ಸುರಪುರ: ತಾಲೂಕಿನ ಸೂಗೂರು ಗ್ರಾಮದ ಕಟ ಬಾಕಿದಾರರಿಗೆ ವ್ಯವಸಾಯ ಸೇವಾ ಸಹಕಾರ ಸಂಘ ಬಡ್ಡಿ ರಹಿತ ಸಾಲ ಮರುಪಾವತಿಸಿ ಕೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ನಗರದಗಾಂಧಿ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಸಂಘದ ಜಿಲ್ಲಾಧ್ಯಕ್ಷ ಯಲ್ಲಪ್ಪ ಚಿನ್ನಾಕಾರ ಮಾತನಾಡಿ, ಈ ಹಿಂದಿನ ಕುಮಾರಸ್ವಾಮಿ ಸರಕಾರ ಸಹಕಾರ ಸಂಘಗಳಲ್ಲಿನ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ರೈತರು ಸರಕಾರದ ಮೇಲೆ ಭರವಸೆಯಿಟ್ಟಿದ್ದರು. ಆದರೆ, ಸಾಲ ಮನ್ನಾದ ಬಗ್ಗೆ ರೈತರು ಅನೇಕ ಬಾರಿ ವಿಚಾರಿಸಿದ್ದರು ಕೂಡ ಸಹಕಾರ ಸಂಘದ ಅಧಿಕಾರಿಗಳು ಮನ್ನಾ ಆಗಿದಿರುವ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ. ಈಗ ಏಕಾಏಕಿ ಸೂಗೂರು ಗ್ರಾಮದ ರೈತರಿಗೆ ಮುದ್ದತ್ತು ಮೀರಿದ ಬಾಕಿದಾರರು ಎಂದು ಪರಿಗಣಿಸಿ ಸಹಕಾರಿ ಸಂಘದವರು ನೋಟಿಸ್ ಜಾರಿ ಮಾಡಿರುವುದು ಖಂಡನೀಯ ಎಂದು ದೂರಿದರು.
ರೈತರು ತಮ್ಮ ಸಾಲ ಮನ್ನಾ ಆಗಿದಿಯೋ ಇಲ್ಲೋ ಎಂದು ಸಹಕಾರ ಸಂಘದ ಕಾರ್ಯ ದರ್ಶಿಗೆ ದಿನ ನಿತ್ಯಕೇಳುತ್ತಿದ್ದರು ಸಹ ಯಾವುದೇ ಮಾಹಿತಿನೀಡದೆ ಈಗ ಸಂಘಕ್ಕೆ ಆರು ದಿನದೊಳಗೆ ಅಸಲು ಮತ್ತು ಬಡ್ಡಿ ಕಟ್ಟದಿದ್ದರೆ ಮುಂದೆಬರುವ ಸಹಕಾರ ಸಂಘದ ಚುನಾವಣೆಯಲ್ಲಿ ಮತದಾನ ಮಾಡುವ ಸದಸ್ಯತ್ವ ಹಕ್ಕು ಕಳೆದುಕೊಳ್ಳುತ್ತಿರಿ ಎಂದು ತಿಳಿಸಿ ಎಚ್ಚರಿಕೆ ನೋಟಿಸ್ ಜಾರಿ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾಲ ಬಾಕಿ ಇರುವ ರೈತರಿಗೆ ಮುಂದೆ ಸಹಕಾರ ಸಂಘಕ್ಕೆ ಸದಸ್ಯರನ್ನಾಗಿ ನೇಮಕ ಮಾಡಿ ಕೊಳ್ಳಲು ಬರುವುದಿಲ್ಲ ಎಂದುನೋಟಿಸ್ ಜಾರಿ ಮಾಡಲಾಗಿದೆ. ರೈತರಿಗೆ ಈ ಕುರಿತು ಮುಂಚಿತವಾಗಿ ತಿಳಿಸಿದ್ದರೆಹೇಗಾದರೂ ಸಾಲ ಮಾಡಿ ಸಂಘಕ್ಕೆ ಸಾಲ ಕಟ್ಟಿ ಋಣ ಮುಕ್ತರಾಗುತ್ತಿದ್ದರು. ಈಗ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ನೋಟಿಸ್ ಹೊರಡಿಸಿದರೆ ರೈತರು ಸಾಲ ಎಲ್ಲಿಂದ ತಂದು ಕಟ್ಟಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರಿಂದ ಬಡ್ಡಿ ರಹಿತವಾಗಿ ಸಾಲ ಕಟ್ಟಿಸಿಕೊಳ್ಳಬೇಕು. ರೈತರಿಗೆ ನೀಡಿರುವ ನೋಟಿಸ್ ಶೀಘ್ರ ವಾಪಸ್ ಪಡೆಯಬೇಕು. ಸಾಲ ಕಟ್ಟುವ ಎಲ್ಲ ರೈತರ ಅನುಕೂಲತೆಗಾಗಿ ಹೆಚ್ಚುವರಿಯಾಗಿ ಸಾಲ ನೀಡಬೇಕು. ಹೊಸ ಸಾಲಕ್ಕಾಗಿ ಕಳೆದ 2 ವರ್ಷಗಳಿಂದ ಅರ್ಜಿ ಸಲ್ಲಿಸಿರುವ ಎಲ್ಲ ರೈತರಿಗೆ ತಕ್ಷಣ ಹೊಸ ಸಾಲ ನೀಡಬೇಕು ಎಂಬ ಮನವಿ ಪತ್ರವನ್ನು ಸಹಕಾರಿ ಸಂಘದವರಿಗೆ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಧರ್ಮಣ್ಣ ದೊರೆ, ಗೌರವಾಧ್ಯಕ್ಷ ನಂದಣ್ಣ ವಾರಿ, ರೈತ ಮುಖಂಡ ಬಸವರಾಜ, ರಫೀಕ್ ಸೇರಿ ಅನೇಕ ರೈತರು ಇದ್ದರು.