ಕೊರತೆ ಕಾರಣವೇ?
ತಲಪಾಡಿಯಿಂದ ಕುಂದಾಪುರವರೆಗಿನ ಚತುಷ್ಪಥ ಕಾಮಗಾರಿ ಪ್ರಾರಂಭದಲ್ಲಿ ವೇಗದಿಂದ ನಡೆಯುತ್ತಿತ್ತು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದಾಗಿ 2016ರಲ್ಲಿ ತುಸು ವಿಳಂಬವಾಯಿತು. ಬಳಿಕ ಹಣಕಾಸು ಸಮಸ್ಯೆ
ಎದುರಾಯಿತು. ಹಲವಾರು ಬಾರಿ ಗಡುವು ವಿಧಿಸಿದರೂ ಕೆಲಸ ಮುಗಿಯಲಿಲ್ಲ. ಈಗಾಗಲೇ ಗುತ್ತಿಗೆದಾರ ಸಂಸ್ಥೆಗೆ ಖಾಸಗಿ ಬ್ಯಾಂಕ್‌ನಿಂದ 55 ಕೋ.ರೂ. ಸಾಲ ಮತ್ತು ಕೇಂದ್ರ ಸರಕಾರದಿಂದ 7 ಕೋ.ರೂ. ನೆರವು ನೀಡಲಾಗಿದೆ.

Advertisement

-  ಸಂಸದರಾಗಿ ನೀವು ಯಾವ ಕ್ರಮ ಕೈಗೊಂಡಿದ್ದೀರಿ?
ಹೆದ್ದಾರಿಯಲ್ಲಿರುವ ಅಪಘಾತ ತಾಣಗಳನ್ನು ಗುರುತಿಸಿ ವರದಿ ಸಲ್ಲಿಸಲಾಗಿದೆ. ಹೆಚ್ಚು ಅಪಘಾತ ಸಂಭವಿಸುವ ವಲಯಗಳಲ್ಲಿ ಬ್ಯಾರಿಕೇಡ್‌ ಅಳವಡಿಸುವಂತೆ ಸೂಚನೆ ನೀಡಲಾಗಿದೆ. ಮಳೆಗಾಲದಲ್ಲಿ ಬಿದ್ದಿರುವ ಹೊಂಡಗಳನ್ನು ಮುಚ್ಚಲಾಗಿದೆ. ಡಿಸೆಂಬರ್‌ ಒಳಗೆ ಬಾಕಿ ಉಳಿದಿರುವ ಎಲ್ಲ ಕಾಮಗಾರಿ ಮುಗಿಸುವಂತೆ ಕಟ್ಟುನಿಟ್ಟಿನ ಸೂಚನೆಯನ್ನೂ ಗುತ್ತಿಗೆದಾರ ಸಂಸ್ಥೆಗೆ ನೀಡಲಾಗಿದೆ.

-  ರಾಂಗ್‌ ಸೈಡ್‌ ಸಂಚಾರ ನಿರ್ಬಂಧ ಏಕಿಲ್ಲ?
ಅಪಘಾತ ತಡೆಯುವ ನಿಟ್ಟಿನಲ್ಲಿ ಜನರೂ ಸಹಕರಿಸಬೇಕು. ಮುಖ್ಯವಾಗಿ ರಾಂಗ್‌ಸೈಡ್‌ಗಳಲ್ಲಿ ಅತೀವೇಗದಲ್ಲಿ ಸಂಚರಿಸುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಹೆಜಮಾಡಿ ಯಿಂದ ಕುಂದಾಪುರದವರೆಗೆ ಈ ಸಮಸ್ಯೆ ಇದೆ.
ಸರಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಈ ಅಂಶಗಳನ್ನೂ ಉಲ್ಲೇಖೀಸಲಾಗಿದೆ. ಅವೈಜ್ಞಾನಿಕ ಕಾಮಗಾರಿಯೇ ಇಂತಹ ಘಟನೆಗಳಿಗೆ ಕಾರಣ. ರಾಂಗ್‌ಸೈಡ್‌ ಸಂಚಾರ ಮಾಡುವವರ ಮೇಲೆ ನಿಗಾ ಇರಿಸಿ ಕೇಸು ದಾಖಲಿಸುವಂತೆ ಪೊಲೀಸ್‌ ಇಲಾಖೆಗೂ ಸೂಚನೆ ನೀಡಲಾಗಿದೆ.

ಅಪಘಾತ ವಲಯಗಳ ಸರ್ವೇ
ಉಡುಪಿ ಜಿಲ್ಲಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ ಅಪಫಾತ ವಲಯ, ಅವೈಜ್ಞಾನಿಕ ಕಾಮಗಾರಿಯ ಬಗ್ಗೆ ಈಗಾಗಲೇ ಸರ್ವೇ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ. ಜನರ ಹಿತದೃಷ್ಟಿ ಹಾಗೂ ಅಪಘಾತ ತಡೆಯಲು ತೆಗೆದುಕೊಳ್ಳುವ ಉಪಕ್ರಮಗಳ ಬಗ್ಗೆ ವರದಿಯಲ್ಲಿ ಉಲ್ಲೇಖೀಸಲಾಗಿದೆ. ಆ ಪ್ರಕಾರವೇ ಮುಂದಿನ ದಿನಗಳಲ್ಲಿ ಕಾಮಗಾರಿ ನಡೆಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗುವುದು.
-ಶೋಭಾ ಕರಂದ್ಲಾಜೆ ಸಂಸದರು,ಉಡುಪಿ-ಚಿಕ್ಕಮಗಳೂರು ಕ್ಷೇತ್ರ

Advertisement

Udayavani is now on Telegram. Click here to join our channel and stay updated with the latest news.

Next