ಕಲಬುರಗಿ: ಇಲ್ಲಿಯವರೆಗೆ ಸಾಲ ಪಡೆಯದ ರೈತರಿಗೆ ಮೊದಲ ಆದ್ಯತೆ ನೀಡಿ ಈಗ ಬೆಳೆಸಾಲ ವಿತರಿಸಲಾಗುತ್ತಿದ್ದು, ಮುಂದಿನ ಎರಡು ತಿಂಗಳಲ್ಲಿ ಸಾಲಮನ್ನಾದ ರೈತರಿಗೂ ಹೊಸದಾಗಿ ಬೆಳೆಸಾಲ ವಿತರಿಸಲಾಗುವುದು ಎಂದು ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್ ಅಧ್ಯಕ್ಷರೂ ಆಗಿರುವ ಸೇಡಂ ಮತಕ್ಷೇತ್ರದ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಹೇಳಿದರು. ಅಫಜಲಪುರ ತಾಲೂಕಿನ ಭೈರಾಮಡಗಿಯಲ್ಲಿ ಭೈರಾಮಡಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಸಕ್ತ 2021 22ನೇ ಸಾಲಿನ ಬೆಳೆಸಾಲದ ಚೆಕ್‌ನ್ನು ರೈತರಿಗೆ ವಿತರಿಸಿ ಮಾತನಾಡಿದರು.
ಸಾಲ ಪಡೆಯದ ರೈತರಿಗೆ ಸಾಲ ವಿತರಿಸಲು ಅಪೆಕ್ಸ್ ಬ್ಯಾಂಕ್‌ನಿಂದ 200 ಕೋ.ರೂ. ಬಿಡುಗಡೆಯಾಗಿದ್ದು, ಇದನ್ನು ಈಗ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರಿಗೆ ವಿತರಿಸಲಾಗುತ್ತಿದ್ದು, ಈಗಾಗಲೇ ಸಾಲ ವಿತರಣೆ ಆರಂಭವಾಗಿದೆ. ಭೈರಾಮಡಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮೂಲಕ ಶುಭಾರಂಭಗೊಳಿಸಲಾಗಿದೆ ಎಂದು ತೇಲ್ಕೂರ ವಿವರಿಸಿದರು. ಸುಸ್ತಿ ಸಾಲ ನಯಾಪೈಸೆ ಉಳಿಯದಂತೆ ನೋಡಿಕೊಂಡಲ್ಲಿ ಹೆಚ್ಚಿನ ಸಾಲ ವಿತರಿಸಲು ಸರಳವಾಗುತ್ತದೆ ಎಂದ ಡಿಸಿಸಿ ಬ್ಯಾಂಕ್ ಅಧ್ಯಕ್ಷರು, ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿಸಿದಲ್ಲಿ ಸಹಕಾರ ಸಂಘಗಳ ಬೆಳವಣಿಗೆ ಪೂರಕವಾಗುತ್ತದೆಯಲ್ಲದೇ ಹೆಚ್ಚಿನ ಆರ್ಥಿಕ ನೆರವು ನೀಡಲು ಸಾಧ್ಯವಾಗುತ್ತದೆ.
ಹೈನುಗಾರಿಕೆಗೂ ಜತೆಗೆ ತೋಟಗಾರಿಕೆ ಕೃಷಿಗೂ ಉತ್ತೇಜಿಸಲು ಯೋಜನೆ ರೂಪಿಸಲಾಗಿದೆ. ಖರೀದಿದಾರರೇ ರೈತರ ಹೊಲಗಳಿಗೆ ಬರುವಂತೆ ಮಾರುಕಟ್ಟೆ ರೂಪಿಸಲಾಗುತ್ತಿದೆ. ಆದ್ದರಿಂದ ಹೈನುಗಾರಿಕೆ ಕೈಗೊಳ್ಳಲು ರೈತರು ಮುಂದೆ ಬರಬೇಕೆಂದು ಕರೆ ನೀಡಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ಮಾತನಾಡಿ, ಆರ್ಥಿಕವಾಗಿ ಆಧೋಗತಿಗೆ ಇಳಿದಿದ್ದ ಡಿಸಿಸಿ ಬ್ಯಾಂಕ್ ಗೆ ರಾಜಕುಮಾರ ಪಾಟೀಲ್ ಅಧ್ಯಕ್ಷರಾದ ನಂತರ ಹೆಚ್ಚಿನ ಮುತುವರ್ಜಿ ವಹಿಸಿ ಪುನಶ್ಚೇತನಗೊಳಿಸಿರುವ ಕ್ರಮ ಮಾದರಿಯಾಗಿದೆ. ರೈತರು ಸಹಕಾರಿ ಸಂಘಗಳನ್ನು ತಮ್ಮದೆಂದು ತಿಳಿದರೆ ಅದರಲ್ಲೂ ಸಾಲ ಪಡೆಯುವಾಗಿನ ಉತ್ಸುಕತೆ ಮರಳಿಸುವಾಗಲೂ ಇರಬೇಕೆಂದು ರೈತರಿಗೆ ಕಿವಿ ಮಾತು ಹೇಳಿದರು. ಭೈರಾಮಡಗಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಣಮಂತರಾವ ಹಿರೇಗೌಡ ಮಾತನಾಡಿ, 376 ಹೊಸ ರೈತರಿಗೆ ಸಾಲ ವಿತರಿಸಲಾಗಿದೆಯಲ್ಲದೇ ಎಲ್ಲರಿಗೂ ಸಮನಾಗಿ ಸಾಲ ಹಂಚಿಕೆ ಮಾಡಿರುವುದು ಜಿಲ್ಲೆಯಲ್ಲೇ ಮಾದರಿಯಾಗಿದೆ ಎಂದರು.
ಸಮಾರಂಭದಲ್ಲಿ ಐವರಿಗೆ ಸಾಂಕೇತಿಕವಾಗಿ ಚೆಕ್ ವಿತರಿಸಲಾಯಿತು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್, ನಿರ್ದೇಶಕರಾದ ಸೋಮಶೇಖರ ಗೋನಾಯಕ, ಶರಣಬಸಪ್ಪ ಪಾಟೀಲ್ ಅಷ್ಠಗಿ, ಮಹಾಂತಗೌಡ ಎಸ್.ವೈ. ಪಾಟೀಲ್, ಅಶೋಕ ಸಾವಳೇಶ್ವರ, ಬಾಪುಗೌಡ ಪಾಟೀಲ್, ಚಂದ್ರಶೇಖರ ತಳ್ಳಳ್ಳಿ, ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಾದ ಚಿದಾನಂದ ನಿಂಬಾಳ, ಗ್ರಾಮದ ಮುಖಂಡರಾದ ಕಲ್ಯಾಣರಾವ ನಾಗೋಜಿ ಸೇರಿದಂತೆ ಇತರರಿದ್ದರು. ಬ್ಯಾಂಕ್ ಅ ಧಿಕಾರಿಗಳಾದ ಬಿ.ಜಿ.ಕಲ್ಲೂರ, ಜಯಪ್ರಕಾಶ, ಶರಣು ಭಾಸಗಿ, ಯಲ್ಲಪ್ಪ ಮುರಡಿ, ಭೈರಾಮಡಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರು, ರೈತರು, ಗ್ರಾಮಸ್ಥರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.