Advertisement

ಹಣ ಕಳೆದುಕೊಳ್ಳುವ ಭೀತಿಯೇ? ಏನಿದು ಡೆಟ್ ಫಂಡ್, ಸುಭದ್ರ ಹೂಡಿಕೆ

06:00 AM Oct 22, 2018 | Team Udayavani |

ಟಾಪ್ ಟೆನ್ ಹೂಡಿಕೆ ಅವಕಾಶಗಳಡಿ ಮೂರನೇ ಕ್ರಮಾಂಕದಲ್ಲಿ ನಾವು ಡೆಟ್ ಫಂಡ್ ಆಯ್ಕೆಯನ್ನು ಗುರುತಿಸಬಹುದು. ಆದರೆ ಡೆಟ್ ಫಂಡ್ ಎಂದರೆ ಏನು ಎಂಬ ಬಗ್ಗೆ ಹಲವರಿಗೆ ಸರಿಯಾದ ಮಾಹಿತಿಯೇ ಇರುವುದಿಲ್ಲ. ಹೂಡಿಕೆಯ ಟಾಪ್ ಟೆನ್ ಅವಕಾಶಗಳನ್ನು ತಿಳಿಯುವ ಯತ್ನದಲ್ಲಿ ಡೆಟ್ ಫಂಡ್ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. 

Advertisement

ಉಳಿತಾಯದ ಹಣವನ್ನು ಹೆಚ್ಚು ಲಾಭದಾಯಕ ರೀತಿಯಲ್ಲಿ ತೊಡಗಿಸುವುದು ಸುಲಭದ ಮಾತಲ್ಲ. ಏಕೆಂದರೆ ಇದರಲ್ಲಿ ಬುದ್ಧಿವಂತಿಕೆ, ತಿಳಿವಳಿಕೆ, ಜ್ಞಾನ, ವ್ಯವಧಾನ, ವಿವೇಕ ಮುಂತಾಗಿ ಎಲ್ಲ ಬಗೆಯ ಗುಣಗಳು ಮುಖ್ಯವಾಗುತ್ತವೆ. ಹೆಚ್ಚು ರಿಸ್ಕ್ ಇರುವಲ್ಲಿ  ಹೆಚ್ಚು ಲಾಭ ಇರುತ್ತದೆ ಎನ್ನುವುದು ಬಹುತೇಕ ನಿಜವೇ ಆದರೂ ಅತಿಯಾದ ರಿಸ್ಕ್ ನಿಂದ ಅಸಲನ್ನೇ ಕಳೆದುಕೊಳ್ಳುವ ಹೂಡಿಕೆಗೆ ಮುಂದಾಗಬಾರದು. 

ಉದಾಹರಣೆಗೆ ಪೋಂಜಿ ಸ್ಕೀಮುಗಳು. ಇವುಗಳನ್ನು ಚೈನ್ ಸ್ಕೀಮ್ ಎಂದು ಕೂಡ ಹೇಳುತ್ತಾರೆ. ಒಂದು ನಿರ್ದಿಷ್ಟ ಹೂಡಿಕೆ ಯೋಜನೆಗೆ ಸದಸ್ಯರನ್ನು ಕಲೆ ಹಾಕುತ್ತಾ ದೀರ್ಘಾವಧಿಗೆ ನಿರಂತರವಾಗಿ ಕಂತು ಕಂತಿನಲ್ಲಿ ಹಣ ಹರಿದು ಬರುವ ಯೋಜನೆಗಳೇ ಪೋಂಜಿ ಸ್ಕೀಮುಗಳು. ಇಂತಹ ಯೋಜನೆಗಳಲ್ಲಿ ಲಕ್ಷಾಂತರ ಹಣ ಕಳೆದುಕೊಂಡವರೇ ಅಧಿಕ. ಈಚೆಗೆ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ತಾಯಿ 50 ಲಕ್ಷ ರೂ. ಹಣವನ್ನು ಪೋಂಜಿ ಸ್ಕೀಮಿನಲ್ಲಿ ಕಳೆದುಕೊಂಡ ವಾರ್ತೆಯನ್ನು ಎಲ್ಲರೂ ಓದಿರುತ್ತಾರೆ !

ಅತ್ಯುತ್ತಮ ಹೂಡಿಕೆಗಿರುವ ಟಾಪ್ ಟೆನ್ ಆಯ್ಕೆಗಳನ್ನು ಗುರುತಿಸುವ ಮೂಲ ಉದ್ದೇಶವೇ ಹೂಡಿಕೆದಾರರಲ್ಲಿ ಜಾಗೃತಿ ಮೂಡಿಸುವುದು. ಟಾಪ್ ಟೆನ್ ಹೂಡಿಕೆ ಆಯ್ಕೆಗಳಲ್ಲಿ ನಾವು ನೇರ ಈಕ್ವಿಟಿ ಹೂಡಿಕೆ ಮತ್ತು ಮ್ಯೂಚುವಲ್ ಫಂಡ್ ಹೂಡಿಕೆಗಳನ್ನು ಚರ್ಚಿಸಿದ್ದೇವೆ. ಈಗ ಮೂರನೇ ಆಯ್ಕೆಯ ರೂಪದಲ್ಲಿ ನಾವು ಡೆಟ್ ಮ್ಯೂಚುವಲ್ ಫಂಡ್ ಬಗ್ಗೆ ತಿಳಿಯುವುದು ಸೂಕ್ತ.

Advertisement

ಡೆಟ್ ಮ್ಯೂಚುವಲ್ ಫಂಡ್ ಎಂದರೆ ಭದ್ರತೆ ಮತ್ತು ಸುರಕ್ಷೆಯನ್ನು ಒದಗಿಸುವ ಹೂಡಿಕೆ ಮಾಧ್ಯಮ ಎಂದೇ ತಿಳಿಯಬಹುದು. ಇವುಗಳನ್ನು ಮುಖ್ಯವಾಗಿ ನಾವು ನಿಗದಿತ ಬಡ್ಡಿ ಆದಾಯ ತರುವ ಯೋಜನೆಗಳೆಂದು ಗುರುತಿಸಬಹುದು. ಉದಾಹರಣೆಗೆ ಕಾರ್ಪೊರೇಟ್ ಬಾಂಡ್ ಗಳು, ಸರಕಾರಿ ಭದ್ರತಾ ಪತ್ರಗಳು, ಟ್ರೆಶರಿ ಬಿಲ್ ಗಳು, ವಾಣಿಜ್ಯ ಹಣಕಾಸು ಪತ್ರಗಳು ಮತ್ತು ಇನ್ನಿತರ ಬಗೆಯ ಮಾರುಕಟ್ಟೆ ಸಂಬಂಧಿತ ಹಣಕಾಸು ಪತ್ರಗಳು. ಇವೆಲ್ಲವೂ ಹೂಡಿಕೆದಾರರಿಗೆ ನಿಗದಿತ ಬಡ್ಡಿ ಆದಾಯವನ್ನು ಖಾತರಿ ಪಡಿಸುತ್ತವೆ. ಹಾಗಾಗಿ ಈ ಡೆಟ್ ಮ್ಯಾಚುವಲ್ ಫಂಡ್ ಗಳಲ್ಲಿ ಹಣ ಹೂಡಿದರೆ ಅಸಲು ಮತ್ತು ಬಡ್ಡಿಯ ಬಗ್ಗೆ ನಿಶ್ಚಿಂತರಾಗಿರಲು ಸಾಧ್ಯ.

ಪ್ರಕೃತ ಈ ಬಗೆಯ ಡೆಟ್ ಮ್ಯೂಚುವಲ್ ಫಂಡ್ ಗಳಿಂದ 1 ವರ್ಷ, 3 ವರ್ಷ ಮತ್ತು 5 ವರ್ಷಗಳ ಅವಧಿಗೆ ಸಿಗುವ ಮಾರುಕಟ್ಟೆ ಇಳುವರಿಯು ಅನುಕ್ರಮವಾಗಿ ಶೇ.6.5, ಶೇ.8 ಮತ್ತು ಶೇ.7.5 ಆಗಿರುತ್ತದೆ ಎನ್ನುವುದು ಗಮನಾರ್ಹ. 

ಡೆಟ್ ಫಂಡ್ ಗಳ ಗುಣ ಲಕ್ಷಣಗಳನ್ನು ನಾವು ಈ ರೀತಿಯಾಗಿ ಗುರುತಿಸಬಹುದು : 

1. ರಿಸ್ಕ್ : ಹೆಚ್ಚು ಕಡಿಮೆ ಇರುತ್ತದೆ 
2. ಓಪನ್ ಎಂಡ್
3. ನಗದೀಕರಣ ಸೌಕರ್ಯ ಅತ್ಯಧಿಕ
4. ಇವು ಮಾರುಕಟ್ಟೆಯ ಏರಿಳಿತಕ್ಕೆ ಪಕ್ಕಾಗಿರುತ್ತವೆ
5. ಇವುಗಳ ಮೇಲಿನ ಅಲ್ಪಾವಧಿ ಕ್ಯಾಪಿಟಲ್ ಗೇನ್ಸ್  (ಎಸ್ಟಿಸಿಜಿ) ಆದಾಯಕ್ಕೆ ಸೇರ್ಪಡೆಗೊಳ್ಳುತ್ತದೆ
6. ದೀರ್ಘಾವಧಿಯ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಶೇ.20 ಇರುತ್ತದೆ. 

ಹಣ ಹೂಡಿಕೆಯಲ್ಲಿ ಹೆಚ್ಚು ರಿಸ್ಕೂ ಬೇಡ ಹೆಚ್ಚು ಲಾಭವೂ ಬೇಡ; ಅಸಲು ಉಳಿದರೆ ಸಾಕು, ಜತೆಗೆ ಉತ್ತಮ ಬಡ್ಡಿ ಸಿಕ್ಕಿದರೆ ಒಳ್ಳೆಯದು ಎನ್ನುವವರಿಗೆ, ಜೀವನದ ಸಂಧ್ಯಾ ಕಾಲದಲ್ಲಿ ಇರುವವರಿಗೆ, ಡೆಟ್ ಫಂಡ್ ಮಾಧ್ಯಮ ಒಳ್ಳೆಯ ಹೂಡಿಕೆ ಅವಕಾಶ ಎನ್ನಲು ಅಡ್ಡಿಲ್ಲ 

ನ್ಯಾಶನಲ್ ಪೆನ್ಶನ್ ಸಿಸ್ಟಮ್ (NPS) :

ಟಾಪ್ ಟೆನ್ ಹೂಡಿಕೆ ಅವಕಾಶಗಳನ್ನು ನಾವು ನಾಲ್ಕನೇ ಕ್ರಮಾಂಕದಲ್ಲಿ ನ್ಯಾಶನಲ್ ಪೆನ್ಶನ್ ಸಿಸ್ಟಮ್ ಗುರುತಿಸಬಹುದು. ಇದನ್ನು ನಾವು ದೀರ್ಘಾವಧಿ ರಿಟೈರ್ವೆುಂಟ್ ಹೂಡಿಕೆ ಯೋಜನೆ ಎಂದು ಕೂಡ ಹೇಳಬಹುದು.

NPS ಅನ್ನು ನಮ್ಮ ದೇಶದ ಪೆನ್ಶನ್ ಫಂಡ್ ರೆಗ್ಯುಲೇಟರಿ ಆ್ಯಂಡ್ ಡೆವಲಪ್ಮೆಂಟ್ ಅಥಾರಿಟಿ (PERDA) ನಿರ್ವಹಿಸುತ್ತದೆ ಎನ್ನುವುದು ಗಮನಾರ್ಹ.

ಒಂದು ಹಣಕಾಸು ವರ್ಷದ ಎಪ್ರಿಲ್ನಿಂದ ತೊಡಗಿ ಮುಂದಿನ ಮಾರ್ಚ್ ವರಗಿನ ಅವಧಿಯಲ್ಲಿ  ಎನ್ಪಿಎಸ್ ಟಯರ್-1 ಖಾತೆಯಲ್ಲಿ ಒಬ್ಬ ಬಳಕೆದಾರ ಕನಿಷ್ಠ 1,000 ರೂ. ವನ್ನು ಹೂಡಿಕೆ ಮಾಡಬಹುದಾಗಿತ್ತದೆ. ಈ ಹಿಂದೆ ಒಂದ ವರ್ಷದಲ್ಲಿ ಕನಿಷ್ಠ ಹೂಡಿಕೆ ಮೊತ್ತವು 6,000 ರೂ.ಗಳಾಗಿದ್ದವು. ಈಚೆಗೆ ಅದನ್ನು 1,000 ರೂ. ಗೆ ಇಳಿಸಲಾಗಿದೆ.

ವಿಶೇಷವೆಂದರೆ ಈ ಯೋಜನೆಯು ಈಕ್ವಿಟಿ, ನಿರಖು ಠೇವಣಿ, ಕಾರ್ಪೊರೇಟ್ ಬಾಂಡ್, ಲಿಕ್ವಿಡ್ ಫಂಡ್ ಮತ್ತು ಗವರ್ನ್ಮೆಂಟ್ ಫಂಡ್ ಗಳ ಮಿಶ್ರಣವಾಗಿದೆ. ನಿಮ್ಮ ನಿಮ್ಮ ಹೂಡಿಕೆ ಸಾಮರ್ಥ್ಯಕ್ಕೆ ಅನುಗುಣವಾಗಿ ನೀವು ಈ ಯೋಜನೆಯಲ್ಲಿ ಒಂದು ವರ್ಷದಲ್ಲಿ ಹೂಡುವ ಹಣದ ಪ್ರಮಾಣವನ್ನು ನೀವೇ ನಿರ್ಧರಿಸಬಹುದಾಗಿದೆ. 

ಪ್ರಕೃತ ಒಂದು, ಮೂರು ಮತ್ತು ಐದು ವರ್ಷ ಮಾರುಕಟ್ಟೆ ಇಳುವರಿಯು (ಫಂಡ್ ಆಪ್ಶನ್ ಇ ಗೆ ಸಂಬಂಧಪಟ್ಟು) ಸರಿ ಸುಮಾರು ಶೇ. 9.5, ಶೇ. 8.5 ಮತ್ತು ಶೇ.11ರ ಪ್ರಮಾಣದಲ್ಲಿ  ಇರುತ್ತದೆ. 

NPS ಗುಣಲಕ್ಷಣಗಳು ಹೀಗಿವೆ : 

1. ರಿಸ್ಕ್ – ಹೆಚ್ಚು ಕಡಿಮೆ ಪ್ರಮಾಣದಲ್ಲಿರುತ್ತದೆ
2. 60ರ ಕೆಳಹರೆಯದವರಿಗೆ ಪ್ರವೇಶಾಕಾವಕಾಶ ಇರುತ್ತದೆ
3. ನಗದೀಕರಣ ಸಾಧ್ಯತೆ ಪರಿಮಿತವಾಗಿರುತ್ತದೆ
4. ಯೋಜನೆಯ ಇಳುವರಿಯು ಶೇರು ಮಾರಕಟ್ಟೆಯ ಏರಿಳಿತದೊಂದಿಗೆ ಬೆಸೆದಿರುತ್ತದೆ
5. ಇಳುವರಿ ಶೇ.7.75 ಇರುತ್ತದೆ
6.  ಶೇ.40ರ ವರೆಗೆ ಕಾರ್ಪಸ್ ಟ್ಯಾಕ್ಸ್ ವಿನಾಯಿತಿ ಇರುತ್ತದೆ; ವಾರ್ಷಿಕ ಇಳುವರಿ ಮೇಲೆ ತೆರಿಗೆ ಇರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next