Advertisement

ಗ್ರಾಮ ಪಂಚಾಯತ್‌ ಚುನಾವಣೆ ಸಂಪನ್ನ : ಡಿ.30 ರೆಡೆಗೆ ಗಮನ!

02:19 AM Dec 28, 2020 | sudhir |

ಬೆಂಗಳೂರು: ಗ್ರಾಮ ಪಂಚಾಯತ್‌ ಚುನಾವಣೆಯ ಎರಡೂ ಹಂತಗಳ ಮತದಾನ ಮುಗಿದಿದ್ದು, ಅಭ್ಯರ್ಥಿಗಳು ಮತ ಎಣಿಕೆ ನಡೆಯಲಿರುವ ಡಿ. 30ರತ್ತ ಮುಖ ಮಾಡಿದ್ದಾರೆ.

Advertisement

ಕೊರೊನಾ ಹಾವಳಿಯಂಥ ವಿಷಮ ಪರಿಸ್ಥಿತಿಯಲ್ಲಿ ನಡೆದ ಈ ಬಾರಿಯ ಗ್ರಾ.ಪಂ ಚುನಾವಣೆ ಹಲವು ವೈಶಿಷ್ಟ್ಯಗಳಿಂದ ಕೂಡಿತ್ತು. ಪಕ್ಷ ರಹಿತ ಚುನಾವಣೆ ಆಗಿದ್ದರೂ ಸಾಕಷ್ಟು “ರಾಜಕಾರಣ’ ನಡೆದಿದೆ. “ಪಕ್ಷದ ಬೆಂಬಲಿತ ಅಭ್ಯರ್ಥಿ’ ಅನ್ನುವ ಮೂಲಕ ಕಾರ್ಯಕರ್ತರ ಪಡೆ ಕಟ್ಟಲು “ತಾಲೀಮು’ ಆಗಿರುವ ಗ್ರಾ.ಪಂ. ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಸಾಕಷ್ಟು ಬೆವರು ಸುರಿಸಿವೆ.

ಇನ್ನೊಂದೆಡೆ ಈ ಚುನಾವಣೆಯಲ್ಲಿ ಉನ್ನತ ವ್ಯಾಸಂಗ ಮಾಡಿದವರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ಗ್ರಾಮಗಳಿಗೆ ವಾಪಸಾಗಿರುವ ಅನೇಕರೂ ಸ್ಪರ್ಧಿಸಿದ್ದರು.

ಗ್ರಾ.ಪಂ.ಗಳಲ್ಲಿ ಕಾಂಗ್ರೆಸ್‌ ಪ್ರಾಬಲ್ಯ ಹೊಂದಿರುತ್ತದೆ ಎಂಬುದು ಇದುವರೆಗಿನ ರಾಜಕೀಯ ವಿಶ್ಲೇಷಣೆ. ಈಗ ಕಾಲ ಬದಲಾಗಿದೆ. ಹಳ್ಳಿಗಳಲ್ಲಿ ರಾಜಕೀಯ ಪ್ರಜ್ಞೆ ಬೆಳೆಯುವುದರ ಜತೆಗೆ “ಪಕ್ಷ ರಾಜಕಾರಣ’ವೂ ಪ್ರವೇಶಿಸಿದೆ. ಕಾಂಗ್ರೆಸ್‌ಗೆ ತಳಪಾಯ ಉಳಿಸಿಕೊಳ್ಳುವ ಸವಾಲು ಎದುರಾಗಿದ್ದರೆ, ಬಿಜೆಪಿಗೆ ಅಡಿಪಾಯ ಗಟ್ಟಿಗೊಳಿಸಿ ವಿಸ್ತರಿಸಿಕೊಳ್ಳುವ ಅವಕಾಶ ಹೆಚ್ಚಾಗಿದೆ. ಅನುಕೂಲಸಿಂಧು ಸಂದರ್ಭಗಳನ್ನು ತನ್ನದಾಗಿಸಿಕೊಳ್ಳಲು ಜೆಡಿಎಸ್‌ ಪ್ರಯತ್ನಿಸಿದೆ.

ಗ್ರಾ.ಪಂ. ಚುನಾವಣೆಯಲ್ಲಿ ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಪರ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ಗಳ ಘಟಾನುಘಟಿ ನಾಯಕರು ಪ್ರಚಾರ ನಡೆಸಿದ್ದರು.

Advertisement

ಶೇ. 80.71 ಮತದಾನ
ರವಿವಾರ ನಡೆದ ಮತದಾನ ಬಹುತೇಕ ಶಾಂತಿಯುತವಾಗಿ ಮುಗಿದಿದ್ದು, ಒಟ್ಟು  ಶೇ. 80.71ರಷ್ಟು ಮತದಾನವಾಗಿದೆ. ಮತಪತ್ರದಲ್ಲಿ ಚಿಹ್ನೆ ಬದಲು, ಪಕ್ಷ ಬೆಂಬಲಿಗರ ನಡುವೆ ಗಲಾಟೆ, ಮತದಾರರಿಗೆ ಆಮಿಷ, ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆ ಸಹಿತ ಸಣ್ಣಪುಟ್ಟ ಘಟನೆಗಳ ವಿನಾ ಮತದಾನ ಬಹುತೇಕ ಶಾಂತಿಯುತವಾಗಿತ್ತು.

ಚುನಾವಣೆಗೆ ಬಿಜೆಪಿ ಉತ್ತಮ ತಯಾರಿ ಮಾಡಿಕೊಂಡಿತ್ತು. ಕುಟುಂಬ ಮಿಲನ, ಪಂಚರತ್ನ ಯೋಜನೆಗಳು ಅತ್ಯಂತ ಯಶಸ್ವಿಯಾಗಿವೆ. ಬಿಜೆಪಿಗೆ ರಾಜ್ಯಾದ್ಯಂತ ಅಭೂತಪೂರ್ವ ಬೆಂಬಲ ಸಿಕ್ಕಿದೆ.
– ನಳಿನ್‌ ಕುಮಾರ್‌ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ

ಇದು ಪಕ್ಷಾಧಾರಿತ ಚುನಾವಣೆಯಲ್ಲ. ಆದರೂ ಎಲ್ಲ ಪಕ್ಷಗಳು ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಲು ಪ್ರಯತ್ನ ಮಾಡುತ್ತಾರೆ. ಹಳೆ ಮೈಸೂರು ಭಾಗದಲ್ಲಿ ಶೇ. 70ರಷ್ಟು ಪಂಚಾಯತ್‌ಗಳು ನಮ್ಮ ಹಿಡಿತಕ್ಕೆ ಬರುವ ವಿಶ್ವಾಸ ಇದೆ.
– ಎಚ್‌.ಕೆ. ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯಾಧ್ಯಕ್ಷ

ಗ್ರಾ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸ್ಥಾನ ಗೆಲ್ಲುತ್ತಾರೆ. ನಮ್ಮ ಪಕ್ಷ ಗ್ರಾಮೀಣ ಪ್ರದೇಶದಲ್ಲಿ ಗಟ್ಟಿಯಾಗಿದೆ. ಈ ಬಾರಿಯೂ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವಿದೆ.
– ಸತೀಶ್‌ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next