Advertisement

ಋಣಭಾರ ಪರಿಹಾರ ಯೋಜನೆ: ಬಾಣಲೆಯಿಂದ ಬೆಂಕಿಗೆ

10:45 PM Aug 28, 2019 | mahesh |

ಸುಬ್ರಹ್ಮಣ್ಯ: ರಾಜ್ಯ ಸರಕಾರವು ಜಾರಿಗೊಳಿಸಿದ ಋಣ ಪರಿಹಾರ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಫಲಾನುಭವಿಗಳಿಗೆ ಅವಕಾಶ ನೀಡಲಾಗಿದೆ. ಇನ್ನೊಂದೆಡೆ ಯೋಜನೆಯ ದುರ್ಲಾಭವನ್ನು ಪಡೆದುಕೊಳ್ಳಲು ಕೆಲವರು ಹವಣಿಸುತ್ತಿದ್ದಾರೆ.

Advertisement

ಋಣಭಾರ ಪರಿಹಾರ ಯೋಜನೆಯನ್ನು ದುರುಪಯೋಗ ಮಾಡಿಕೊಂಡು ಹಣ ಗಳಿಸುತ್ತಿರುವ ಘಟನೆ ಪಂಜದಲ್ಲಿ ಬುಧವಾರ ಬೆಳಕಿಗೆ ಬಂದಿದೆ.

ಪಂಜ ಮುಖ್ಯ ಪೇಟೆಯ ಕೆಳಗಿನ ಪೇಟೆಯ ಕಚೇರಿಯೊಂದರಲ್ಲಿ ಯೋಜನೆಯ ಫಲಾನುಭವಿಗಳಿಗೆ ಅರ್ಜಿ ನಮೂನೆಯನ್ನು ಸಿದ್ಧಪಡಿಸಿ ಕೊಡುವ ಕೆಲಸ ನಡೆದಿತ್ತು. ಅರ್ಜಿ ನಮೂನೆ ಸಿದ್ಧಪಡಿಸಿ ಕೊಡುತ್ತೇವೆ ಎಂದು ಹೇಳಿ ಯೋಜನೆಯ ಬಗ್ಗೆ ಸ್ಪಷ್ಟ ಮಾಹಿತಿ ನೀಡದೆ ದಾರಿ ತಪ್ಪಿಸಿ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಆರೋಪ ವ್ಯಕ್ತವಾಗಿದೆ.

ಮೂಲ ದಾಖಲೆ
ಯೋಜನೆ ಕುರಿತು ಸರಿಯಾದ ಮಾಹಿತಿ ಇಲ್ಲದವರು ಈ ಕಚೇರಿಗೆ ದಾಖಲೆ ಪತ್ರಗಳೊಂದಿಗೆ ಆಗಮಿಸಿದ್ದಾರೆ. ಫಲಾನುಭವಿಗಳು ಯೋಜನೆಯಲ್ಲಿ ತಿಳಿಸಿದಂತೆ ಮೂಲ ದಾಖಲೆಗಳನ್ನು ಅಂಗಡಿ ಸಿಬಂದಿ ಕೈಗೆ ಒಪ್ಪಿಸಿದ್ದಾರೆ. ಅದನ್ನು ಪಡೆದ ಕಚೇರಿ ಸಿಬಂದಿ ಅರ್ಜಿ ನಮೂನೆ ಭರ್ತಿ ಮಾಡಿ ಕೊಡುತ್ತೇವೆ ಎಂದಿದ್ದಾರೆ.

ಕಚೇರಿಗೆ ಬರುವ ಗ್ರಾಹಕರಿಂದ ಮೂಲ ದಾಖಲೆ ಪತ್ರಗಳನ್ನು ಪಡೆಯುವ ಕಚೇರಿ ಸಿಬಂದಿ ಜೆರಾಕ್ಸ್‌, ಅರ್ಜಿ ನಮೂನೆ ಸಿದ್ಧಪಡಿಸುವ ನೆಪದಲ್ಲಿ ಫ‌ಲಾನುಭವಿಗಳಿಂದ ದೊಡ್ಡ ಮೊತ್ತದ ಹಣ ಪಡೆಯುತ್ತಿದ್ದಾರೆ ಎನ್ನುವುದು ಸಾರ್ವಜನಿಕರ ಆರೋಪ.

Advertisement

ದಾಖಲೆ ಸಿದ್ಧಪಡಿಸಿ ಕೊಡುವ ಕೆಲಸ
ಫಲಾನುಭವಿಗಳಿಂದ ದಾಖಲೆ ಪತ್ರ ಪಡೆದು, ಬಳಿಕ ಅರ್ಜಿ ನಮೂನೆಯಲ್ಲಿ ಟೈಪ್‌ ಮಾಡಿ ಸಿದ್ಧಪಡಿಸುತ್ತಿದ್ದಾರೆ. ನಕಲು ಪ್ರತಿ ತೆಗೆಯುವುದು, ಅರ್ಜಿ ನಮೂನೆ ಹಾಗೂ ದಾಖಲೆಗಳನ್ನು ಲಕೋಟೆಯಲ್ಲಿ ತುಂಬುವುದು ಇತ್ಯಾದಿ ಕೆಲಸಗಳಿಗೆ ಖರ್ಚಿನ ಬಾಬ್ತು 150 ರೂ.ಗಳಿಂದ 300 ರೂ. ತನಕ ಪಡೆಯುತ್ತಿರುವುದು ಕಂಡು ಬರುತ್ತಿದೆ. ಒಂದು ಪ್ರತಿಯನ್ನು ಉಪ ವಿಭಾಗಾಧಿಕಾರಿಗೆ, ಮತ್ತೂಂದು ಪ್ರತಿಯನ್ನು ಮುಖ್ಯಮಂತ್ರಿ ಕಚೇರಿಗೆ ಸಲಹೆ ನೀಡುತ್ತಿದ್ದಾರೆ. ಸಣ್ಣ ರೈತರು ಭೂರಹಿತ ಕೃಷಿ ಕಾರ್ಮಿಕರು ದುರ್ಬಲ ವರ್ಗದ ಜನತೆ ಅಧಿಕ ಬಡ್ಡಿಯಿಂದ ಶೋಷಣೆಗೆ ಒಳಗಾಗುವುದನ್ನು ತಪ್ಪಿಸಲು ಈ ಯೋಜನೆಯನ್ನು ರಾಜ್ಯ ಸರಕಾರ ಜಾರಿಗೆ ತಂದಿದೆ.

ತನಿಖೆ ಮಾಡುವೆಮುಗ್ಧ ಬಡವರನ್ನು ಈ ರೀತಿ ವಂಚಿಸಿ ಹಣ ಗಳಿಸುವುದು ತಪ್ಪು. ಕಾನೂನು ದುರುಪಯೋಗ ಮಾಡಿಕೊಂಡು ವಂಚನೆ ನಡೆಸಿದರೆ ಅಂಥವರ ಮೇಲೆ ಕ್ರಿಮಿನಲ್ ದೂರು ದಾಖಲಿಸಿಕೊಳ್ಳುತ್ತೇವೆ. ಈಗಲೇ ಅಲ್ಲಿಗೆ ಅಧಿಕಾರಿಗಳನ್ನು ಕಳುಹಿಸಿ ತನಿಖೆ ನಡೆಸುತ್ತೇನೆ. ಗುರುವಾರ ನಾನು ಖುದ್ದು ಅಲ್ಲಿಗೆ ತೆರಳಿ ತನಿಖೆ ಮಾಡುವೆ.
– ಕುಂಞಿ ಅಹಮ್ಮದ್‌ ತಹಶೀಲ್ದಾರ್‌ ಸುಳ್ಯ

ಸಿದ್ಧಪಡಿಸಿ ಕೊಡುತ್ತಿದ್ದೇವೆನಮ್ಮಲ್ಲಿ ಅರ್ಜಿಗಳು ಸಿಗುತ್ತಿಲ್ಲ. ನಾವು ಅರ್ಜಿ ನಮೂನೆಗಳನ್ನು ತಯಾರು ಮಾಡಿ ಎಲ್ಲ ದಾಖಲೆಗಳನ್ನು ಸಿದ್ಧಪಡಿಸಿ ಕೊಡುತ್ತೇವೆ. ಅದಕ್ಕೆ 150ರಿಂದ 200 ರೂ. ಪಡೆದುಕೊಳ್ಳುತ್ತಿದ್ದೇವೆ.
– ಪಂಜದ ಕಚೇರಿಯ ಸಿಬಂದಿ

200ಕ್ಕೂ ಹೆಚ್ಚು ಜನರು

ಪಂಜದ ಕಚೇರಿಗೆ ಬುಧವಾರ 200ಕ್ಕೂ ಮಿಕ್ಕಿದ ಬಡ ಫಲಾನುಭವಿಗಳು ಆಗಮಿಸಿದ್ದರು. ಕಚೇರಿ ಮುಂದೆ ಸಾಲುಗಟ್ಟಿ ನಿಂತಿದ್ದರು. ಒಂದು ಬಾರಿ ಸಾಲದಿಂದ ಮುಕ್ತರಾಗಿ ಅಡವಿಟ್ಟ ಆಭರಣಗಳನ್ನು ಮರಳಿ ಪಡೆಯುವ ಕನಸಿನೊಂದಿಗೆ ಬಂದಿದ್ದ ಜನರು ಇಲ್ಲಿ ಜಾಸ್ತಿ ಹಣ ನೀಡಬೇಕಾಗಿ ಬಂದಿದೆ.
Advertisement

Udayavani is now on Telegram. Click here to join our channel and stay updated with the latest news.

Next