Advertisement

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

07:16 PM Dec 26, 2024 | Team Udayavani |

ಮಂಗಳೂರು: ಬಂಗ್ರಕೂಳೂರಿನ ಗೋಲ್ಡ್‌ ಪಿಂಚ್‌ ಸಿಟಿಯ ರಾಮ-ಲಕ್ಷ್ಮಣ ಜೋಡು ಕರೆಯಲ್ಲಿ ಡಿ.28 ಹಾಗೂ 29ರಂದು 8ನೇ ವರ್ಷದ “ಮಂಗಳೂರು ಕಂಬಳ’ ಅತ್ಯಂತ ಸಂಭ್ರಮ ಸಡಗರದಿಂದ ನಡೆಯಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ತಿಳಿಸಿದ್ದಾರೆ.

Advertisement

ಮಂಗಳೂರಿನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಕಂಬಳವು ಕಳೆದ 7 ವರ್ಷಗಳಿಂದ ಮಂಗಳೂರಿನ ಗೋಲ್ಡ್‌ ಪಿಂಚ್‌ ಸಿಟಿಯಲ್ಲಿ ಎಂಆರ್‌ಜಿ ಗ್ರೂಪ್‌ನ ಚೇರ್ಮನ್‌ ಪ್ರಕಾಶ್‌ ಶೆಟ್ಟಿ ಅವರ ಗೌರವಾಧ್ಯಕ್ಷತೆಯಲ್ಲಿ ನಡೆಯುತ್ತಿದೆ.

ಹುತಾತ್ಮ ಯೋಧ, ನಮ್ಮೂರಿನ ಕ್ಯಾಪ್ಟನ್‌ ಎಂ.ವಿ. ಪ್ರಾಂಜಲ್‌ ಅವರ ತಂದೆ, ಎಂಆರ್‌ಪಿಎಲ್‌ನ ನಿವೃತ್ತ ಆಡಳಿತ ನಿರ್ದೇಶಕರಾದ ಎಂ.ವೆಂಕಟೇಶ್‌ ಅವರು ಮಂಗಳೂರು ಕಂಬಳ ಉದ್ಘಾಟಿಸಲಿದ್ದಾರೆ.

ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 6ಕ್ಕೆ ದಿ|ರತ್ನ ಮಾಧವ ಶೆಟ್ಟಿ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಎಂಆರ್‌ಜಿ ಗ್ರೂಪ್‌ನ ಸಿಎಂಡಿ ಡಾ|ಕೆ.ಪ್ರಕಾಶ್‌ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ರೂಸ್‌ ಟೂರಿಸಂ ಅಭಿವೃದ್ದಿಪಡಿಸುವ ಅಗತ್ಯತೆ ಇದ್ದು ಈ ಬಗ್ಗೆ ಉನ್ನತ ಮಟ್ಟದ ಸಭೆ ನಡೆಯುತ್ತಿದೆ. ಕಂಬಳ ಕ್ರೀಡೆಯನ್ನು ಸ್ವದೇಶ್‌ ದರ್ಶನ್‌ನಲ್ಲಿ ಸೇರ್ಪಡೆ ಮಾಡುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ. ವಿದೇಶಿಗರನ್ನು ಈ ಕಡೆಗೆ ಆಕರ್ಷಿಸುವ ಪರಿಕಲ್ಪನೆಗೆ ಒತ್ತು ನೀಡಲಾಗುವುದು ಎಂದರು.

Advertisement

ಕಂಬಳ ಸಮಿತಿ ಉಪಾಧ್ಯಕ್ಷ ಈಶ್ವರ್‌ ಪ್ರಸಾದ್‌ ಶೆಟ್ಟಿ ಮಾತನಾಡಿ, “ಕಂಬಳದ ಅಂಗವಾಗಿ ಕಲರ್‌ಕೂಟ ಡ್ರಾಯಿಂಗ್‌ ಸ್ಪರ್ಧೆ ನಡೆಯಲಿದೆ.

10 ವರ್ಷದವರೆಗಿನ ಮಕ್ಕಳು “ರಂಗ್‌ದ ಎಲ್ಯ’, 10ರಿಂದ 15 ವರ್ಷದೊಳಗಿನ ಮಕ್ಕಳು ‘ರಂಗ್‌ದ ಮಲ್ಲ’ ವಿಭಾಗದಲ್ಲಿ ಭಾಗವಹಿಸಬಹುದು. ಇನ್ನು ರಂಗ್‌ ಕೂಟ ವಿಭಾಗದಲ್ಲಿ ವಯೋಮಿತಿಯ ನಿರ್ಬಂಧ ಇಲ್ಲ. ಫೋಟೊಗ್ರಾಫಿ ಸ್ಪರ್ಧೆ ಹಾಗೂ ರೀಲ್ಸ್‌ ಸ್ಪರ್ಧೆಗಳು ಕೂಡ ನಡೆಯಲಿವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಸುಜಿತ್‌ ಪ್ರತಾಪ್‌, ಉಪಾಧ್ಯಕ್ಷ ನಂದನ್‌ ಮಲ್ಯ, ಪ್ರಮುಖರಾದ ಅಶೋಕ್‌ ಕೃಷ್ಣಾಪುರ, ಈಶ್ವರ್‌ ಪ್ರಸಾದ್‌ ಶೆಟ್ಟಿ, ವಸಂತ್‌ ಪೂಜಾರಿ, ಪ್ರಕಾಶ್‌ ಪೂಜಾರಿ ಗರೋಡಿ, ಕಿರಣ್‌ ಕುಮಾರ್‌ ಕೋಡಿಕಲ್‌, ಸಾಕ್ಷತ್‌ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಡಿ.29ರಂದು ಕಂಬಳದ ಫೈನಲ್‌
ಎರಡು ದಿನಗಳ ಮಂಗಳೂರು ಕಂಬಳದಲ್ಲಿ ಫೈನಲ್‌ ಸ್ಪರ್ಧೆ ಡಿ.29ರಂದು ಬೆಳಗ್ಗೆ ನಡೆಯಲಿದೆ. ಅದು ಕಂಬಳದ ಫಲಿತಾಂಶದಲ್ಲಿ ಹೆಚ್ಚು ಕುತೂಹಲ ಹಾಗೂ ಆಸಕ್ತಿ ಮೂಡಿಸುವ ಕ್ಷಣ. ಕನೆಹಲಗೆ ವಿಭಾಗದಲ್ಲಿ ವಿಜೇತ ಕೋಣಗಳಿಗೆ ಪ್ರಥಮ 2 ಪವನ್‌, ದ್ವಿತೀಯ 1 ಪವನ್‌, ಹಗ್ಗ, ನೇಗಿಲು ಪ್ರಥಮ 2 ಪವನ್‌ ಮತ್ತು 1ಪವನ್‌, ಅಡ್ಡ ಹಲಗೆ, ಹಗ್ಗ, ನೇಗಿಲು ಕಿರಿಯ ವಿಭಾಗ ಪ್ರಥಮ 1 ಪವನ್‌, ದ್ವಿತೀಯ ಅರ್ಧಪವನ್‌ ಬಹುಮಾನ ದೊರೆಯಲಿದೆ ಎಂದು ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next