Advertisement

ಸಾಲಮನ್ನಾ ಹೊರೆ, ಈ ಬಾರಿ ಮೋಡ ಬಿತ್ತನೆಗೆ ಕೊಕ್‌

06:00 AM Aug 31, 2018 | Team Udayavani |

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆ ಕೊರತೆಯಿಂದ ಬರ ಆವರಿಸಿದ್ದರೂ ಮೋಡ ಬಿತ್ತನೆ ಮಾಡಲು ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಮಳೆ ಕಡಿಮೆಯಾಗಿರುವ ಪ್ರದೇಶದಲ್ಲಿ ಮೋಡ ಬಿತ್ತನೆಗೆ ಮುಂದಾಗಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಪ್ರಯತ್ನಕ್ಕೆ ಹಣಕಾಸು ಇಲಾಖೆ ತಡೆಯೊಡ್ಡಿದೆ.

Advertisement

ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳು ಅತಿವೃಷ್ಠಿಗೆ ಒಳಗಾಗಿವೆ. ಆದರೆ, ಭಾರತೀಯ ಹವಾಮಾನ ಇಲಾಖೆ ಪ್ರಕಾರ ಉತ್ತರ ಕರ್ನಾಟಕ ಹಾಗೂ ಬಯಲು ಸೀಮೆಯ ಕೆಲವು ಜಿಲ್ಲೆಗಳಲ್ಲಿ ಶೇ. 22 ರಿಂದ 30, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಪ್ರಕಾರ ಶೇ. 60ರಷ್ಟು ಮಳೆ ಕೊರತೆಯಿದ್ದು, ಮೋಡಬಿತ್ತನೆಗೆ ಪ್ರಸ್ತಾವನೆ ಸಿದ್ಧಪಡಿಸಲಾಗಿತ್ತು. ಆದರೆ, ಸುಮಾರು 40 ಸಾವಿರ ಕೋಟಿ ರೂ.ರೈತರ ಸಾಲಮನ್ನಾ ಹಿನ್ನೆಲೆಯಲ್ಲಿ ಅದಕ್ಕೆ ಹಣ ಹೊಂದಿಸಬೇಕಾಗಿದೆ. ಹೀಗಾಗಿ, ಮೋಡ ಬಿತ್ತನೆಗೆ ಹಣಕಾಸು ಒದಗಿಸಲು ಕಷ್ಟವಾಗುತ್ತದೆ ಎಂದು ಹಣಕಾಸು ಇಲಾಖೆ ತಿಳಿಸಿದೆ ಎನ್ನಲಾಗಿದೆ.

ಕಳೆದ ವರ್ಷ ಜೂನ್‌ನಲ್ಲಿಯೇ ಮೋಡ ಬಿತ್ತನೆಗೆ ಯೋಜನೆ ಸಿದ್ಧಪಡಿಸಿ, ಆಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗಳಲ್ಲಿ 35 ಕೋಟಿ ರೂ.ವೆಚ್ಚದಲ್ಲಿ 72 ದಿನಗಳ ಕಾಲ ಮೋಡ ಬಿತ್ತನೆ ಮಾಡಲಾಗಿತ್ತು.  ಕರಾವಳಿಯ ಜಿಲ್ಲೆಗಳು ಹಾಗೂ ಚಾಮರಾಜನಗರ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಜಿಲ್ಲೆಗಳಲ್ಲಿಯೂ ಮೋಡ ಬಿತ್ತನೆ ಮಾಡಲಾಗಿತ್ತು. 

ಶೇ.29.7ರಷ್ಟು ಮಳೆಯ ಪ್ರಮಾಣ ಹೆಚ್ಚಾಗಿತ್ತು ಎಂದು ತಜ್ಞರು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಪ್ರತಿ ವರ್ಷ ಮೋಡ ಬಿತ್ತನೆ ಮಾಡುವಂತೆ ಆಗಿನ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಎಚ್‌.ಕೆ. ಪಾಟೀಲ್‌ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಆದರೆ, ಈ ವರ್ಷ ಮೋಡಬಿತ್ತನೆ ಪ್ರಸ್ತಾಪ ಕೈ ಬಿಡಲಾಗಿದೆ.

ಕಳೆದ ವರ್ಷದ ಯಶಸ್ಸಿನ ಲೆಕ್ಕಾಚಾರದಲ್ಲಿ ಈ ವರ್ಷವೂ ಅಷ್ಟೇ ಬಜೆಟ್‌ನಲ್ಲಿ ಮೋಡ ಬಿತ್ತನೆ ಕೈಗೊಳ್ಳಲು ಆರ್‌ಡಿಪಿಆರ್‌ ಇಲಾಖೆ ವ್ಯಾಪ್ತಿಯಲ್ಲಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಯೋಜನೆ ರೂಪಿಸಿತ್ತು. ಈಗಾಗಲೇ ಮುಂಗಾರು ಅವಧಿ ಮುಗಿಯುತ್ತಾ ಬರುತ್ತಿದೆ. ಮೋಡ ಬಿತ್ತನೆಗೆ ಟೆಂಡರ್‌ ಕರೆಯಲು ಕನಿಷ್ಠ ಒಂದೂವರೆ ತಿಂಗಳು ಕಾಲಾವಕಾಶ ಬೇಕು. ಟೆಂಡರ್‌ ಪ್ರಕ್ರಿಯೆ ಮುಕ್ತಾಯದ ನಂತರ ಕೇಂದ್ರ ಸರ್ಕಾರದ ಏಳೆಂಟು ಇಲಾಖೆಗಳಿಂದ ಒಪ್ಪಿಗೆ ಪಡೆದು, ವಿದೇಶಗಳಿಂದ ತಜ್ಞರನ್ನು ಕರೆಸಬೇಕು. ಈ ಎಲ್ಲ ಪ್ರಕ್ರಿಯೆಗೆ ಕನಿಷ್ಠ ಮೂರು ತಿಂಗಳು ಬೇಕಾಗುತ್ತದೆ. ಅಷ್ಟರಲ್ಲಿ ಮುಂಗಾರು ಅವಧಿ ಮುಕ್ತಾಯವಾಗುವುದರಿಂದ ಮೋಡ ಬಿತ್ತನೆ ಮಾಡಿದರೂ ವಿಫ‌ಲವಾಗುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಸರ್ಕಾರ ಈ ವರ್ಷ ಮೋಡ ಬಿತ್ತನೆ ಕೈ ಬಿಟ್ಟಿದೆ.

Advertisement

ಈ ವರ್ಷ ಮೋಡ ಬಿತ್ತನೆಗೆ ಯೋಜನೆ ರೂಪಿಸಿದ್ದೆವು. ಸರ್ಕಾರದಿಂದ ಅನುಮತಿ ದೊರೆಯಲಿಲ್ಲ. ಈಗ ಮಳೆ ಚೆನ್ನಾಗಿ ಆಗಿರುವುದರಿಂದ ಈ ವರ್ಷ ಮೋಡ ಬಿತ್ತನೆ ಕೈ ಬಿಡಲಾಗಿದೆ. ಮುಂದಿನ ವರ್ಷದ ಮೋಡ ಬಿತ್ತನೆಗೆ ಈಗಲೇ ಯೋಜನೆ ರೂಪಿಸುತ್ತಿದ್ದೇವೆ.
– ಪ್ರಕಾಶ್‌, ಮುಖ್ಯ ಎಂಜಿನೀಯರ್‌, ಗ್ರಾಮೀಣ ಕುಡಿಯುವ ನೀರು ಸಬರಾಜು ಇಲಾಖೆ.

ಕಳೆದ ಬಾರಿ ಮೋಡ ಬಿತ್ತನೆಯ ಪ್ರಯೋಗ ಯಶಸ್ವಿಯಾಗಿದೆ. ಮೋಡ ಬಿತ್ತನೆ ತಂತ್ರಜ್ಞಾನಕ್ಕೆ ಜಯ ಸಿಕ್ಕಿದೆ. ಅಗತ್ಯ ಇದ್ದಾಗ ಮೋಡ ಬಿತ್ತನೆ ಮಾಡದೆ ಹೋದರೆ ಅದು ರೈತರಿಗೆ ಮಾಡುವ ಅನ್ಯಾಯ. ಜವಾಬ್ದಾರಿ ಇರುವವರು ಎಲ್ಲಿ ಅಗತ್ಯವಿದೆ ಅಲ್ಲಿ ಯೋಜನೆ ಜಾರಿಗೊಳಿಸಬೇಕು.
– ಎಚ್‌.ಕೆ. ಪಾಟೀಲ್‌, ಮಾಜಿ ಸಚಿವ

ಈ ವರ್ಷ ಹೊಸ ಸರ್ಕಾರ ಬಂದಿದೆ. ಆರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದ ಮೋಡ ಬಿತ್ತನೆ ಬಗ್ಗೆ ಆಲೋಚನೆ ಮಾಡಲಿಲ್ಲ. ಮೋಡ ಬಿತ್ತನೆಗೆ ಕನಿಷ್ಠ ಮೂರು ತಿಂಗಳು ಸಮಯ ಬೇಕಾಗುತ್ತದೆ. ಈಗಾಗಲೇ ಮಳೆಗಾಲ ಮುಗಿಯುತ್ತ ಬಂದಿರುವುದರಿಂದ ಈ ವರ್ಷ ಮೋಡ ಬಿತ್ತನೆ ಮಾಡುತ್ತಿಲ್ಲ. ಮುಂದಿನ ವರ್ಷ ಮೋಡ ಬಿತ್ತನೆಗೆ ಈಗಿನಿಂದಲೇ ಪ್ರಯತ್ನ ಆರಂಭಿಸುತ್ತೇವೆ.
– ಕೃಷ್ಣ ಬೈರೇಗೌಡ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಸಚಿವ

 – ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next