Advertisement

ವರ್ಣಮಯ ಕನಸು ನೇಯ್ದವರಿಗೆ ಸಾಲಮನ್ನಾ ಘೋಷಣೆ

11:38 AM Jul 29, 2019 | Suhan S |

ಬೆಳಗಾವಿ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಬಿ.ಎಸ್‌. ಯಡಿಯೂರಪ್ಪ ನೇಕಾರರ 100 ಕೋಟಿ ರೂ. ವರೆಗೆ ಸಾಲಮನ್ನಾ ಮಾಡುವುದಾಗಿ ಘೋಷಣೆ ಮಾಡಿರುವುದು ಉತ್ತರ ಕರ್ನಾಟಕದ ಸಾವಿರಾರು ನೇಕಾರರ ಕುಟುಂಬಗಳಲ್ಲಿ ಸಂತಸದ ಹೊನಲು ತಂದಿದೆ.

Advertisement

ನಮ್ಮನ್ನು ರೈತ ಸಮುದಾಯದಂತೆ ಪರಿಗಣಿಸಿ. ನೇಕಾರರು ತಯಾರಿಸಿದ ಬಟ್ಟೆಗಳಿಗೆ ಮಾರುಕಟ್ಟೆ ಒದಗಿಸುವುದರ ಜೊತೆಗೆ ನಮ್ಮನ್ನೂ ಸಹ ಋಣಮುಕ್ತರನ್ನಾಗಿ ಮಾಡಿ ಎಂಬ ಬೇಡಿಕೆಗೆ ಸ್ಪಂದನೆ ಸಿಕ್ಕಿದೆ. ಮುಖ್ಯಮಂತ್ರಿಗಳ ಈ ಹೊಸ ಘೋಷಣೆಯಿಂದ ಆತಂಕದಲ್ಲಿದ್ದ ನೇಕಾರರ ಬಾಳಲ್ಲಿ ಹೊಸ ಬೆಳಕು ಕಾಣಿಸಿದೆ. ಸರಕಾರದ ನಿರ್ಧಾರವನ್ನು ನೇಕಾರ ಸಮುದಾಯ ಮುಕ್ತವಾಗಿ ಸ್ವಾಗತಿಸಿದೆ.

ರಾಜ್ಯದ ನೇಕಾರರ ಪರಿಸ್ಥಿತಿ ಬಹಳ ಶೋಚನೀಯವಾಗಿದೆ. ಸೀರೆಗಳ ಮಾರುಕಟ್ಟೆ ಸಂಪೂರ್ಣ ಕುಸಿದುಹೋಗಿದೆ. ಕಚ್ಚಾವಸ್ತುಗಳನ್ನು ತಂದರೂ ಅದರ ಹಣ ತುಂಬುವ ಶಕ್ತಿ ಇಲ್ಲ. ಹೀಗಾಗಿ ನೇಕಾರರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ನೇಕಾರರ ಒಂದು ಲಕ್ಷ ರೂ. ವರೆಗಿನ ಸಾಲಮನ್ನಾ ನಿರ್ಧಾರ ಬೆಂದುಹೋಗಿರುವ ಜೀವನಕ್ಕೆ ಸ್ವಲ್ಪ ಆಸರೆ ನೀಡಿದೆ.

ಸುಸ್ತಿ ಹಾಗೂ ಚಾಲ್ತಿ ಖಾತೆಯಲ್ಲಿರುವ ನೇಕಾರರ ಸಾಲಮನ್ನಾ ಮಾಡಬೇಕು ಎಂದು ನಾವು ಹಿಂದಿನ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದೆವು. ಚಾಲ್ತಿಯಲ್ಲಿರುವ ನೇಕಾರರು ಪ್ರಾಮಾಣಿಕವಾಗಿ ಸಾಲ ತುಂಬಿದ್ದಾರೆ. ಅವರಿಗೂ ಸಾಲಮನ್ನಾ ಯೋಜನೆಲಾಭ ಸಿಗಲಿ ಎಂಬುದು ನಮ್ಮ ಉದ್ದೇಶ. ಅದರಂತೆ ಸರಕಾರ ಸುಸ್ತಿ ಇರುವ ಹಾಗೂ ಚಾಲ್ತಿ ಸಾಲದಲ್ಲಿರುವ ಯಲ್ಲಿರುವ ನೇಕಾರರಿಗೆ ಸಾಲಮನ್ನಾ ಲಾಭ ದೊರಕಿಸಿಕೊಟ್ಟಿತ್ತು. ಈಗಿನ ಸರಕಾರ ಸಹ ಇದನ್ನು ಮುಂದುವರಿಸಬೇಕು ಎಂದು ಉತ್ತರ ಕರ್ನಾಟಕದ ನೇಕಾರರ ವೇದಿಕೆ ಕಾರ್ಯದರ್ಶಿ ಪರಶುರಾಮ ಢಗೆ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿಗಳ ಈ ಘೋಷಣೆ ಅತ್ಯಂತ ಸಮಯೋಚಿತ ನಿರ್ಧಾರ. ಹೊಸ ಸರಕಾರದಿಂದ ನಾವು ಹೆಚ್ಚಿನ ನಿರೀಕ್ಷೆ ಮಾಡುವದರ ಮೊದಲೇ ಒಳ್ಳೆಯ ಘೋಷಣೆ ಬಂದಿದೆ.ಇದರಿಂದ ನೇಕಾರರು ಸಹ ಆತಂಕ ದೂರಮಾಡಿಕೊಂಡು ಜೀವನ ನಡೆಸಬಹುದು ಎಂಬ ಭರವಸೆ ಹಾಗೂ ಧೈರ್ಯ ಬಂದಿದೆ ಎಂಬುದು ಬೆಳಗಾವಿಯ ನೇಕಾರ ರಮೇಶ ಅಭಿಪ್ರಾಯ.

Advertisement

ಸರಕಾರದ ಘೋಷಣೆಯಂತೆ 2019 ರ ಮಾ. 31 ರವರೆಗೆ ಸಾಲ ಪಡೆದಿರುವ ನೇಕಾರರಿಗೆ ಇದು ಅನ್ವಯವಾಗಲಿದೆ. ಸರಕಾರದ ಘೋಷಣೆಯಿಂದ ನಾವು ಒಂದು ಲಕ್ಷ ರೂ.ವರೆಗೆ ಸಾಲಮನ್ನಾ ಪಡೆಯಬಹುದು. ಇದರಿಂದ ತೀರಾ ಬಡ ನೇಕಾರರು ನೆಮ್ಮದಿಯಿಂದ ಉಸಿರು ಬಿಡಬಹುದು. ಸರಕಾರ ಸಾಲಮನ್ನಾ ಮಾಡುವದಕ್ಕಿಂತ ನೇಕಾರರಿಗೆ ಮಾರುಕಟ್ಟೆ ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಬೇಕು ಎಂಬುದು ಬೆಳಗಾವಿ ಜಿಲ್ಲಾ ನೇಕಾರರ ಒಕ್ಕೂಟಗಳ ಅಧ್ಯಕ್ಷ ಗಜಾನನ ಗುಂಜೇರಿ ಅಭಿಪ್ರಾಯ.

ಅಂದಾಜಿನ ಪ್ರಕಾರ ರಾಜ್ಯದಲ್ಲಿ ಸುಮಾರು 40 ಸಾವಿರ ನೇಕಾರರ ಕುಟುಂಬಗಳ 500 ಕೋಟಿ ಸಾಲ ಇದೆ. ಈಗ ಬಿಜೆಪಿ ಸರಕಾರ ಮಾಡಿರುವ ಸಾಲಮನ್ನಾ ಘೋಷಣೆಯಿಂದ ಸುಮಾರು 200 ರಿಂದ 250 ಕೋಟಿ ರೂ ವರೆಗೆ ಸಾಲಮನ್ನಾ ಆಗಲಿದೆ. ಅಂದರೆ ಒಬ್ಬ ನೇಕಾರ ಕನಿಷ್ಠ 1 ಲಕ್ಷ ರೂ.ವರೆಗೆ ಸಾಲದಿಂದ ಮುಕ್ತನಾಗಬಹುದು ಎನ್ನುತ್ತಾರೆ ನೇಕಾರ ಮುಖಂಡರು.

ಹಿಂದಿನ ಮೈತ್ರಿ ಸರಕಾರದಲ್ಲಿ ಸುಮಾರು 60 ಲಕ್ಷ ರೂ. ವರೆಗೆ ಸಾಲಮನ್ನಾ ಆಗಿತ್ತು. ಆಗ ಸರಕಾರ ಪ್ರತಿ ನೇಕಾರನ 50 ಸಾವಿರ ರೂ ವರೆಗೆ ಸಾಲಮನ್ನಾ ಮಾಡಿ ಆದೇಶ ಹೊರಡಿಸಿತ್ತು. ಈಗ ಬಿಜೆಪಿ ಸರಕಾರ ಮಾಡಿರುವ ಘೋಷಣೆಯಿಂದ ಸುಮಾರು 40 ಸಾವಿರ ಕುಟುಂಬಗಳು ಇದರ ಲಾಭ ಪಡೆದುಕೊಳ್ಳಲಿವೆ ಎನ್ನುತ್ತಾರೆ ಪರಶುರಾಮ ಢಗೆ.

ಇದು ಅತ್ಯಂತ ಒಳ್ಳೆಯ ನಿರ್ಧಾರ. ನಾವು ಇದು ಇಷ್ಟು ಬೇಗ ಘೋಷಣೆ ಆಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಈ ಸರಕಾರ ನೇಕಾರರ ಬಗ್ಗೆ ಕಳಕಳಿ ತೋರಿಸಿದೆ. ನಾವು ಸಾಲಮನ್ನಾ ಯೋಜನೆಗಿಂತ ಬೇರೆ ಸೌಲಭ್ಯ ನಿರೀಕ್ಷೆ ಮಾಡಿದ್ದೇವೆ. ಆದರೂ ಇದು ಸ್ವಲ್ಪಮಟ್ಟಿಗೆ ಪರಿಹಾರ ಕೊಟ್ಟಿದೆ. • ಗಜಾನನ ಗುಂಜೇರಿ, ಜಿಲ್ಲಾ ನೇಕಾರರ ಒಕ್ಕೂಟಗಳ ಅಧ್ಯಕ್ಷರು

 

•ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next