Advertisement

ಸಾಲಮನ್ನಾ, ಬೆಳೆ ನಷ್ಟ ಪರಿಹಾರಕ್ಕೆ ವಿಮೆ ಮದ್ದು!

06:00 AM Jun 28, 2018 | Team Udayavani |

ಹಾವೇರಿ: ಎಲ್ಲ ರೈತರನ್ನು ಬೆಳೆ ವಿಮೆ ವ್ಯಾಪ್ತಿಗೆ ತಂದರೆ ಸರ್ಕಾರಗಳಿಗೆ ಅತಿವೃಷ್ಟಿ, ಅನಾವೃಷ್ಟಿಯಿಂದಾಗುವ ಬೆಳೆ ನಷ್ಟ ಪರಿಹಾರ, ಸಾಲಮನ್ನಾದಂಥ ಕೊಡುಗೆ ನೀಡುವ ಗೊಡವೆಯೇ ಇಲ್ಲ. ಇದರಿಂದ ರೈತರಿಗೂ ಭದ್ರತೆ, ಸರ್ಕಾರಗಳಿಗೂ ಅನುಕೂಲ!

Advertisement

ಹೀಗೊಂದು ವಿಶೇಷ ಸಲಹೆಯನ್ನು ರಾಜ್ಯ ಕೃಷಿ ಬೆಲೆ ಆಯೋಗ ನಡೆಸಿದ ಸಂಶೋಧನಾ ಅಧ್ಯಯನ ವರದಿಯಲ್ಲಿ ನೀಡಲಾಗಿದೆ. ಬೆಳೆ ವಿಮೆ ಕುರಿತು ರಾಜ್ಯ ಕೃಷಿ ಬೆಲೆ ಆಯೋಗವು ಧಾರವಾಡದ ಸೆಂಟರ್‌ ಫಾರ್‌ ಮಲ್ಟಿ ಡಿಸಿಪ್ಲಿನರಿ ಡೆವಲಪ್‌ಮೆಂಟ್‌ ರಿಸರ್ಚ್‌ (ಸಿಎಂಡಿಆರ್‌) ಮೂಲಕ ನಡೆಸಿದ ಸಂಶೋಧನಾ ಅಧ್ಯಯನ ವರದಿಯಲ್ಲಿ ಈ ಸಲಹೆ ನೀಡಲಾಗಿದ್ದು ವರದಿಯ ಶಿಫಾರಸುಗಳನ್ನು ಆಯೋಗ ಸರ್ಕಾರಕ್ಕೆ ಸಲ್ಲಿಸಲು ಸಿದ್ಧತೆ ನಡೆಸಿದೆ.

ವರದಿಯಲ್ಲಿ ಏನೇನಿದೆ?
1. ಒಂದು ರೂ. ವಿಮಾ ಕಂತು

ಪ್ರಸ್ತುತ ರಾಜ್ಯದಲ್ಲಿ ಸರಾಸರಿ ಶೇ.13ರಿಂದ 15ರಷ್ಟು ಮಾತ್ರ ರೈತರು ಬೆಳೆ ವಿಮೆ ವ್ಯಾಪ್ತಿಯಲ್ಲಿದ್ದಾರೆ. ಎಲ್ಲ ರೈತರನ್ನು ಬೆಳೆ ವಿಮೆ ವ್ಯಾಪ್ತಿಗೆ ತರಬೇಕು. ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ ವ್ಯಾಪ್ತಿಗೆ ಹೆಚ್ಚು ರೈತರು ಬರುವಂತೆ ಮಾಡಲು ಸರ್ಕಾರ ಎರಡು ವರ್ಷ ನಿರಂತರವಾಗಿ ರೈತರಿಂದ ಕೇವಲ ಒಂದು ರೂ. ವಿಮಾ ಕಂತು ಪಡೆದು ವಿಮೆ ಜಾರಿಗೊಳಿಸಬೇಕು. ಈ ಯೋಜನೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 75:25 ಅನುಪಾತದ ಆಧಾರದ ಮೇಲೆ ಜಾರಿಗೆ ತರಬೇಕು. ಮುಂಗಾರು ಅಥವಾ ಹಿಂಗಾರು ಋತುಗಳಿಗೆ ಅನ್ವಯಿಸುವಂತೆ (ರಾಜ್ಯ ಸರ್ಕಾರದ ಆದ್ಯತೆ ಪ್ರಕಾರ) ವಿಮಾ ಕಂತು ಪಾವತಿಸಬೇಕು.

2. ಎರಡು ಹೆಕ್ಟೇರ್‌ಗೆ ಸೀಮಿತ
ಈ ಅವ ಧಿಯಲ್ಲಿ ರೈತರಿಗೆ ನೀಡುವ ಬರಗಾಲದ ಬೆಳೆ ನಷ್ಟ ಪರಿಹಾರವನ್ನೂ ಸಹ ಈ ಯೋಜನೆಯಲ್ಲಿ ವಿಲೀನಗೊಳಿಸಬಹುದು. ರೈತರು ಬೆಳೆಯುವ ಯಾವುದೇ ಬೆಳೆಗಳಿಗೆ ಗರಿಷ್ಠ ಎರಡು ಹೆಕ್ಟೇರ್‌ ಪ್ರದೇಶಗಳಿಗೆ ಮಾತ್ರ ಈ ವಿಮಾ ಸೌಲಭ್ಯ ವಿಸ್ತರಿಸಬಹುದು. ಈ ಯೋಜನೆ ದುಬಾರಿ ಎನಿಸಿದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿ ವರ್ಷ ಬರಗಾಲ ಘೋಷಣೆ ಮಾಡಿ ರೈತರಿಗೆ ಬೆಳೆ ನಷ್ಟ ಪರಿಹರ ಮತ್ತು ರೈತರ ಸಾಲ ಮನ್ನಾ ಮಾಡುವ ಬೇಡಿಕೆಗಳಿಗೆ ಹೋಲಿಸಿದರೆ ಇದು ನಿವಾರಣೆ ಮಾಡದ ಸಮಸ್ಯೆ ಎನಿಸುವುದಿಲ್ಲ.

3. ದಾಖಲೆ ಸಂಗ್ರಹ ಸುಲಭ
ರೈತರು ಬ್ಯಾಂಕ್‌ಗಳಿಗೆ ಭೇಟಿ ನೀಡಿ ವಿಮಾ ಯೋಜನೆಗೆ ಬೆಳೆ ಮತ್ತು ಪ್ರದೇಶದ ವಿವರ ಸಲ್ಲಿಸಿ 1 ರೂ. ನೀಡುವುದರಿಂದ ಎಲ್ಲ ರೈತರನ್ನು ವಿಮಾ ಯೋಜನೆ ವ್ಯಾಪ್ತಿಯಲ್ಲಿ ತರಲು ಸಹಾಯಕವಾಗುತ್ತದೆ. ಜತೆಗೆ ರೈತರ ವಿವರಗಳನ್ನು ಸಂಗ್ರಹಿಸಲು, ಭೂ ದಾಖಲೆ, ಬ್ಯಾಂಕ್‌ಗಳಿಗೆ ಆಧಾರ್‌ ಸಂಪರ್ಕ ಕಲ್ಪಿಸಲು, ಗ್ರಾಮೀಣ ಭಾಗದಲ್ಲಿ ಹಣಕಾಸು ಸಾಕ್ಷರತೆ ತಿಳಿವಳಿಕೆ ಮೂಡಿಸಲು, ಬ್ಯಾಂಕ್‌ಗಳಲ್ಲಿ ಹೊಸ ಖಾತೆಗಳನ್ನು ತೆರೆಯಲು, ರೈತರ ಕುರಿತು ಅಂಕಿ-ಅಂಶಗಳನ್ನು ಸಂಗ್ರಹಿಸಲು ಹಾಗೂ ರೈತರಿಗೆ ತಿಳಿವಳಿಕೆ ಮೂಡಿಸಲು ಸಹಾಯವಾಗುತ್ತದೆ. ಇಡೀ ದೇಶದ ಬೆಳೆಗಳು ಹಾಗೂ ಇಳುವರಿಗಳ ವಿವರದ ಅಂಕಿ-ಅಂಶಗಳನ್ನು ಡಿಜಿಟಲೀಕರಣಗೊಳಿಸಲೂ ಅನುಕೂಲ.

Advertisement

ಎಷ್ಟು ಹಣ ಬೇಕು?
ದೇಶದಲ್ಲಿ ಶೇ. 100ರಷ್ಟು ರೈತರನ್ನು ಬೆಳೆ ವಿಮಾ ವ್ಯಾಪ್ತಿಗೆ ತರಲು ಅಂದಾಜು 53,969 ಕೋಟಿ ರೂ. ಬೇಕಾಗುತ್ತದೆ. ಇದರಲ್ಲಿ ಶೇ.75ರಂತೆ ಲೆಕ್ಕ ಹಾಕಿದರೆ ಕೇಂದ್ರ ಸರ್ಕಾರ 40476 ಕೋಟಿ ರೂ. ಭರಿಸಬೇಕಾಗುತ್ತದೆ. ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಗೆ ಇದಕ್ಕಿಂತ ಹೆಚ್ಚು ಹಣ ವ್ಯಯ ಮಾಡುತ್ತಿದೆ. ಇದಲ್ಲದೇ ಈ ಮೊತ್ತದ ಶೇ.25ರಿಂದ 30ರಷ್ಟನ್ನು (ಅಂದಾಜು 2015ರಂತೆ) ಬರಗಾಲ ಬೆಳೆ ಹಾನಿ ಪರಿಹಾರಕ್ಕೆ ವ್ಯಯಿಸುತ್ತದೆ. ಇವುಗಳನ್ನು ಬೆಳೆ ವಿಮೆ ಕಂತಿಗೆ ಬದಲಾಯಿಸಿಕೊಳ್ಳಬಹುದು. ಕರ್ನಾಟಕದಲ್ಲಿ ಶೇ.100ರಷ್ಟು ರೈತರನ್ನು ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ತರಲು ಸುಮಾರು 6675 ಕೋಟಿ ರೂ. ಬೇಕಾಗುತ್ತದೆ. ಇದರಲ್ಲಿ ರಾಜ್ಯ ಸರ್ಕಾರದ ಪಾಲು ಶೇ.25ರಂತೆ 1619 ಕೋಟಿ ರೂ. ಬೇಕಾಗುತ್ತದೆ. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಜೊತೆಗೂಡಿ ಒಮ್ಮತದಿಂದ ಎಲ್ಲ ಬೆಳೆ ಹಾನಿ ಪರಿಹಾರ, ಬೆಳೆ ಸಾಲ ಮನ್ನಾ ಕೊಡುಗೆಗಳನ್ನು ಕೈಬಿಟ್ಟು ಎಲ್ಲ ರೈತರನ್ನು ಬೆಳೆ ವಿಮೆ ಯೋಜನೆ ವ್ಯಾಪ್ತಿಗೆ ತರಲು ಸಂಘ- ಸಂಸ್ಥೆಗಳ ಸಹಕಾರದೊಂದಿಗೆ ಪ್ರಯತ್ನಿಸಬಹುದು.

ಬೆಳೆ ವಿಮೆ ವ್ಯಾಪ್ತಿ ಪ್ರಮಾಣ
ಕರ್ನಾಟಕದಲ್ಲಿ ಬೆಳೆ ವಿಮೆ ಅಡಿಯಲ್ಲಿ ಬರುವ ರೈತರ ವ್ಯಾಪ್ತಿಯು 2015ರ ಮುಂಗಾರಿನಲ್ಲಿ ಶೇ.11.3ರಷ್ಟಿತ್ತು. 2016ರಲ್ಲಿ ಶೇ.12.2, 2017ರ ಮುಂಗಾರಿನಲ್ಲಿ ಶೇ.17ರಷ್ಟಾಯಿತು. ಉತ್ತರ ಕರ್ನಾಟಕ ಭಾಗದಲ್ಲಿ ಈ ಪ್ರಮಾಣ ಶೇ.20ರಿಂದ 25ರವರೆಗೆ ಆಗಿದೆ. ಹಿಂಗಾರಿನಲ್ಲಿ 2015ರಲ್ಲಿ ಶೇ.4.11ರಷ್ಟಿತ್ತು. 2016ರಲ್ಲಿ ಶೇ.15.1ರಷ್ಟಿತ್ತು.

ರಾಜ್ಯದಲ್ಲಿ ಬೆಳೆ ವಿಮೆ ಯೋಜನೆ ಎದುರಿಸುತ್ತಿರುವ ಸವಾಲುಗಳು ಹಾಗೂ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೃಷಿ ಬೆಲೆ ಆಯೋಗದಿಂದ ಸಂಶೋಧನಾ ಅಧ್ಯಯನ ವರದಿ ತಯಾರಿಸಲಾಗಿದೆ. ಈ ವರದಿಯನ್ನು ಜುಲೈನಲ್ಲಿ ರಾಜ್ಯ ಸರ್ಕಾರಕ್ಕೆ ಅಧಿಕೃತವಾಗಿ ವರದಿ ಸಲ್ಲಿಸಲಾಗುವುದು. ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ವರದಿ ಸಲ್ಲಿಕೆಯಾಗಲಿದೆ.
– ಪ್ರಕಾಶ ಕಮ್ಮರಡಿ, ಅಧ್ಯಕ್ಷರು, ರಾಜ್ಯ ಕೃಷಿ ಬೆಲೆ ಆಯೋಗ

ರಾಜ್ಯದಲ್ಲಿ ಬೆಳೆ ವಿಮೆ ಯೋಜನೆ ಎದುರಿಸುತ್ತಿರುವ ಸವಾಲುಗಳು ಹಾಗೂ ಪರಿಹಾರೋಪಾಯಗಳ ಕುರಿತು ಅಧ್ಯಯನ, ಸಾವಿರಾರು ರೈತರ ಮನೆ, ಹೊಲ ಭೇಟಿ, ಕಾರ್ಯಾಗಾರ, ರೈತರು ಹಾಗೂ ಕೃಷಿ ಅ ಧಿಕಾರಿಗಳು, ವಿಜ್ಞಾನಿಗಳೊಂದಿಗೆ ಚರ್ಚೆ ಮಾಡಿ ಕೃಷಿ ಚಟುವಟಿಕೆ ಆರಂಭದಿಂದ ಇಳುವರಿ ಮಾರುಕಟ್ಟೆ ಸೇರುವವರೆಗೆ ಸಮಗ್ರ ಅಧ್ಯಯನ ಮಾಡಿ ವರದಿ ತಯಾರಿಸಿ, ಕೃಷಿ ಬೆಲೆ ಆಯೋಗಕ್ಕೆ ಸಲ್ಲಿಸಲಾಗಿದೆ.
– ನಯನತಾರಾ ನಾಯಕ, ಸಂಶೋಧಕರು, ಸಿಎಂಡಿಆರ್‌, ಧಾರವಾಡ

– ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next