Advertisement

ದಶಕಗಳ ಕನಸು ನನಸಾಯಿತು; ಇಡೀ ದೇಶ ಕುಣಿದು ಕುಪ್ಪಳಿಸಿತು

05:51 PM Aug 06, 2019 | Team Udayavani |

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ಹಿಂಪಡೆಯುವ ಕೇಂದ್ರದ ನಿರ್ಧಾರಕ್ಕೆ ಕರ್ನಾಟಕ ಸೇರಿದಂತೆ ದೇಶಾದ್ಯಂತ ಸಂಭ್ರಮ ವ್ಯಕ್ತವಾಗಿದೆ. ಹಲವಾರು ರಾಜ್ಯಗಳಲ್ಲಿ ಜನಸಾಮಾನ್ಯರು, ಬೀದಿಗೆ ಇಳಿದು, ಪಟಾಕಿ ಸಿಡಿಸಿ, ಎಲ್ಲರಿಗೂ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು.

Advertisement

ಜಮ್ಮುವಿನಲ್ಲೇ ಸಂಭ್ರಮ: ಸೋಮವಾರ ಬೆಳಗ್ಗೆ ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು, ಈ ವಿಚಾರವನ್ನು ಪ್ರಸ್ತಾಪಿಸಿದ ಕೂಡಲೇ ಜಮ್ಮುವಿನಲ್ಲಿ ಜನರು, ಭಾನುವಾರ ಮಧ್ಯರಾತ್ರಿಯಿಂದ ಜಾರಿಗೆ ಬಂದಿರುವ ನಿಷೇಧಾಜ್ಞೆಯನ್ನೂ ಲೆಕ್ಕಿಸದೆ ಬೀದಿಗೆ ಬಂದು ಹರ್ಷೋದ್ಗಾರಗಳೊಂದಿಗೆ ಕುಣಿದು ಕುಪ್ಪಳಿಸಿದರು.

ಹಲವಾರು ಕಡೆ ಸಂಭ್ರಮದಲ್ಲಿ ಮುಳುಗಿದ ಜನತೆ ಪರಸ್ಪರ ಸಿಹಿ ಹಂಚಿ, ಅಭಿನಂದಿಸಿ ಖುಷಿ ಪಟ್ಟರು. ಅವರ ಕಂಗಳಲ್ಲಿ ದಶಕಗಳ ಕನಸೊಂದು ನನಸಾದ ಭಾವ ಮಡುಗಟ್ಟಿತ್ತು.

ಬಿಜೆಪಿ ಕಾರ್ಯಕರ್ತರ ಖುಷಿ: ಹಿಮಾಚಲ ಪ್ರದೇಶದ ಸಚಿವರಾದ ಸುರೇಶ್‌ ಭರದ್ವಾಜ್‌ ಹಾಗೂ ಶಿಮ್ಲಾದ ಮೇಯರ್‌ ಕುಸುಮ್‌ ಸಂದ್ರೇಟ್‌ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಶಿಮ್ಲಾದ ನಾಝ್ ಚೌಕ್‌ನಲ್ಲಿ ಜಮಾವಣೆಗೊಂಡು ಡೋಲು ಬಾರಿಸುತ್ತಾ, ನೃತ್ಯ ಗಾಯನಗಳ ಮೂಲಕ ಸಂಭ್ರಮಿಸಿದರು.

ಭೋಪಾಲ್‌ನಲ್ಲಿ ಹರ್ಷ: ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಸಹ ಜನರು ಸಂಭ್ರಮಾಚರಣೆಯಲ್ಲಿ ತೊಡಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಸೇನಾ ತಜ್ಞರಾದ ಕೈಲಾಶ್‌ ತ್ಯಾಗಿ, ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ವರ್ಷಗಳ ಹಿಂದೆಯೇ ರದ್ದು ಮಾಡಬೇಕಿತ್ತು. ಆಗ ಆಗದ ಕೆಲಸವನ್ನು ಕೇಂದ್ರ ಇಂದು ಮಾಡಿದೆ. ರಾಜಕೀಯ ಇಚ್ಛಾಶಕ್ತಿಯಿಂದಲೇ ಇದು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

Advertisement

ಅರುಣಾಚಲದಲ್ಲಿ ಸ್ವಾಗತ: ಈಶಾನ್ಯ ರಾಜ್ಯವಾದ ಅರುಣಾಚಲ ಪ್ರದೇಶದ ಜನತೆ, ಕೇಂದ್ರ ಸರ್ಕಾರದ ನಡೆಯನ್ನು ಸ್ವಾಗತಿಸಿದ್ದಾರೆ. ಅಲ್ಲಿ ನಾನಾ ಮಾಧ್ಯಮಗಳು ಸಂಗ್ರಹಿಸಿದ ಜನಾಭಿಪ್ರಾಯಗಳಲ್ಲಿ ಹಿರಿಯ ನಾಗರಿಕರು, ಯುವ ಜನತೆ, ವಿದ್ಯಾರ್ಥಿಗಳು, ರಾಜಕೀಯ ನಾಯಕರು ಹಾಗೂ ನಾನಾ ಕ್ಷೇತ್ರಗಳ ಗಣ್ಯರು ಕೇಂದ್ರದ ನಿಲುವನ್ನು ಸ್ವಾಗತಿಸಿದ್ದು, ಕಣಿವೆ ರಾಜ್ಯದ ಅಭಿವೃದ್ಧಿಗೆ ಹೊಸ ನಿರ್ಧಾರ ಪೂರಕವಾಗಿರಲಿದೆ ಎಂದು ಆಶಿಸಿದ್ದಾರೆ.

ಪಂಜಾಬ್‌ನಲ್ಲಿ ಸಂಭ್ರಮಕ್ಕೆ ಬ್ರೇಕ್‌
ಪಂಜಾಬ್‌ನಲ್ಲಿ ಯಾವುದೇ ಸಂಭ್ರಮಾಚರಣೆಗೆ ಅವಕಾಶ ನೀಡ ದಂತೆ ಅಲ್ಲಿನ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಆದೇಶಿಸಿದ್ದಾರೆ. ಕೇಂದ್ರದ ನಿರ್ಧಾರದ ಹಿನ್ನೆಲೆಯಲ್ಲಿ ಪಾಕಿಸ್ತಾನದಿಂದ ಯಾವುದೇ ಕ್ಷಣದಲ್ಲಿ ವಿಧ್ವಂಸಕ ಕೃತ್ಯಗಳು ನಡೆಯಬಹುದು. ಹಾಗಾಗಿ, ರಾಜ್ಯದಲ್ಲಿ ಯಾವುದೇ ಸಂಭ್ರಮಾಚರಣೆಗೆ ಅವಕಾಶ ನೀಡಕೂಡ ದೆಂದು ಅಲ್ಲಿನ ಪೊಲೀಸ್‌ ಇಲಾಖೆಗೆ ಅವರು ಸೂಚಿಸಿದ್ದಾರೆ.

70 ವರ್ಷಗಳ ನಂತರ ಸುದಿನ: ಕಾಶ್ಮೀರಿ ಪಂಡಿತರ ಸ್ವಾಗತ
“70 ವರ್ಷಗಳ ನಂತರ ಈ ಸುದಿನ ಬಂದಿದೆ. ಕಣಿವೆ ರಾಜ್ಯದಲ್ಲಿ ನಾವು ವರ್ಷಗಳಿಂದ ಅನುಭವಿಸಿದ ಹಿಂಸೆ, ಸೇವೆಗಳು ಹಾಗೂ ಸೌಲಭ್ಯಗಳಿಗೆ ನಿರ್ಬಂಧ, ಶಿಕ್ಷಣ, ಉದ್ಯೋಗ, ವ್ಯಾಪಾರಗಳಿಗೆ ನಿರ್ಬಂಧ, ಅಸುರಕ್ಷೆಯ ಭಾವ, ತ್ರಿಶಂಕು ಸ್ಥಿತಿಗಳಿಗೆ ಈಗ ಅಂತ್ಯ ಸಿಕ್ಕಿದೆ’.

– ಇದು ಕಾಶ್ಮೀರದಲ್ಲಿ ತಮ್ಮ ಮೇಲಾಗುತ್ತಿದ್ದ ಹಿಂಸೆಯನ್ನು ತಾಳಲಾರದೆ ದಶಕಗಳ ಹಿಂದೆಯೇ ಅಲ್ಲಿಂದ ಪಲಾಯನ ಮಾಡಿ ಮಹಾರಾಷ್ಟ್ರದಲ್ಲಿ ನೆಲೆಸಿರುವ ಕಾಶ್ಮೀರಿ ಪಂಡಿತರ ಪ್ರತಿಕ್ರಿಯೆ. 1990ರಲ್ಲಿ ಉಗ್ರರ ಉಪಟಳ ತಾಳಲಾರದೇ ಕಣಿವೆಯಿಂದ ಪಲಾಯನ ಮಾಡಿದೆವು. ಕಾಶ್ಮೀರದಲ್ಲಿ ಯಾವ ಕಳ್ಳರು ಇತರರ ಬದುಕುವ ಹಕ್ಕುಗಳನ್ನು ಕಸಿದುಕೊಂಡರೋ, ಅವರೇ ಇಂದು ತಮ್ಮ ಹಕ್ಕುಗಳಿಗಾಗಿ ಕೂಗಾಡುತ್ತಿದ್ದಾರೆ. ದಶಕಗಳ ಹಿಂದೆ ಅವರು ಇತರರಿಗೆ ಮಾಡಿದ್ದು ಈಗ ಅವರಿಗೇ ತಿರುಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next