Advertisement

ಪ್ರತಿಮೆ ಅನಾವರಣಕ್ಕೆ ಡಿ.26ರ ಗಡುವು

06:09 PM Oct 27, 2021 | Team Udayavani |

ರಾಮನಗರ: ನಗರದ ಜಿಲ್ಲಾ ಸರ್ಕಾರಿ ಕಚೇರಿಗಳ ಸಂಕೀರ್ಣದ (ಡೀಸಿ ಕಚೇರಿ) ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಮತ್ತು ನಾಡ ಪ್ರಭು ಕೆಂಪೇಗೌಡ ಅವರ ಪ್ರತಿಮೆಗಳನ್ನು ಇದೇ ಡಿ.6ರೊಳಗೆ ಅನಾವರಣಗೊಳಿಸದಿದ್ದರೆ ತಾವೇ ಸ್ವತಃ ಎರಡೂ ಪ್ರತಿಮೆಗಳನ್ನು ಅನಾವರಣಗೊಳಿಸುವುದಾಗಿ ದಲಿತ ಸಂಘಟನೆಗಳ ಮಹಾ ಒಕ್ಕೂಟ ಮತ್ತು ವಿವಿಧ ದಲಿತ ಸಂಘಟನೆಗಳ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.

Advertisement

ಜಿಲ್ಲಾ ಸರ್ಕಾರಿ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದ ವೇಳೆ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಪ್ರತಿಭಟನೆ ವೇಳೆ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಘೋಷಣೆ ಕೂಗಿದರು.

 ಕೋವಿಡ್‌ ನೆಪ ಬೇಡ: ಮುಖಂಡ ಕೋಟೆ ಕುಮಾರ್‌ ಮಾತನಾಡಿ, ಡಾ. ಬಿ.ಆರ್‌.ಅಂಬೇಡ್ಕರ್‌ ಮತ್ತು ಕೆಂಪೇಗೌಡರ ಪ್ರತಿಮೆ ಸ್ಥಾಪಿಸಿ 2 ವರ್ಷಗಳಿಗೂ ಹೆಚ್ಚು ಸಮಯವಾಗಿದೆ. ಆದರೆ ಕೋವಿಡ್‌ ನೆಪವೊಡ್ಡಿ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿಮೆಗಳ ಅನಾವರಣಕ್ಕೆ ಮುಂದಾಗಿಲ್ಲ. ಚುನಾವಣೆಗಳು ಮತ್ತು ಸರ್ಕಾರದ ಎಲ್ಲಾ ಕಾರ್ಯಕ್ರಮಗಳು ಸರಾಗವಾಗಿ ನಡೆಯುತ್ತಿದೆ. ಆದರೆ ಪ್ರತಿಮೆಗಳ ಅನಾವರಣದ ವಿಚಾರ ಬಂದಾಗ ಕೋವಿಡ್‌ ನಿಯಮ ಅಡ್ಡಿಯಾಗುತ್ತವೆಯೇ? ಎಂದು ಪ್ರಶ್ನಿಸಿದರು. ಕೋವಿಡ್‌ ಸೋಂಕಿನ ಆತಂಕವೇ ಇಲ್ಲದೆ ಚುನಾವಣೆಗಳು ನಡೆಯುತ್ತಿವೆ.  ಪ್ರತಿಮೆಗಳ ಅನಾವರಣಕ್ಕೆ ಸೋಂಕು ಅಡ್ಡಿಯಾಗುವುದೇ? ಎಂದರು. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ತಕ್ಷಣ ಈ ಪ್ರತಿಮೆಗಳ ಅನಾವರಣಕ್ಕೆ ದಿನಾಂಕ ನಿಗದಿಮಾಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ:- ಬೇರೆ ಶಾಲೆಗೆ ಸೇರಲು ಟೀಸಿ ನೀಡದ ಶಾಲೆ

ನಿರಂತರ ಹೋರಾಟ: ವಿಶ್ವ ಶ್ರೇಷ್ಠ ಸಂವಿಧಾನ ಕೊಟ್ಟ ಬಾಬಾ ಸಾಹೇಬರ ಪ್ರತಿಮೆ ಮತ್ತು ನಾಡು ಕಟ್ಟಿದ ಕೆಂಪೇಗೌಡರ ಪ್ರತಿಮೆ ಸ್ಥಾಪನೆಗೆ ನಿರಂತರ ಹೋರಾಟ ನಡೆಸಿದ ನಂತರ ಡಿ.ಕೆ.ಶಿವಕುಮಾರ್‌ರ ಶ್ರಮದಿಂದ ಜಿಲ್ಲಾ ಸರ್ಕಾರಿ ಕಚೇರಿಗಳ ಆವರಣದಲ್ಲಿ ಸ್ಥಾಪನೆಯಾಗಿದೆ. ಆದರೆ ಹಾಲಿ ಸರ್ಕಾರ ಕೋವಿಡ್‌ ನೆಪವೊಡ್ಡಿ ಪ್ರತಿಮೆಗಳ ಅನಾವರಣವನ್ನೇ ಮಾಡಿಲ್ಲ.

Advertisement

ಇಲ್ಲ ಸಲ್ಲದ ನೆಪ ಒಡ್ಡದೆ ಪ್ರತಿಮೆಗಳನ್ನು ಅನಾವರಣಗೊಳಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಪ್ರಮುಖರಾದ ಶಿವಶಂಕರ್‌, ಗುಡ್ಡೆ ವೆಂಕಟೇಶ್‌, ಪುಟ್ಟಸ್ವಾಮಿ, ಚಲವರಾಜು, ಗೋವಿಂದರಾಜು, ಶೇಖರ್‌, ಪ್ರಕಾಶ, ರಮೇಶ್‌, ಭೈರವ, ಗುರುಮಲ್ಲಯ್ಯ, ನಿಖೀಲ್‌ ಸಜ್ಜೆಲಿಂಗಯ್ಯ ಮತ್ತಿತರರಿದ್ದರು.

ಎರಡು ವರ್ಷ ಕಳೆದರೂ ಪ್ರತಿಮೆ ಅನಾವರಣ ಇಲ್ಲ – ದಲಿತ ಸಂಘಟನೆಗಳ ಮಹಾ ಒಕ್ಕೂಟದ ಅಧ್ಯಕ್ಷ ಎಂ.ಜಗದೀಶ್‌ ಮಾತನಾಡಿ, ಬಾಬಾ ಸಾಹೇಬರ ಮತ್ತು ಕೆಂಪೇಗೌಡರ ಪ್ರತಿಮೆ ಅನಾವರಣವನ್ನು ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಡಿ.6 ಅಂಬೇಡ್ಕರ್‌ ಅವರ ಪರಿನಿರ್ವಾಣ ದಿನದೊಳಗೆ ನೆರೆವೇರಿಸಬೇಕು.

ಇದು ಸಾಧ್ಯವಾಗದಿದ್ದರೆ ಡಿ.6ರಂದು ತಮ್ಮ ಸಂಘಟನೆಯೂ ಸೇರಿ ವಿವಿಧ ಸಮಾನ ಮನಸ್ಕ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಎರಡೂ ಪ್ರತಿಮೆ ಅನಾವರಣಗೊಳಿಸುವುದಾಗಿ ಎಚ್ಚರಿಸಿದರು. ಇಬ್ಬರೂ ಮಹನೀಯರ ಆದರ್ಶ ಸಮಾಜಕ್ಕೆ ಮಾರ್ಗದರ್ಶಕ. 2 ವರ್ಷ ಕಳೆದರೂ ಪ್ರತಿಮೆ ಅನಾವರಣಗೊಳಿಸದೆ ಮಹನೀಯರನ್ನು ಅವಮಾನಿಸಿದಂತಾಗಿದೆ ಎಂದು ದೂರಿದರು. ಪ್ರತಿ ಭಟನಾಕಾರರು ನೀಡಿದ ಮನವಿಯನ್ನು ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಸ್ವೀಕರಿಸಿದರು. ಪ್ರತಿಮೆಗಳ ಅನಾವರಣದ ಕುರಿತು ತಾವು ಜಿಲ್ಲಾಧಿಕಾರಿಗಳ ಬಳಿ ಚರ್ಚೆ ಮಾಡುವುದಾಗಿ ಭರವಸೆ ನೀಡಿದರು. ಇದೇ ವೇಳೆ ಪ್ರತಿಭಟನಾಕಾರರು ಡಿ.6ರೊಳಗೆ ಜಿಲ್ಲಾಡಳಿತ ತಮ್ಮ ಮನವಿಗೆ ಸ್ಪಂದಿಸದಿದ್ದರೆ, ತಾವೇ ಅನಾವರಣಗೊಳಿಸುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next