ಬೆಂಗಳೂರು: ರಾಜ್ಯ ಸರ್ಕಾರದ ಸಾಲ ಮನ್ನಾ ಯೋಜನೆಯ ಲಾಭ ಪಡೆದ ರೈತರಿಗೆ ಪುನಃ ಸಾಲ ವಿತರಿಸಲು ಕೆಲವು ಸಹಕಾರ ಸಂಘಗಳ ಕಾರ್ಯದರ್ಶಿಗಳು ಕಮಿಷನ್ ಕೇಳುತ್ತಿದ್ದಾರೆ!
ಹೌದು, ಸರ್ಕಾರವೇ ಇದನ್ನು ಅಧಿಕೃತವಾಗಿ ಒಪ್ಪಿಕೊಂಡಿದೆ. ಅಷ್ಟೇ ಅಲ್ಲ, ಈ ರೀತಿ ಕಮಿಷನ್ ದಂಧೆಗೆ ಕಡಿವಾಣ ಹಾಕಲು ಹೆಲ್ಪ್ಲೈನ್ ಆರಂಭಿಸಲು ನಿರ್ಧರಿಸಿದೆ.
ಸಹಕಾರ ಇಲಾಖೆ ಶೀಘ್ರದಲ್ಲೇ ಹೆಲ್ಪ್ಲೈನ್ ಸಂಖ್ಯೆಯನ್ನು ಪ್ರಕಟಿಸಲಿದ್ದು, ಸಾಲ ಮನ್ನಾ ವಿಚಾರದಲ್ಲಿ ಸಂಘದ ಕಾರ್ಯದರ್ಶಿ ಸೇರಿದಂತೆ ಯಾರಾದರೂ ಕಮಿಷನ್ ಕೇಳಿದಲ್ಲಿ ರೈತರು ಈ ಸಂಖ್ಯೆಗೆ ನೇರವಾಗಿ ದೂರು ಸಲ್ಲಿಬಹುದು. ಈ ದೂರುಗಳ ಬಗ್ಗೆ ತನಿಖೆ ನಡೆಸಿ ಅದು ಸಾಬೀತಾದರೆ ಸಂಬಂಧಿಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಕೂಡ ತೀರ್ಮಾನಿಸಲಾಗಿದೆ.
ಈ ಕುರಿತು ಸಹಕಾರ ಸಂಘಗಳ ನಿಬಂಧಕ ಎಂ.ಕೆ.ಅಯ್ಯಪ್ಪ ಸುತ್ತೋಲೆ ಕಳುಹಿಸಿದ್ದು, ಸಹಕಾರಿ ಕ್ಷೇತ್ರದ ಹಣಕಾಸು ಸಂಸ್ಥೆಗಳ ಬಗ್ಗೆ ನಿಗಾ ವಹಿಸುವಂತೆ ಸೂಚಿಸಿದ್ದಾರೆ.
ಸಿದ್ದರಾಮಯ್ಯ ಅವಧಿಯಲ್ಲಿ ರೈತರು ಸಹಕಾರ ಸಂಘಗಳಲ್ಲಿ ಮಾಡಿದ್ದ ಸಾಲದ ಪೈಕಿ 50 ಸಾವಿರ ರೂ.ವರೆಗಿನ ಸಾಲ ಮನ್ನಾ ಮಾಡಿತ್ತು. ಇದರ ಲಾಭ ಪಡೆದ ರೈತರಿಗೆ ಪುನಃ ಸಾಲ ವಿತರಿಸುವ ಸಂದರ್ಭದಲ್ಲಿ ಸಹಕಾರ ಸಂಘಗಳ ಕಾರ್ಯದರ್ಶಿಗಳು ಕಮಿಷನ್ ಕೇಳುತ್ತಿದ್ದರು ಎಂಬ ಬಗ್ಗೆ ದೂರು ಬಂದಿದ್ದವು.ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊ ಳ್ಳ ಲಾ ಗಿದೆ. ಈ ಹೆಲ್ಪ್ಲೈನ್ ಮುಂದಿನ ದಿನಗಳಲ್ಲಿ ಹಾಲಿ ಸರ್ಕಾರದ ಸಾಲ ಮನ್ನಾ ಯೋಜನೆಗೂ ಇರುತ್ತದೆ. ಬೇನಾಮಿ ರೈತರ ಹೆಸರಿನಲ್ಲಿ ಸಾಲ ಮನ್ನಾ ಯೋಜನೆಯ ದುರುಪಯೋಗ ಮಾಡಿಕೊಳ್ಳುವುದು, ಲೆಕ್ಕ ಪುಸ್ತಕದಲ್ಲಿ ಹೊಂದಾಣಿಕೆ ಮಾಡಿ ರೈತರಿಗೆ ವಂಚನೆ ಮಾಡುವುದು ಮುಂತಾದ ಸಮಸ್ಯೆಗಳ ಬಗ್ಗೆ ಹಾಗೂ ಸಾಲ ಮನ್ನಾ ಮತ್ತು ಹೊಸ ಸಾಲದ ವಿಚಾರದಲ್ಲಿ ರೈತರಿಗೆ ತೊಂದರೆಯಾದಾಗಲೂ ದೂರು ದಾಖಲಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಸಾಲ ಮನ್ನಾ ಆಗಿ ಹೊಸ ಸಾಲ ವಿತರಿಸುವಾಗ ಡಿಸಿಸಿ ಬ್ಯಾಂಕ್ ಸೇರಿ ಇತರೆ ಯಾವುದೇ ಬ್ಯಾಂಕಿನಲ್ಲಿ ರೈತರು ರುಪೇ ಕಾರ್ಡ್ ಪಡೆಯಲು ಹೊಂದಿರುವ ಉಳಿತಾಯ ಖಾತೆ ಮೂಲಕವೇ ಸಾಲ ವಿತರಿಸಬೇಕು. ರೈತರ ಸಾಲ ಮರುಪಾವತಿಗೆ ನಿಗದಿಪಡಿಸಿದ ಗಡುವಿನೊಳಗೆ ಸರ್ಕಾರದಿಂದ ಸಾಲ ಮನ್ನಾ ಮೊತ್ತ ಬಿಡುಗಡೆ ಆಗದೇ ಇದ್ದರೂ ಮರುಪಾವತಿ ಅವಧಿಯಿಂದ ಸರ್ಕಾರದಿಂದ ಹಣ ಬರುವವರೆಗಿನ ಅವಧಿಗೆ ಯಾವುದೇ ಬಡ್ಡಿ ವಿಧಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಬೆಳೆ ವಿಮೆ ಕಡ್ಡಾಯ
ಸಾಲ ಮನ್ನಾ ಸೌಲಭ್ಯ ಪಡೆಯುವ ರೈತರು ಮತ್ತೆ ಸಾಲ ಪಡೆಯುವಾಗ ಬೆಳೆ ವಿಮೆ ಮಾಡಿಕೊಳ್ಳುವುದು ಕಡ್ಡಾಯ. ವರ್ಷದ ಯಾವುದೇ ತಿಂಗಳಲ್ಲಿ ಹೊಸ ಸಾಲ ವಿತರಿಸಿದರೂ ಆ ವರ್ಷದ ಆರಂಭದಲ್ಲಿಯೇ ರೈತರು ಬೆಳೆಯುವ ಬೆಳೆಯ ವಿವರ ಪಡೆದು ರೈತರನ್ನು ಕಡ್ಡಾಯವಾಗಿ ಬೆಳೆ ವಿಮೆ ವ್ಯಾಪ್ತಿಗೆ ತರಬೇಕು ಎಂದೂ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ರೈತರ ಸಾಲದ ಖಾತೆಯಿಂದ ಬೆಳೆ ವಿಮೆಗೆ ಹಣ ಪಡೆದುಕೊಳ್ಳಬಹುದು. ಆದರೆ, ಅದನ್ನು ಹೊರತುಪಡಿಸಿ ಒತ್ತಾಯ ಪೂರ್ವಕವಾಗಿ ಇತರೆ ಯಾವುದೇ ವೆಚ್ಚ ಅಥವಾ ಠೇವಣಿಯನ್ನು ವಸೂಲಿ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
– ಪ್ರದೀಪ್‌ಕುಮಾರ್ ಎಂ.