ಮುಳಬಾಗಿಲು : ಸಿದ್ಧರಾಮಯ್ಯನವರು ಚುನಾವಣೆ ಸಮಾವೇಶದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಸ್ತ್ರೀಶಕ್ತಿ ಸಂಘದ ಸಾಲ ಮನ್ನಾ ಮಾಡುವುದಾಗಿ ಹೇಳಿ ಮಾತು ತಪ್ಪಿದ್ದಾರೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಬೈರಕೂರು ಹೋಬಳಿ ಹಿರಣ್ಯಗೌಡನಹಳ್ಳಿಯಲ್ಲಿ ಶುಕ್ರವಾರ ಸಾಲ ವಸೂಲಿಗೆ ಹೋದ ಸಿಬ್ಬಂದಿಯನ್ನು ಹಗ್ಗದಿಂದ ಕಟ್ಟಿಹಾಕಲು ಮುಂದಾಗಿದ್ದು, ಸಾಲ ವಸೂಲಿಗೆ ಬಂದರೆ ಹುಷಾರ್, ಸಾಲ ಮನ್ನಾ ಮಾಡುತ್ತೇವೆಂದು ಮೋಸ ಮಾಡಿದ ಸಿಎಂ ಬಳಿ ಸಾಲ ವಸೂಲಿ ಮಾಡಿಕೊಳ್ಳಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ತಾಲೂಕಿನ ಬೈರಕೂರು ವಿಎಸ್‌ಎಸ್‌ಎನ್‌ನಿಂದ 2021ರ ಸೆಪ್ಟಂಬರ್‌ರಲ್ಲಿ ಹಿರಣ್ಯಗೌಡನಹಳ್ಳಿ ಗ್ರಾಮದ ಎಂಟು ಸಂಘಗಳಿಗೆ ತಲಾ 5 ಲಕ್ಷ ರೂ. ಗಳಂತೆ 40 ಲಕ್ಷ ರೂ.ಬಡ್ಡಿ ರಹಿತ ಸಾಲ ನೀಡಲಾಗಿದೆ. ಅದರಂತೆ ಸಾಲ ಪಡೆದ ಮಹಿಳೆಯರೂ ಸಹ ಪ್ರತಿ ತಿಂಗಳೂ ಸಾಲದ ಹಣ ಪಾವತಿ ಮಾಡುತ್ತಿದ್ದರು. ಆದರೆ, ಸಿದ್ದರಾಮಯ್ಯನವರು ಚುನಾವಣೆ ಸಮಯದಲ್ಲಿ ಸಾಲ ಮನ್ನಾ ಮಾಡುತ್ತೇನೆಂದು ಹೇಳಿಕೆ ಕೊಟ್ಟಿದ್ದಾರೆಂದು ಮಹಿಳೆಯರು ಸಾಲ ಮರು ಪಾವತಿ ಮಾಡುವುದನ್ನು ಕೈ ಬಿಟ್ಟಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯನವರನ್ನು ಕೇಳಿ ಎಂದ ಸ್ತ್ರೀಯರು : ಶುಕ್ರವಾರ ಸಾಲ ವಸೂಲಿಗೆ ಕಾರ್ಯದರ್ಶಿ ನಾಗರಾಜ್ ಹಿರಣ್ಯಗೌಡನಹಳ್ಳಿಗೆ ತೆರಳಿ ಮಹಿಳೆಯರಿಗೆ ಸಾಲ ಕಟ್ಟುವಂತೆ ಕೇಳಿಕೊಂಡಿದ್ದಾರೆ. ಅದಕ್ಕೆ ಸಂಘದ ಸದಸ್ಯರು ಸಿದ್ದರಾಮಯ್ಯನವರು ಸಾಲ ಮನ್ನಾ ಮಾಡುತ್ತಾರೆ ಅವರಿಂದ ಸಾಲ ವಸೂಲಿ ಮಾಡಿಕೊಳ್ಳಿ ಎಂದು ಎಚ್ಚರಿಕೆ ನೀಡಿದ್ದಾರೆ. ಆದರೆ ಕಾರ್ಯದರ್ಶಿ ಸಾಲ ವಸೂಲಿ ಮಾಡಿಕೊಂಡೇ ಹೋಗುತ್ತೇನೆಂದು ಪಟ್ಟು ಹಿಡಿದ್ದರಿಂದ ಕುಪಿತಗೊಂಡ ಮಹಿಳೆಯರು ವಸೂಲಾತಿಯ ದಾಖಲಾತಿ ಹರಿದು ಹಾಕಿ ನಾಗರಾಜ್ ವಿರುದ್ಧ ಕೂಗಾಡಿ, ಅವರನ್ನು ಎಳೆದಾಡಿದರಲ್ಲದೇ ಹಗ್ಗದಿಂದ ಕಟ್ಟಿ ಹಾಕಲು ಯತ್ನಿಸಿದ್ದಾರೆ. ಅಷ್ಟಕ್ಕೂ ಸುಮ್ಮನಾಗದೇ ಸಿಬ್ಬಂದಿಯನ್ನು ಗ್ರಾಮದಿಂದ ವಾಪಸ್ ಕಳುಹಿಸುವವರೆಗೂ ಬಿಟ್ಟಿಲ್ಲ .
ಈ ಬೈರಕೂರು ವಿಎಸ್‌ಎಸ್‌ಎನ್ ನಿಂದ 2019ರ ಸೆಪ್ಟಂಬರ್ 17 ರಂದು ಕೋಣಂಗುಂಟೆ ಗ್ರಾಮದಲ್ಲಿರುವ ಕೆಲವು ಸ್ತ್ರೀಶಕ್ತಿ ಸಂಘಗಳಿಗೂ ಸಾಲ ನೀಡಿದ್ದು, ಅವರೂ ಸಹ ಚುನಾವಣೆಯ ನಂತರ ಪಡೆದ ಸಾಲ ಮರು ಪಾವತಿ ಮಾಡುತ್ತಿಲ್ಲ. ನಾಗನಹಳ್ಳಿ ಗ್ರಾಮದಲ್ಲಿಯೂ ಬೈರಕೂರು ವಿಎಸ್ ಎಸ್‌ಎನ್ ನಿಂದ ವಿವಿಧ ಸಂಘಗಳಿಗೆ ಬಡ್ಡಿ ರಹಿತ ಸಾಲ ನೀಡಿದಲಾಗಿದೆ.
ಒಟ್ಟಾರೆ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಸಾಲ ಮನ್ನಾ ಘೋಷಣೆಯ ನಂತರ ಯಾವುದೇ ಸಂಘದವರು ಸಾಲ ಕಟ್ಟಲು ಮುಂದಾಗುತ್ತಿಲ್ಲ. ಇದರಿಂದ ಸಹಕಾರ ಬ್ಯಾಂಕ್‌ಗಳಿಗೆ ಸುಮಾರು 50-60 ಲಕ್ಷ ರೂ. ಬಾಕಿ ಹಣ ಬರಬೇಕಾಗಿದೆ ಎಂದು ತಿಳಿದು ಬಂದಿದೆ.