ಡಿಸೆಂಬರ್ 24- ಹೀಗೊಂದು ಶೀರ್ಷಿಕೆಯ ಚಿತ್ರ ಈಗ ಮೊದಲ ಹಂತದ ಚಿತ್ರೀಕರಣ ಮುಗಿಸಿದೆ. ಈ ಚಿತ್ರವನ್ನು ನಾಗರಾಜ್ ಎಂಜಿ ಗೌಡ ಕಥೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಈ ಚಿತ್ರದಲ್ಲಿ ನಾಯಕ ನಟರಾಗಿ ಅಪ್ಪು ಬಡಿಗೇರ, ರವಿ ಕೆ.ಆರ್.ಪೇಟೆ ಕಾಡುಮೆಣಸ, ರಘು ಶೆಟ್ಟಿ, ಜಗದೀಶ್ ಹೆಚ್. ದೊಡ್ಡಿ ಅಭಿನಯಿಸುತ್ತಿದ್ದಾರೆ. ಆನಂದ್ ಪಟೇಲ್ ಹುಲಿಕಟ್ಟೆ ಅವರು ಒಬ್ಬ ಖಡಕ್ ಪೋಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಸ್ಟಾರ್ ನಟರೊಬ್ಬರು ಚಿತ್ರದಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದಾರೆ ಎಂಬುದು ನಿರ್ದೇಶಕರ ಮಾತು.
ಎಂ.ಜಿ.ಎನ್. ಪ್ರೂಡಕ್ಷನ್ ಲಾಂಛನದಲ್ಲಿ ದೇವು ಹಾಸನ್, ವಿ.ಬೆಟ್ಟೇಗೌಡ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈಗಿನ ಕಾಲಘಟ್ಟದಲ್ಲಿ ನಡೆಯುವಂತಹ ಘಟನೆಗಳನ್ನಿಟ್ಟುಕೊಂಡು ಮಾಡೋದಿಕ್ಕೆ ಹೊರಟಿರುವಂತಹ ಚಿತ್ರ ಇದಾಗಿದ್ದು, ಭಾರತದಲ್ಲಿ ಪ್ರತಿದಿನ ಹುಟ್ಟುವ ನೂರರಲ್ಲಿ ಮೂರು ಮಕ್ಕಳು ಉಸಿರಾಟದ ಸಮಸ್ಯೆಯಿಂದ ಸಾಯುತ್ತಿದ್ದಾರೆ. ಈ ತೊಂದರೆಯಿಂದ ಸಾಯುತ್ತಿರುವ ಮಕ್ಕಳಿಗೋಸ್ಕರ ಮೆಡಿಕಲ್ ವಿದ್ಯಾರ್ಥಿಯಾದ ನಾಯಕ ರಿಸರ್ಚ್ ಮಾಡಿ ಉಸಿರಾಟದ ತೊಂದರೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಔಷಧಿ ಕಂಡುಹಿಡಿಯುತ್ತಾನೆ.
2015ರಿಂದ 2019ರೊಳಗೆ ನಡೆದ ಕೆಲ ನೈಜ ಘಟನೆಗಳನ್ನಿಟ್ಟುಕೊಂಡುಮಾಡಿಕೊಂಡಿರುವಂತಹ ಕಥೆ ಇದಾಗಿದ್ದು, ಪಕ್ಕಾ ಫ್ಯಾಮಿಲಿ ಲವ್, ಹಾರರ್, ಥ್ರಿಲ್ಲರ್ ಅಂಶಗಳೊಂದಿಗೆ ಚಿತ್ರ ಸಾಗುತ್ತದೆ. ಈ ಚಿತ್ರದಲ್ಲಿ 4 ಹಾಡುಗಳಿದ್ದು ಪ್ರವೀಣ್ ನಿಕೇತನ್ ಸಂಗೀತ ನೀಡಿದ್ದಾರೆ. ಡಾ. ವಿ.ನಾಗೇಂದ್ರಪ್ರಸಾದ್ ಹಾಗೂ ಗೀತಾ ಆನಂದ್ ಪಾಟೀಲ ಸಾಹಿತ್ಯ ಬರೆದಿದ್ದಾರೆ. ಈ ಚಿತ್ರಕ್ಕೆ ಬೆಂಗಳೂರಿನಲ್ಲಿ ಮೊದಲ ಹಂತದ ಶೂಟಿಂಗ್ ಈಗಾಗಲೇ ಮುಕ್ತಾಯವಾಗಿದೆ. ಎರಡನೇ ಹಂತದ ಚಿತ್ರೀಕರಣ ಯಲ್ಲಾಪುರ ಹಾಗೂ ದಾಂಡೇಲಿಯಲ್ಲಿ ನಡೆಸುವ ಪ್ಲಾನ್ ಚಿತ್ರತಂಡಕ್ಕಿದೆ.