Advertisement

ವಿದ್ಯಾರ್ಥಿ ಜೀವನ ಅಮೂಲ್ಯ: ಗವಿಶ್ರೀ

10:45 AM Feb 16, 2019 | |

ಯಲಬುರ್ಗಾ: ವಿದ್ಯಾರ್ಥಿಗಳು ಸಾಧನೆಯ ಗುರಿಯೊಂದಿಗೆ ಸಂಕಲ್ಪ ಮಾಡಬೇಕು. ಮನಸ್ಸಿದ್ದರೆ ನಾವು ಅಂದುಕೊಂಡಿದ್ದನ್ನು ಸಾಧಿಸಬಹುದು. ವಿದ್ಯಾರ್ಥಿ ಜೀವನ ಎಂಬುದು ಬದುಕಲ್ಲಿ ಬರುವ ಅತ್ಯಂತ ಅಮೂಲ್ಯ ಮತ್ತು ಸುಂದರವಾದ ಸಮಯ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಕೊಪ್ಪಳ ಗವಿಮಠದ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

Advertisement

ಅವರು ಶುಕ್ರವಾರ ನಡೆದ ತಾಲೂಕಿನ ಹೊಸಳ್ಳಿ ಗ್ರಾಮದ ಕಿತ್ತೂರು ಚನ್ನಮ್ಮ ವಸತಿ ಶಾಲೆಯ ದಶಮಾನೋತ್ಸವ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವಿದ್ಯಾರ್ಥಿ ಮತ್ತು ಯುವ ಸಮೂಹ ಛಲ ಮತ್ತು ಗುರಿ  ಹೊಂದಿದ್ದಲ್ಲಿ ಮಾತ್ರ ದೇಶಕಟ್ಟಲು ಸಾಧ್ಯ. ವಿದ್ಯಾರ್ಥಿಗಳು, ಯುವ ಜನಾಂಗ ಸಮಾಜ ಮತ್ತು ದೇಶ ಕಟ್ಟುವಂತಹ ಶಕ್ತಿ ಹೊಂದಿದೆ. ಆದರೆ ವಿದ್ಯಾರ್ಥಿ ಮತ್ತು ಯುವಕರು ಸಾಧಿ ಸುವ ಛಲ ಹಾಗೂ ಗುರಿಯನ್ನು ಹೊಂದಿದ್ದರೆ ಮಾತ್ರ ಅಂದುಕೊಂಡಿರುವುದನ್ನು ಸಾಧಿಸಲು ಸಾಧ್ಯ. ಇಂದಿನ ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನವನ್ನು ಕೇವಲ ಮೋಜು ಮಸ್ತಿಗಾಗಿ ಮೀಸಲಿಡುತ್ತಾರೆ. ಇದರಿಂದ ಸಮಾಜ ಮತ್ತು ದೇಶಕ್ಕೆ ಯಾವುದೇ ಕೊಡುಗೆಯಾಗುವುದಿಲ್ಲ. ಸಮಯವನ್ನು ಮೋಜು, ಮಸ್ತಿಗೆ ವ್ಯಯಿಸದೆ ಸಮಾಜದ ಒಳಿತಿಗಾಗಿ ಮೀಸಲಿಡಬೇಕು ಎಂದು ಹೇಳಿದರು.

ಶಾಸಕ ಹಾಲಪ್ಪ ಆಚಾರ್‌ ಮಾತನಾಡಿ, ಹೈದ್ರಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿ ತಾಲೂಕಿನ ವಿವಿಧ ಶಾಲೆಗಳಿಗೆ 154ಕ್ಕಿಂತ ಹೆಚ್ಚು ಕೊಠಡಿಗಳನ್ನು ಮಂಜೂರುಗೊಳಿಸಲಾಗಿದೆ. ವಿಶೇಷವಾಗಿ ತಾಲೂಕಿನ ಶೈಕ್ಷಣಿಕ ಅಭಿವೃದ್ಧಿಗೆ ನನ್ನ ಆಡಳಿತದಲ್ಲಿ ಹೆಚ್ಚು ಒತ್ತು ನೀಡುತ್ತಿದ್ದೇನೆ. ಭದ್ರ ಬುನಾದಿಯಿದ್ದರೆ, ಕಟ್ಟುವ ಕಟ್ಟಡ ಆಕಾಶದ ಎತ್ತರಕ್ಕೇರಲೂ ಸಾಧ್ಯ. ಅದೇ ರೀತಿ ಶಿಕ್ಷಣ ಕ್ಷೇತ್ರದಲ್ಲೂ ಒಂದು ಮಗುವಿಗೆ ಅತ್ಯುತ್ತಮ ಗುಣಮಟ್ಟದ ಪ್ರಾಥಮಿಕ, ಪ್ರೌಢ ಹಾಗೂ ಪಿಯುಸಿ, ಪದವಿ, ಉನ್ನತ ಶಿಕ್ಷಣ ದೊರೆತರೆ ಆ ವಿದ್ಯಾರ್ಥಿ ತಾನಾಗಿಯೇ ಯಶಸ್ಸಿನತ್ತ ಸಾಗುತ್ತಾನೆ. ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆ ದೃಷ್ಟಿಯಿಂದ ಸದರಿ ಶಾಲೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. ಪ್ರಾಥಮಿಕ ಶಿಕ್ಷಣದಿಂದಲೇ ಪ್ರತಿದಿನವೂ ಯೋಗ ತರಗತಿ, ಕರಾಟೆ ಹಲವು ಕ್ರೀಡೆಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಒಟ್ಟಾರೆಯಾಗಿ ಹೊಸಳ್ಳಿ ಶಾಲೆ ಉತ್ತಮ ಪರಿಸರವನ್ನು ಹೊಂದಿದ್ದು, ಜಿಲ್ಲೆಯಲ್ಲಿ ಮಾದರಿ ಶಾಲೆಯಾಗಿ ಮುನ್ನಡೆದಿದೆ. ಇಲ್ಲಿಯ ಸಿಬ್ಬಂದಿ ಕಾರ್ಯ ಶ್ಲಾಘನೀಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಸಮಾಜಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಬಿ. ಕಲ್ಲೇಶ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಏನು ಬೇಕಾದರೂ ಸಾಧಿಸುವಂತಹ ವಯಸ್ಸಿರುತ್ತದೆ. ಇಂತಹ ಅಮೂಲ್ಯ ವಯಸ್ಸು ಮತ್ತು ಸಮಯವನ್ನು ಸಾಧನೆಗಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಮೊದಲು ತಮ್ಮ ಜವಾಬ್ದಾರಿಯ ಕಡೆಗೆ ಚಿಂತನೆ ಹರಿಸಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನಕ್ಕೆ ಮಹತ್ವದ ಗೌರವ ಸ್ಥಾನವನ್ನು ಕೊಟ್ಟು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳುವಷ್ಟು ಸಾಮರ್ಥ್ಯವನ್ನು ಹೊಂದಿದರೆ ಮುಂದೆ ಸಮಾಜವವನ್ನು ಮುನ್ನಡೆಸಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಶಾಂತಿ, ನೆಮ್ಮದಿಯಿಂದ ಜನರು ಜೀವನ ನಡೆಸಬೇಕಾದರೆ ವಿದ್ಯಾರ್ಥಿಗಳು ಮತ್ತು ಯುವಕರು ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು
ಎಂದರು.

ತಾಪಂ ಮಾಜಿ ಅಧ್ಯಕ್ಷ ವೀರನಗೌಡ ಪೊಲೀಸ್‌ ಪಾಟೀಲ, ಅಂದಾನಗೌಡ ಉಳ್ಳಾಗಡ್ಡಿ, ಬಸವಲಿಂಗಪ್ಪ ಭೂತೆ, ತಾಪಂ ಸದಸ್ಯ ಶರಣಪ್ಪ ಈಳಿಗೇರ, ಈರಪ್ಪ ಕುಡಗುಂಟಿ, ದೊಡ್ಡನಗೌಡ ಓಜನಹಳ್ಳಿ, ಶರಣಪ್ಪ ಕೊಪ್ಪದ, ಶರಣಪ್ಪ ಬಣ್ಣದಬಾವಿ, ಸಿಪಿಐ ರಮೇಶ ರೊಟ್ಟಿ, ಪ್ರಾಚಾರ್ಯ ವಿರೂಪಾಕ್ಷಪ್ಪ ಹನುಮಶೆಟ್ಟಿ, ಮಹೇಶ ಪಟ್ಟೇದ ಹಾಗೂ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳಿದ್ದರು. ಇದೇ ಸಂದರ್ಭದಲ್ಲಿ ಅತ್ಯಾಧುನಿಕ ಕಿಯೋನಿಕ್ಸ್‌ ಕಂಪ್ಯೂಟರ್‌ ಕೊಠಡಿಗೆ ಚಾಲನೆ ನೀಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next