Advertisement
ಮರಾಠ ವರ್ಸಸ್ ಮರಾಠಿಗ
Related Articles
Advertisement
ಹೋರಾಟದ ಹಾದಿ
1982: ಮೀಸಲಾತಿಗಾಗಿ ಮರಾಠರು ನಡೆಸುತ್ತಿರುವ ಹೋರಾಟ ಇಂದು, ನಿನ್ನೆಯದಲ್ಲ. 1982 ರಿಂದ ಈ ಹೋರಾಟ ನಡೆದಿದೆ. ಆ ವರ್ಷ ಕಾರ್ಮಿಕ ಹೋರಾಟಗಾರ ಅಣ್ಣಾ ಸಾಹೇಬ್ ಆರ್ಥಿಕತೆ ಆಧಾರದಲ್ಲಿ ಮರಾಠರಿಗೆ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದ್ದರು. ಮೀಸಲು ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅಣ್ಣಾ ಸಾಹೇಬ್ ಬೆದರಿಕೆ ಹಾಕಿದ್ದರು. ಆದರೆ ಕಾಂಗ್ರೆಸ್ ಸರಕಾರ ಈ ಬೆದರಿಕೆಗೆ ಕಿವಿಗೊಡಲಿಲ್ಲ. ಕಡೆಗೆ ಅಣ್ಣಾ ಸಾಹೇಬ್ ಆತ್ಮಹತ್ಯೆ ಮಾಡಿಕೊಂಡಿದ್ದರು.
1990ರಲ್ಲಿ ಮಂಡಲ್ ಆಯೋಗ ಜಾರಿಯಾದ ಮೇಲೆ ಆರ್ಥಿಕತೆ ಆಧಾರದ ಮೇಲೆ ಮೀಸಲಾತಿ ನೀಡಬೇಕು ಎಂಬ ವಾದ ಕಡಿಮೆಯಾಯಿತು.
2004ರಲ್ಲಿ ಮಹಾ ಸರಕಾರ ಮರಾಠ-ಕುಣಬಿ ಮತ್ತು ಕುಣಬಿ-ಮರಾಠಿಗರನ್ನು ಇತರ ಹಿಂದುಳಿದ ವರ್ಗಕ್ಕೆ ಸೇರಿಸಿತು. ಈ ಸಂದರ್ಭದಲ್ಲಿ ಮರಾಠ ಎಂದು ಗುರುತಿಸಿಕೊಂಡವರನ್ನು ಪಟ್ಟಿಯಿಂದ ಕೈಬಿಡಲಾಯಿತು. ಹೀಗಾಗಿ ಕುಣಬಿ ಜನಾಂಗ ಈಗಾಗಲೇ ಒಬಿಸಿಯಲ್ಲಿ ಸೇರ್ಪಡೆಯಾಗಿದೆ. ಮರಾಠ ಮುಖಂಡರು, ತಮ್ಮ ಜನಾಂಗವನ್ನು ಒಬಿಸಿಗೆ ಸೇರಿಸಬೇಕು ಎಂದು ಆಗ್ರಹಿಸುತ್ತಲೇ ಇದ್ದಾರೆ.
2014ರಲ್ಲಿ ಆಗಿನ ಮಹಾರಾಷ್ಟ್ರ ಮುಖ್ಯಮಂತ್ರಿ ನಾರಾಯಣ ರಾಣೆ ಅವರು ಮರಾಠರಿಗೆ ಶೇ.16 ಮತ್ತು ಮುಸ್ಲಿಮರಿಗೆ ಶೇ.5ರಷ್ಟು ಮೀಸಲಾತಿ ನೀಡಿದ್ದರು. ಈ ನಿರ್ಧಾರವನ್ನು ಬಾಂಬೆ ಹೈಕೋರ್ಟ್ ವಜಾ ಮಾಡಿತು.
2018ರಲ್ಲಿ ಮಹಾರಾಷ್ಟ್ರ ಹಲವು ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ಮೀಸಲಾತಿಗಾಗಿ ಮರಾಠ ಸಮುದಾಯ ತೀವ್ರತರನಾದ ಹೋರಾಟ ನಡೆಸಿದರೆ, ಇದಕ್ಕೆ ಪ್ರತಿಯಾಗಿ ಮೀಸಲಾತಿ ನೀಡಬಾರದು ಎಂದು ಪ್ರತಿಹೋರಾಟಗಳೂ ನಡೆದವು. ಆಗ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಸರಕಾರವಿತ್ತು. ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿದ್ದರು. 2018ರ ನ.30ರಂದು ಮರಾಠರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.16ರಷ್ಟು ಮೀಸಲಾತಿ ನೀಡಲು ಒಪ್ಪಿಗೆ ನೀಡಲಾಯಿತು.
ಕೋರ್ಟ್‌ನಲ್ಲಿ ತಡೆ
ಮೀಸಲಾತಿ ಕೊಟ್ಟಾಗಲೆಲ್ಲ ಕೋರ್ಟ್‌ಗಳು ಇದಕ್ಕೆ ತಡೆ ನೀಡಿವೆ. ಮೊದಲಿಗೆ ಬಾಂಬೆ ಹೈಕೋರ್ಟ್ ನಾರಾಯಣ ರಾಣೆ ಸರಕಾರದಲ್ಲಿ ನೀಡಲಾಗಿದ್ದ ಮೀಸಲಾತಿಯನ್ನು ರದ್ದು ಮಾಡಿತ್ತು. ದೇವೇಂದ್ರ ಫಡ್ನವೀಸ್ ಸರಕಾರದ ವೇಳೆ ಕೊಟ್ಟ ಮೀಸಲಾತಿ ನಿರ್ಧಾರವನ್ನೂ ಬಾಂಬೆ ಹೈಕೋರ್ಟ್ ಎತ್ತಿ ಹಿಡಿದು, ಉದ್ಯೋಗದಲ್ಲಿ ಶೇ.13 ಮತ್ತು ಶಿಕ್ಷಣದಲ್ಲಿ ಶೇ.12ರಷ್ಟು ಮೀಸಲಾತಿ ನೀಡಬಹುದು ಎಂದಿತ್ತು. ಆದರೆ, ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿ, ಶೇ.50ರ ಮೀಸಲಾತಿ ಮಿತಿಯನ್ನು ಒಪ್ಪಲು ಸಾಧ್ಯವಿಲ್ಲ ಎಂದಿತ್ತು. ಈ ಸಂಬಂಧ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ಸುದೀರ್ಘವಾಗಿ ವಿಚಾರಣೆ ನಡೆಸಿ ತೀರ್ಪು ನೀಡಿತ್ತು. ಈಗ ಮಹಾ ಸರಕಾರ ಮತ್ತೆ ಕ್ಯುರೇಟಿವ್ ಅರ್ಜಿ ದಾಖಲಿಸಿದ್ದು, ವಿಚಾರಣೆಗೆ ಬರಬೇಕಿದೆ.
ಯಾರಿದು ಮನೋಜ್ ಜಾರಂಗೆ?
ಮರಾಠ ಮೀಸಲಾತಿ ಹೋರಾಟದಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಿರುವ ಹೆಸರೇ ಮನೋಜ್ ಜಾರಂಗೆ ಪಟೇಲ್. ಅತ್ಯಂತ ಹೆಮ್ಮೆಯ ಮರಾಠಿಗ, ಸರಣಿ ಪ್ರತಿಭಟನಕಾರ ಮತ್ತು ಹಿಂದೊಮ್ಮೆ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಮನೋಜ್ ಜಾರಂಗೆ ಈಗ ಮರಾಠವಾಡ ಜಿಲ್ಲೆಯಲ್ಲಿ ಅತೀದೊಡ್ಡ ಹೆಸರು. ಶಾಂತಿಯುತ ಪ್ರತಿಭಟನೆಯೇ ತಮ್ಮ ಧ್ಯೇಯ ಎಂದು ಹೇಳುವ ಜಾರಂಗೆ ಅವರಿಗೆ ಅಭೂತಪೂರ್ವ ಜನಬೆಂಬಲವೂ ಇದೆ. ಈ ಹಿಂದಿನಂತೆ ಈ ಬಾರಿಯೂ ಮನೋಜ್ ಜಾರಂಗೆ ಅವರು ಮೊದಲ ಹಂತದಲ್ಲಿ ಆ.29ರಿಂದ ಮೀಸಲಾತಿಗಾಗಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಸಿಎಂ ಏಕನಾಥ ಶಿಂಧೆ ಅವರ ಭರವಸೆ ಹಿನ್ನೆಲೆಯಲ್ಲಿ ಮೊದಲ ಹಂತದ ಹೋರಾಟದಿಂದ ಹಿಂದೆ ಸರಿದಿದ್ದರು. ಆದರೆ ಮೊದಲ ಹಂತದಲ್ಲಿ ನೀಡಲಾಗಿದ್ದ ಭರವಸೆ ಈಡೇರಿಸಿಲ್ಲ ಎಂಬ ಕಾರಣಕ್ಕಾಗಿ ಮತ್ತೆ ಅ.25ರಂದು ಮನೋಜ್ ಜಾರಂಗೆ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿ, ಗುರುವಾರ ಸಂಜೆ ವಾಪಸ್ ತೆಗೆದುಕೊಳ್ಳಲಾಗಿದೆ. ಈಗ ಒಂದಷ್ಟು ಹಿಂಸಾಚಾರ ನಡೆದಿದ್ದು, ಪ್ರತಿಭಟನೆಯ ಕಾವು ಜೋರಾಗಿದೆ. ಸರ್ವಪಕ್ಷಗಳ ಸಭೆ ನಡೆದು, ಮರಾಠಿಗರಿಗೆ ಮೀಸಲಾತಿ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.