Advertisement

ಋಣಮುಕ್ತ ಕಾಯ್ದೆ ವರವೋ, ಶಾಪವೋ..?

03:01 PM Aug 14, 2019 | Suhan S |

ಚನ್ನರಾಯಪಟ್ಟಣ: ಖಾಸಗಿ ಬಡ್ಡಿ ದಂಧೆಕೋರರ ಸಾಲದ ಸುಳಿಗೆ ಸಿಲುಕಿ ಹೊರಬರಲಾಗಿದೆ ಬದುಕನ್ನೇ ಅತಂತ್ರಗೊಳಿಸಿಕೊಂಡಿದ್ದ ತಾಲೂಕಿನ ಸಾವಿರಾರು ಕುಟುಂಬಗಳಿಗೆ ಕರ್ನಾಟಕ ಋಣಮುಕ್ತ ಕಾಯ್ದೆ ವರವಾಗುವುದೋ ಇಲ್ಲ ಶಾಪವಾಗಿ ಪರಿಣಮಿಸುವುದೇ ಇಲ್ಲ ಬಲಾಡ್ಯರನ್ನು ಎದುರಿಸಲಾಗದೇ ಸಾಲದ ಬಲೆಯಲ್ಲಿ ಸಿಲುಕಿ ನರಳಾಡುವರೇ ಎಂಬ ಪ್ರಶ್ನೆ ತಾಲೂಕಿನ ಜನರದ್ದಾಗಿದೆ.

Advertisement

ನಿರಂತರ ಬರಗಾಲದಲ್ಲಿ ಸಂಪಾದನೆ ಕಡಿಮೆಯಾಗಿರುವುದರಿಂದ ಮನೆಯಲ್ಲಿನ ಒಡವೆ ಅಡಮಾನವಿಟ್ಟು ಬಡ್ಡಿಗೆ ಹಣ ತಂದು ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಪಟ್ಟಣದಲ್ಲಿ ಸಣ್ಣ ಪುಟ್ಟ ವ್ಯಾಪಾರಸ್ಥರು ಬಡ್ಡಿಗೆ ಕೈಸಾಲ ಪಡೆಯುವುದು ಮಾಮೂಲು. ಇದಲ್ಲದೇ ಕೆಲವರು ಮುಂಜಾನೆ 500 ರೂ. ಪಡೆದು ಸಂಜೆ 600 ರೂ. ನೀಡುತ್ತಾರೆ. ಸಂಜೆಗೆ ಹಣ ಮರುಪಾವತಿ ಮಾಡಲು ಸಾಧ್ಯವಾಗದಿದ್ದರೆ ಮರುದಿವಸ 200 ರೂ. ಬಡ್ಡಿ ಸೇರಿಸಿ 800 ರೂ. ಕೊಡುವುದು ಅನಿವಾರ್ಯವಾಗಿದೆ.

ಹನುಮಂತನ ಬಾಲದಂತಾಗುವ ಬಡ್ಡಿ: ಹೀಗೆ ಬಡ್ಡಿ ಹನುಮಂತನ ಬಾಲದಂತೆ ಬೆಳೆಯುವ ಬಡ್ಡಿ ತೀರಿಸಲಾಗದೇ ಜೀವ ಕಳೆದುಕೊಂಡವರೂ ಇದ್ದಾರೆ. ಕೆಲವರಂತೂ ಅಸಲಿಗಿಂತ ಹೆಚ್ಚು ಬಡ್ಡಿ ಕಟ್ಟಿ ಮನೆಯಲ್ಲಿರುವ ವಸ್ತುಗಳನ್ನು ಮಾರಿ ತಮ್ಮ ಬದುಕು ಬೀದಿಗೆ ತಂದುಕೊಂಡಿದ್ದಾರೆ.ಇಷ್ಟಾದರೂ ಬಡ್ಡಿದಂಧೆ ಮಾಡುವವರು ಮಾತ್ರ ಮಾನವೀಯತೆ ಮರೆತು ವರ್ತಿಸುತ್ತಾರೆ. ಬಲಾಡ್ಯರು ಹಾದಿ ಬೀದಿಯಲ್ಲಿ ಸಾಲಗಾರರ ಮಾನ ಹರಾಜು ಹಾಕುತ್ತಾರೆ.

ದಾಖಲೆ ರಹಿತ ಸಾಲ ಮಾರಕ: ಇನ್ನು ದಾಖಲೆ ರಹಿತವಾಗಿ ಸಾಲ ಪಡೆದವರೂ ಸಾಕಷ್ಟು ಮಂದಿ ಇದ್ದಾರೆ, ಸಾವಿರಕ್ಕೆ ನೂರು ರೂ. ಬಡ್ಡಿ ಕಟ್ಟುವವರೂ ಇದ್ದಾರೆ. ಆದರೆ ಇಂತಹಾ ಸಾಲಕ್ಕೆ ಯಾವ ದಾಖಲೆ ಪುರಾವೆಗಳಿಲ್ಲ. ಹೀಗಿರುವಾಗ ಸಾಲಗಳ ಗತಿ ಏನು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಸಾಲ ನೀಡಿದವರು, ಸಾಲ ಪಡೆದ ವ್ಯಕ್ತಿಗಳಿಂದ ಅಧಾರವಾಗಿ ಖಾಲಿಚೆಕ್‌, ಆಸ್ತಿ ದಾಖಲೆಯನ್ನ ತಮ್ಮ ವಶದಲ್ಲಿ ಇಟ್ಟುಕೊಂಡಿದ್ದಾರೆ. ಕೆಲವರು ತಮ್ಮ ಬಳಿ ಇರುವ ದ್ವಿಚಕ್ರ ವಾಹನದ ದಾಖಲೆಯನ್ನು ಕೊಟ್ಟು ಸಾಲ ಪಡೆದಿದ್ದಾರೆ.

ಬಡ್ಡಿ ದಂಧೆಕೋರರ ದೌರ್ಜನ್ಯ: ಹಲವು ಮಂದಿ ಚೆಕ್‌ ಬೌನ್ಸ್‌ ಮಾಡಿಸಿ ಸಾಲಗಾರನ್ನು ಜೈಲಿಗೆ ಕಳುಹಿಸಿ ಕುಟುಂಬಕ್ಕೆ ತೊಂದರೆ ನೀಡಿದ ಉದಾಹರಣೆಗಳು ತಾಲೂಕಿನಲ್ಲಿ ಸಾಕಷ್ಟಿವೆ. ಬಡ್ಡಿ ಸುಳಿಯಲ್ಲಿ ಅನೇಕ ಮಂದಿ ಮನೆ ಮಠ ಕಳೆದುಕೊಂಡು ತಾಲೂಕು ಬಿಟ್ಟು ಮಹಾನಗರ ಸೇರಿದವರಿಗೇನೂ ಲೆಕ್ಕವಿಲ್ಲ. ಇಷ್ಟೆಲ್ಲಾ ಗೊಂದಲ ಇರುವಾಗ ಋಣಮುಕ್ತ ಕಾಯ್ದೆ ಸಾಲಗಾರನಿಗೆ ವರವಾಗುವುದೋ ಇಲ್ಲ ಶಾಪವಾಗಿ ಪರಿಣಮಿಸುವೇ ಆ ದೇವರೇ ಬಲ್ಲ.

Advertisement

ಕಳೆದ ಒಂದು ವರ್ಷದ ಹಿಂದೆ ರೈತರ ಸಾಲಮನ್ನಾ ಮಾಡಿದ್ದು ಶೇ. 50 ರಷ್ಟು ಮಾತ್ರ ಹಣ ಬ್ಯಾಂಕಿಗೆ ತಲುಪಿದೆ. ಉಳಿಕೆ ಹಣ ಸರ್ಕಾರ ನೀಡದೆ ಇರುವುದರಿಂದ ಹಲವು ಮಂದಿ ರೈತರು ನಿತ್ಯವೂ ಬ್ಯಾಂಕ್‌ ಬಾಗಿಲು ಸುತ್ತುತ್ತಿದ್ದಾರೆ. ಇದರ ನಡುವೆ ತಮ್ಮ ಅಧಿಕಾರದ ಕೊನೆಯ ದಿವಸದಲ್ಲಿ ಎಚ್.ಡಿ. ಕುಮಾರಸ್ವಾಮಿ ಜಾರಿಗೆ ತಂದ ಹೊಸ ಕಾನೂನಿಗೆ ಹೊಸ ಸರ್ಕಾರ ಬೆಲೆ ನಿಡುವುದೇ, ಒಂದೊಮ್ಮೆ ನಿಡಿದರೂ ಇದಕ್ಕೆ ಹಣ ಎಲ್ಲಿಂದ ಹೊಂದಿಸಲಿದೆ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ.

ಬಡ್ಡಿ ವ್ಯವಹಾರದ ದಾಖಲೆ ನೀಡಿ: ಲೇವಾದೇವಿದಾರರಿಂದ ಬಡ್ಡಿಗೆ ಸಾಲ ಪಡೆದಿದ್ದರೆ ಹೊಸ ನಿಯಮದ ಅನ್ವಯ 2019ರ ಜು.23 ಹಿಂದೆ ಸಾಲದ ಬಾಕಿ ಮತ್ತು ಬಡ್ಡಿ ಮರುಪಾವತಿ ಮಾಡುವಂತಿಲ್ಲ. ಸಾಲ ಪಡೆದವರ ಬಳಿ ಬ್ಯಾಂಕ್‌ ಚೆಕ್‌, ಚಿನ್ನದ ಆಭರಣ ಆಧಾರವಾಗಿ ಪಡೆದಿದ್ದರೆ ಆ ದಾಖಲೆ ಸಮೇತ ಉಪವಿಭಾಗಾಧಿಕಾರಿ ಕಚೇರಿಗೆ ನೋಂದಾಯಿಸಬೇಕು. ಅವರಿಗೆ ಸರ್ಕಾರವೇ ಹಣ ಮರುಪಾವತಿ ಮಾಡುತ್ತದೆ. ಇಂತಹ ಮಹತ್ವದ ನಿರ್ಧಾರವನ್ನು ಸರ್ಕಾರ ಪ್ರಕಟಿಸಿ ಸಾಲಗಾರರಿಗೆ ಮನೋಸ್ಥೈರ್ಯ ತುಂಬುವ ಕೆಲಸ ಮಾಡಿದೆ. ಆದರೆ ಈ ಯಮಪಾಶದಿಂದ ಪಾರಾಗುವುದು ಅಷ್ಟು ಸುಲಭವಲ್ಲ ಎಂಬ ಆತಂಕವಿರುವುದು ಅಷ್ಟೇ ಸತ್ಯ.

 

● ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next