Advertisement

ಸಾಲಮನ್ನಾ ಮಾಡದ ಕೇಂದ್ರ: ಹುಸಿಯಾದ ನಿರೀಕ್ಷೆ

07:09 AM Feb 02, 2019 | Team Udayavani |

ಕೇಂದ್ರ ಹಣಕಾಸು ಸಚಿವ ಪಿಯೂಷ್‌ ಗೋಯಲ್‌ ಮಂಡಿಸಿರುವ ಬಜೆಟ್‌ನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತನ್ನ ಉಡಿಯಲ್ಲಿಟ್ಟುಕೊಂಡಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಯಾವುದೇ ಕನಿಷ್ಠ ಯೋಜನೆಗಳನ್ನು ಜಾರಿಗೊಳಿಸಿಲ್ಲ ಎಂಬ ಕೂಗು ಎಲ್ಲೆಡೆ ವ್ಯಕ್ತವಾಗಿದೆ.

Advertisement

ಹೆಚ್ಚಿನ ರೈಲ್ವೆ ಸೌಲಭ್ಯ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲಮನ್ನಾ, ಸ್ವಾಮಿನಾಥನ್‌ ವರದಿ ಜಾರಿ, ರೈತರ ಬೆಳೆಗಳಿಗೆ ಬೆಂಬಲ ಬೆಲೆ, ಪೆಟ್ರೋಲ್‌, ಡೀಸೆಲ್‌ ದರ ಹಾಗೂ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ನಿಯಂತ್ರಣದ ಬಗ್ಗೆ ಕ್ರಮ ಕೈಗೊಳ್ಳಬಹುದೆಂಬ ರೈತರು ಹಾಗೂ ಜನರ ನಿರೀಕ್ಷೆಯನ್ನು ಕೇಂದ್ರ ಸರ್ಕಾರ ಮಂಡಿಸಿದ ಚುನಾವಣಾ ಪೂರ್ವ ಮಧ್ಯಂತರ ಆಯವ್ಯ ಸಂಪೂರ್ಣ ಹುಸಿಗೊಳಿಸಿದೆ. ಕೇಂದ್ರ ಸರ್ಕಾರ ಕನಿಷ್ಠ ಪಕ್ಷ ಜೀವನಾವಶ್ಯಕ ವಸ್ತುಗಳ ಬೆಲೆಗಳ ನಿಯಂತ್ರಣಕ್ಕಾದರೂ ಅಗತ್ಯ ಕ್ರಮ ಕೈಗೊಳ್ಳಬೇಕಿತ್ತು. ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕಿತ್ತು ಎಂಬ ಮಾತುಗಳು ಕೇಳಿಬಂದಿವೆ. 

ದೇವನಹಳ್ಳಿ: ಕೇಂದ್ರ ಹಣಕಾಸು ಸಚಿವ ಪಿಯೂಷ್‌ ಗೋಯಲ್‌ ಶುಕ್ರವಾರ ಮಂಡಿಸಿರುವ ಬಜೆಟ್‌ನಲ್ಲಿ ದೇವನಹಳ್ಳಿಗೆ ರೈಲು ಸಂಪರ್ಕ ಮತ್ತು ರೈತರ ಸಾಲ ಮನ್ನಾ ಮಾಡಬಹುದೆಂಬ ಜನರ ನಿರೀಕ್ಷೆ ಹುಸಿಯಾಗಿದ್ದು, ರೈತರು ಹಾಗೂ ಜನಸಾಮಾನ್ಯರು ತೀವ್ರ ನಿರಾಸೆಗೆ ಒಳಗಾಗಿದ್ದಾರೆ. 

ರೈತರ ಸಾಲ ಮನ್ನಾ, ಸ್ವಾಮಿನಾಥನ್‌ ವರದಿ ಜಾರಿ, ಬೆಳೆಗಳಿಗೆ ಬೆಂಬಲ ಬೆಲೆ, ಪೆಟ್ರೋಲ್‌, ಡೀಸೆಲ್‌ ದರಗಳ ನಿಯಂತ್ರಣ ಹಾಗೂ ದಿನನಿತ್ಯ ಬಳಸುವ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ನಿಯಂತ್ರಣದ ಬಗ್ಗೆ ಕ್ರಮ ಕೈಗೊಳ್ಳಬಹುದೆಂಬ ನಿರೀಕ್ಷೆಯಲ್ಲಿದ್ದ ಸಾರ್ವಜನಿಕರಿಗೆ ನಿರಾಸೆಯೇ ಕೊಡುಗೆಯಾಗಿದೆ. 

ರೈಲು ಸಂಪರ್ಕದ ಪ್ರಸ್ತಾಪವೇಯಿಲ್ಲ: ಚಿಕ್ಕಬಳ್ಳಾಪುರ, ಬೆಂಗಳೂರು ಮಾರ್ಗಕ್ಕೆ ರೈಲು ಸಂಪರ್ಕ ಹೆಚ್ಚಾಗುತ್ತದೆ ಎಂಬ ಭಾವನೆಯಲ್ಲಿದ್ದ ಜನರಿಗೆ ಬಜೆಟ್‌ನಲ್ಲಿ ಯಾವುದೇ ಆಶಾದಾಯಕ ಅಂಶಗಳನ್ನು ಪ್ರಸ್ತಾಪಿಸಿಲ್ಲ. ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಸದ್ಯಕ್ಕೆ ಎರಡು ರೈಲುಗಳು ಮಾತ್ರ ಸಂಚರಿಸುತ್ತಿದ್ದು, ಯಂಶವಂತಪುರದಿಂದ ದೇವನಹಳ್ಳಿ ಬೆಳಗ್ಗೆ 11 ಗಂಟೆಗೆ ಬಂದು ಪುನಃ ಬೆಂಗಳೂರಿಗೆ ವಾಪಾಸ್‌ ಹೋಗುತ್ತದೆ. ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಹೆಚ್ಚು ರೈಲುಗಳು ಬರುವ ನಿರೀಕ್ಷೆಯಲ್ಲಿದ್ದ ಜನರಿಗೆ ನಿರಾಸೆ ಮೂಡಿಸಿದೆ.

Advertisement

ಸಾಲ ಮನ್ನಾ ಮಾಡಲಿಲ್ಲ: ಬರಗಾಲದಿಂದ ತತ್ತರಿಸಿ ಹೋಗಿದ್ದ ರೈತರಿಗೆ ಕೇಂದ್ರ ಸರ್ಕಾರ ಸಾಲ ಮನ್ನಾ ಮಾಡುತ್ತದೆ ಎಂಬ ಭಾವನೆಯಲ್ಲಿದ್ದ ರೈತರಿಗೆ ಅದು ಸಹ ಹುಸಿಯಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದರಿಂದ ತಾಲೂಕಿಗೆ ಕೇಂದ್ರದಿಂದ ಯಾವುದಾದರೂ ಯೋಜನೆ ಬರುತ್ತದೆ ಎಂಬ ಆಶಾಭಾವನೆ ಇತ್ತು. ಅದು ಸಹ ಕೈಗೂಡಿಲ್ಲ. 

ನಾಗರಿಕರ ಪ್ರತಿಕ್ರಿಯೆ: ಕೇಂದ್ರ ಸರ್ಕಾರ ಕಾರ್ಮಿಕರಿಗೆ ಯೋಜನೆ ರೂಪಿಸಿದೆ. ಆದರೆ, ಅದು ಈಡೇರಿದರೆ ಮಾತ್ರ ಕಾರ್ಮಿಕರಿಗೆ ಉಪಯೋಗವಾಗುತ್ತದೆ. ಅವರು ಕಾರ್ಮಿಕರಿಗೆ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಯೋಜನೆ ರೂಪಿಸಿರುವುದು ಸರಿಯಷ್ಟೇ. ಅದು ಜನಸಾಮಾನ್ಯರಿಗೆ ತಲುಪಬೇಕು ಎಂದು ನಾಗರಿಕ ನಂಜುಂಡಿ ಹೇಳಿದರು. ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಉತ್ತಮ ಬಜೆಟ್‌ ಮಂಡಿಸಿದೆ.

ಪ್ರತಿ ಜನರಿಗೆ ಅನುಕೂಲವಾಗುವ ಬಜೆಟ್‌ ಆಗಿದೆ. ಸಣ್ಣ ಉದ್ಯಮಿಗಳಿಗೆ ಹಣಕಾಸು ನೆರವು, ಬ್ಯಾಂಕಿಂಗ್‌ ಕ್ಷೇತ್ರದ ತ್ವರಿತ ಬದಲಾವಣೆ, ಎಲ್ಲಾ ಸಮಾಜದವರಿಗೆ ಸಾಮಾಜಿಕ ನ್ಯಾಯವನ್ನು ನೀಡಿದೆ ಎಂದು ಮತ್ತೂಬ್ಬ ನಾಗರಿಕ ಮಧು ಅಭಿಪ್ರಾಯ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್‌: ಮುಖಂಡರ ಪ್ರತಿಕ್ರಿಯೆ
ಸಂಸದರ ಹೇಳಿಕೆ:
2014 ರಲ್ಲಿ ಘೋಷಣೆ ಮಾಡಿದ್ದ ಯಾವುದೇ ಭರವಸೆಗಳು ಈಡೇರಲಿಲ್ಲ ಈ ಬಜೆಟ್‌ ಇದೊಂದು ಕಾಗದ ಮೇಲಿನ ಬಜೆಟ್‌ ಆಗಿದೆ. ಚುನಾವಣಾ ತಂತ್ರವಿಲ್ಲ ಅತಂತ್ರ ಬಜೆಟ್‌ ಮಾಡಿದ್ದಾರೆ. ದೇಶದಲ್ಲಿ ಯುವಕರಿಗೆ ಉದ್ಯೋಗ ಸೃಷ್ಠಿಸುವಲ್ಲಿ ವಿಫ‌ಲರಾಗಿದ್ದಾರೆ. ಇನ್ನೂ ಚುನಾವಣೆ ಘೋಷಣೆಗೆ 20 ದಿನಗಳು ಇರುವಾಗಲೇ ಪೂರ್ಣ ಪ್ರಮಾಣದ ಬಜೆಟ್‌ ಮಾಡುವ ಅವಶ್ಯ ವಿರಲಿಲ್ಲ ಸಂಸದರ ಆದರ್ಶ ಗ್ರಾಮಾಭಿವೃದ್ಧಿಗೆ ನಯಾಪೈಸೆ ಅನುದಾನ ನೀಡಿಲ್ಲ. ದೇಶದ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿದೆ ಎಂದು ಸಂಸದ ವೀರಪ್ಪ ಮೊಯ್ಲಿ ತಿಳಿಸಿದರು. 

ಮಾಜಿ ಸಂಸದರ ಹೇಳಿಕೆ: ಚುನಾವಣೆಗೆ ಉಪಯೋಗವಾಗುವಂತಹ ಕಾರ್ಯಕ್ರಮ ಗಳನ್ನು ರೂಪಿಸಿ ಜನರನ್ನು ಓಲೈಸಲು ಹೊರಟಿದ್ದಾರೆ. ರೈತರಿಗೆ 6 ಸಾವಿರ ರೂ ವಾರ್ಷಿಕವಾಗಿ ನೀಡುತ್ತಿದ್ದಾರೆ. ಅದು 5 ಎಕರೆ ಪ್ರದೇಶ ಹೊಂದಿದವರಿಗೆ ಮಾತ್ರ ಅನ್ವಯವಾಗುತ್ತದೆ. ರೈತರ ಸಾಲ ಮನ್ನಾ,  ಸ್ವಾಮಿನಾಥನ್‌ ವರದಿ ಸಂಬಂಧಿಸಿದಂತೆ ವಿಷಯವೇ ಪ್ರಸ್ತಾಪವಾಗಿಲ್ಲ ರೈತರ ಆತ್ಮಹತ್ಯೆ ತಡೆಯುವಲ್ಲಿ ಯಾವುದೇ ಪ್ರಯತ್ನ ಮಾಡಿಲ್ಲ.

ಕೃಷಿಗೆ ಶಾಶ್ವತವಾಗಿ ಅನುಕೂಲವಾಗುವ ಕಾರ್ಯಕ್ರಮಗಳನ್ನು ಮಾಡುವಲ್ಲಿ ವಿಫ‌ಲರಾಗಿದ್ದಾರೆ. ಸರ್ಕಾರದ ಹಣದಲ್ಲಿ ಜನರಿಗೆ ಆಮೀಷಗಳನ್ನು ಬಜೆಟ್‌ ಮೂಲಕ ಮಾಡಲು ಹೊರಟಿದ್ದಾರೆ. 4.5 ವರ್ಷದಲ್ಲಿ ಮಂಡಿಸಿದ ಬಜೆಟ್‌ ನಲ್ಲಿ ಕಾರ್ಯಗತ ಮಾಡುವಲ್ಲಿ ವಿಫ‌ಲರಾಗಿದ್ದಾರೆ. ಚುನಾವಣೆ ಸಮೀಪಿಸುತ್ತಿರುವುದರಿಂದ ಮಧ್ಯಾಂತರ ಬಜೆಟ್‌ ಮಂಡಿಸಬೇಕಾಗುತ್ತದೆ. ಪೂಣ್‌ ಪ್ರಮಾಣದ ಬಜೆಟ್‌ ಮಂಡಿಸಲು ಬರುವುದಿಲ್ಲ ಎಂದು  ಮಾಜಿ ಸಂಸದ ಸಿ ನಾರಾಯಣಸ್ವಾಮಿ  ತಿಳಿಸಿದರು.

ಜಿಪಂ ಸದಸ್ಯರ ಹೇಳಿಕೆ: ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್‌ ಚುನಾವಣಾ ಬಜೆಟ್‌ ಆಗಿದೆ. ರೈತರ, ಬಡ ವರ್ಗದ ಜನರಿಗೆ ಈ ಬಜೆಟ್‌ ನಿಂದ ಯಾವುದೇ ಉಪಯೋಗವಿಲ್ಲ. ಇದು ತೃಪ್ತಿ ದಾಯಕ ಬಜೆಟ್‌ ಅಲ್ಲ. ನೀಡಿರುವ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫ‌ಲರಾಗಿದ್ದಾರೆ. ಕೇವಲ ಪತ್ರಕ್ಕೆ ಸೀಮಿತವಾಗಿದೆ. ಈ ಮುಂಗಡ ಪತ್ರ ಉಳ್ಳವರಿಗೆ ಕೈಗಾರಿಕೋದ್ಯಮಿಗಳಿಗೆ ಪರ ಬಜೆಟ್‌ ಆಗಿದೆ. ರೈತರಿಗೆ ಸಾಮಾನ್ಯ ಜನರಿಗೆ ಅನುಕೂಲವಾಗದ ನಿರಾಶದಾಯಕ ಬಜೆಟ್‌ ಆಗಿದೆ ಎಂದು ಜಿಪಂ ಸದಸ್ಯ ಕೆಸಿ ಮಂಜುನಾಥ್‌ ಹೇಳಿದರು. 

ಶಾಸಕರ ಹೇಳಿಕೆ: ರೈತರ ಸಾಲ ಮನ್ನಾ ಮತ್ತು ನದಿ ಜೋಡಣೆ ಮಾಡುತ್ತಾರೆ ಎಂಬುವ ನಿರೀಕ್ಷೆಗಳು ಇದ್ದವು ಆದರೆ ಆ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟಿಕೊಂಡು ಬಜೆಟ್‌ ಮಂಡಿಸಿದ್ದಾರೆ. ರಾಷಿಕೃತ ಬ್ಯಾಂಕ್‌ ಗಳಲ್ಲಿ ರೈತರ ಸಾಲ ಮನ್ನಾ ಮಾಡಿದ್ದರೆ ರೈತರು ಒಂದಿಷ್ಟು ಉಸಿರಾಡಲು ಅನುಕೂಲವಾಗುತ್ತಿತ್ತು ಕೇವಲ ಭರವಸೆ ಬಜೆಟ್‌ ಆಗಿದೆ ಎಂದುಶಾಸಕ ನಿಸರ್ಗ ಎಲ್‌ ಎನ್‌ ನಾರಾಯಣಸ್ವಾಮಿ ತಿಳಿಸಿದರು.

ಜಿಲ್ಲಾ ಜೆಡಿಎಸ್‌ ಅಧ್ಯಕ್ಷರ ಹೇಳಿಕೆ: ಚುನಾವಣಾ ಪೂರ್ವದಲ್ಲಿ ಪ್ರತಿ ಜನರ ಖಾತೆಗೆ 15 ಲಕ್ಷ ರೂ ಹಾಗೂ ಕಪ್ಪು ಹಣ ತರುತ್ತೇವೆ ಎಂದು ಬಂದವರು ಒಂದೇ ಒಂದು ಪ್ರಣಾಳಿಕೆಯಲ್ಲಿರುವ ಯಾವುದೇ ಕಾರ್ಯಕ್ರಮಗಳನ್ನು ಜಾರಿಗೊಳಿಸದೇ ಇರುವವರು ಈಗ ಮಂಡಿಸಿರುವ ಬಜೆಟ್‌ ನ ಎಲ್ಲಾ ಕಾರ್ಯಕ್ರಮಗಳನ್ನು ಹೇಗೆ ಈಡೇರಿಸುತ್ತಾರೆ ಎಂಬುದು ಪ್ರಶ್ನೆಯಾಗಿದೆ ಎಂದು  ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಬಿ ಮುನೇಗೌಡ ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷರ ಹೇಳಿಕೆ: ಶ್ರೀ ಸಾಮಾನ್ಯರ ಮತ್ತು ರೈತರ ಪರ ಬಜೆಟ್‌ ಆಗಿದೆ. ಗೋರಕ್ಷಣೆಗೆ 750 ಕೋಟಿ ಮೀಸಲು ಅಂಗನವಾಡಿ, ಆಶಾ ಕಾರ್ಯ ಕರ್ತರಿಗೆ ಗೌರವ ಧನ ಹೆಚ್ಚಳ, ಬೀದಿ ಬದಿ ವ್ಯಾಪಾರಿಗಳು, ಅಸಂಘಟಿತ ಕಾರ್ಮಿಕರಿಗೆ ಆರೋಗ್ಯ ನೆರವು, ಪಿಂಚಣಿ ಯೋಜನೆ ಸೇರಿದಂತೆ ಉತ್ತಮ ಜನಪರ ಬಜೆಟ್‌ ಅನ್ನು ಹಣಕಾಸು ಸಚಿವ ಪಿಯೂಷ್‌ ಗೋಯಲ್‌ ಮುಂಗಡ ಪತ್ರದಲ್ಲಿ ಮಂಡಿಸಿದ್ದಾರೆ. ಕಾರ್ಮಿಕರಿಗೆ 15 ಸಾವಿರಕ್ಕಿಂತಲೂ ಹೆಚ್ಚು ವೇತನವನ್ನು ಜಾರಿಗೊಳಿಸಿದ್ದಾರೆ. ರೈತರಿಗೆ ವಾ‌ರ್ಷಿಕವಾಗಿ  6 ಸಾವಿರ ಗಳನ್ನು ನೇರವಾಗಿ ರೈತರ ಖಾತೆಗೆ ಹಾಕುವಂತೆ ಮಾಡಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ  ಬಿ ರಾಜಣ್ಣ ತಿಳಿಸಿದರು.

ತಾಲೂಕು ಕೃಷಿಕ ಸಮಾಜದ ನಿರ್ದೇಶಕ ರ ಹೇಳಿಕೆ: ದೀನದಲಿತರ, ಬಡವರ ಪರ, ರೈತಪರ ಉತ್ತಮ ಬಜೆಟ್ಟನ್ನು ಮಂಡಿಸಿ ಜನರ ಆಶೋತ್ತರಗಳನ್ನು ಈಡೇರಿಸಿದ ಉತ್ತಮ ಬಜೆಟ್‌ ಇದಾಗಿದೆ. ಗ್ರಾಮೀಣ ಪ್ರದೇಶದಲ್ಲಿ ರಾಷಿಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ 60 ಸಾವಿರ ಕೋಟಿ ಅನುದಾನ ನಿಗದಿ ಪಡಿಸಿ ದುಡಿಯುವ ಕೈಗಳಿಗೆ ಕೆಲಸ ನೀಡಬೇಕೆಂಬ ಗುರಿಯಾಗಿದೆ. ಇಎಸ್‌ಐ ಮಿತಿ 15 ರಿಂದ 21 ಸಾವಿರಕ್ಕೆ ಏರಿಕೆ ಆಗಿರುವುದರಿಂದ ಕಾರ್ಮಿಕರಿಗೆ ಅನುಕೂಲವಾಗಿದೆ.  ರೈತರ 22 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಿದೆ ಹಾಗೂ ಸರ್ಕಾರ ರೈತರ ಪರ ಬಜೆಟ್‌ ಆಗಿದೆ ಎಂದು ತಾಲೂಕು ಕೃಷಿಕ ಸಮಾಜದ ನಿರ್ದೇಶಕ ಎಚ್‌.ಎಂ.ರವಿಕುಮಾರ್‌ ಹೇಳಿದರು.

ರೈತರ ಹೇಳಿಕೆ: ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್‌ ರೈತರಿಗೆ ಉಪಯೋಗವಿಲ್ಲದ ಬಜೆಟ್‌ ಆಗಿದೆ. ರೈತರ ಆಶೋತ್ತರಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫ‌ಲವಗಿದೆ. ಸ್ವಾಮಿನಾಥನ್‌ ವರದಿ ಮತ್ತು ರೈತರ ಸಾಲಮನ್ನಾ ಮಾಡುವುದಲ್ಲಿ ಸರ್ಕಾರ ಎಡವಿದೆ. ವಾರ್ಷಿಕವಾಗಿ 6 ಸಾವಿರ ರೈತರಿಗೆ ನೀಡಿದರೆ ಸಂಕಷ್ಟ ಪರಿಹಾರ ವಾಗುವುದಿಲ್ಲ. ಪ್ರತಿ ತಿಂಗಳಿಗೆ ಪಿಂಚಣಿಯನ್ನು 10 ರಿಂದ 12 ಸಾವಿರ ನೀಡುತ್ತಾರೆ. ರೈತರ ಬಗ್ಗೆ ಯಾಕೆ ನಿರ್ಲಕ್ಷ್ಯ ದೋರಣೆ ಮಾಡುತ್ತಾರೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ವೆಂಕಟನಾರಾಯಣಪ್ಪ ಹೇಳಿದರು. 

ರೈತ‌ ಮುಖಂಡರ ಹೇಳಿಕೆ: ಸರ್ಕಾರ ರೈತರಿಗೆ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ವಿಫ‌ಲವಾಗಿದೆ. ವಾರ್ಷಿಕವಾಗಿ 6 ಸಾವಿರ ರೂ ರೈತರ ಖಾತೆ ಗೆ ನೀಡಿದರೆ ಯಾವುದೇ ಪ್ರಯೋಜನವಿಲ್ಲ. ಮಳೆ ಇಲ್ಲದೆ ಬರಗಾಲದ ಪರಿಸ್ಥಿತಿಗೆ ರೈತರು ತತ್ತರಿಸಿ ಹೋಗಿದ್ದಾರೆ.  ರೈತರಿಗೆ ಮುಂದೊರೆಯಲು ಕಾರ್ಯಕ್ರಮಗಳನ್ನು ರೂಪಿಸಿದ್ದರೆ ಅನುಕೂಲವಾಗುತ್ತಿತ್ತು ಎಂದು ರೈತ ಚಿಕ್ಕೇಗೌಡ ಹೇಳಿದರು.

ಮಾಜಿ ಪುರಸಭಾ ಸದಸ್ಯರ ಹೇಳಿಕೆ: ಚುನಾವಣೆಯಿಂದ ಉತ್ತಮ ಬಜೆಟ್‌ ಮಂಡಿಸಿದರೆ ಸಾಲದು ಮುಂದೆ ಬರುವ ಸರ್ಕಾರ ಅಂಗೀಕರಿಸುವುದಿಲ್ಲ. ಇವರ ಸರ್ಕಾರ ಬಂದರೆ ಮಂಡಿಸಿರುವ ಬಜೆಟ್‌ ನಲ್ಲಿ  ಅಂಗೀಕಾರ ವಾಗುತ್ತದೆ. ಜನಸಾಮಾನ್ಯರಿಗೆ ಉಪಯೋಗವಿಲ್ಲದ ಬಜೆಟ್‌ ಆಗಿದೆ ಎಂದು  ಮಾಜಿ ಪುರಸಭಾ ಸದಸ್ಯ ಜಿ.ಮಾರಪ್ಪ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next