ಬೆಂಗಳೂರು: ನಗರದಲ್ಲಿ ವಾಯು ಮಾಲಿನ್ಯ ಹಾಗೂ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವ ನಿರ್ಮಾಣ ಮತ್ತು ಕಟ್ಟಡ ತ್ಯಾಜ್ಯ (ಸಿ ಆ್ಯಂಡ್ ಡಿ- ಡೆಬ್ರಿಸ್)ಕ್ಕೆ ಮುಕ್ತಿ ನೀಡಲು ಬಿಬಿಎಂಪಿ ಮುಂದಾಗಿದೆ.
ನಗರದ ರಸ್ತೆ ಬದಿಯಲ್ಲಿ ಶೇಖರಣೆಯಾಗಿವ ಸಿ ಆ್ಯಂಡ್ ಡಿ ತ್ಯಾಜ್ಯವನ್ನು ಸಂಗ್ರಹಿಸಿ ಸಂಸ್ಕರಿಸಲು ಯೋಜನೆ ರೂಪಿಸಲಾಗಿದೆ. ಅದಕ್ಕಾಗಿ ಪ್ರತ್ಯೇಕ ಗುತ್ತಿಗೆದಾರರನ್ನು ನೇಮಿಸಲಾಗುತ್ತಿದ್ದು, ಮುಂದಿನ 6 ತಿಂಗಳಲ್ಲಿ ರಸ್ತೆ ಬದಿ ಸಿ ಆ್ಯಂಡ್ ಡಿ ತ್ಯಾಜ್ಯ ಕಾಣಿಸದಂತೆ ಮಾಡಲಾಗುತ್ತಿದೆ. ಯೋಜನೆಗಾಗಿ 15ನೇ ಹಣಕಾಸು ಆಯೋಗದಿಂದ ಬಂದಿರುವ ಅನುದಾನದಲ್ಲಿ 18.50 ಕೋಟಿ ರೂ. ವ್ಯಯಿಸಲಾಗುತ್ತಿದೆ ಕೇಂದ್ರ ಸರ್ಕಾರ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ಮೇರೆಗೆ ನಗರದ ವಾಯು ಗುಣಮಟ್ಟ ಹೆಚ್ಚಿಸಲು ಈಗಾಗಲೇ ಹಲವು ಯೋಜ ನೆಗಳನ್ನು ರೂಪಿಸಲಾಗಿದೆ. ಅದರ ಜತೆಗೆ ಇದೀಗ ರಸ್ತೆ ಬದಿಯಲ್ಲಿ ಶೇಖರಣೆಯಾಗಿ ನಗರದಲ್ಲಿ ದೂಳಿನ ವಾತಾವರಣ ಸೃಷ್ಟಿಸುತ್ತಿರುವ ಸಿ ಆ್ಯಂಡ್ ಡಿ ತ್ಯಾಜ್ಯ ಸಂಗ್ರಹ ಮತ್ತು ಸಂಸ್ಕರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.
3 ಲಕ್ಷ ಕ್ಯೂಬಿಕ್ ಮೀ. ಡೆಬ್ರಿಸ್: ಬಿಬಿಎಂಪಿ ಅಂದಾಜಿನ ಪ್ರಕಾರ ನಗರದಲ್ಲಿ ನಿತ್ಯ 3 ಸಾವಿರ ಟನ್ ಡೆಬ್ರಿಸ್ ಉತ್ಪಾದನೆಯಾಗುತ್ತಿದೆ. ಕಟ್ಟಡ ನಿರ್ಮಾಣ ಹಾಗೂ ಒಡೆಯುವುದರಿಂದ ಈ ತ್ಯಾಜ್ಯ ಉತ್ಪತ್ತಿ ಯಾಗುತ್ತಿದ್ದು, ಅದರ ನಿರ್ವಹಣೆ ಸಮರ್ಪಕವಾಗಿ ಆಗಿಲ್ಲ. ಹೀಗಾಗಿ ನಗರದ ರಸ್ತೆ ಬದಿಯಲ್ಲಿ 3 ಲಕ್ಷ ಕ್ಯೂಬಿಕ್ ಮೀಟರ್‌ಗೂ ಹೆಚ್ಚಿನ ಸಿ ಆ್ಯಂಡ್ ಡಿ ತ್ಯಾಜ್ಯ ಶೇಖರ ಣೆಯಾಗಿದೆ. ಅವುಗಳನ್ನು ವಿಲೇವಾರಿ ಮಾಡಿದವರ ಬಗ್ಗೆ ಬಿಬಿಎಂಪಿಯಲ್ಲೂ ಸಮರ್ಪಕ ಮಾಹಿತಿಯಿಲ್ಲ. ಹೀಗಾಗಿ ಈ ತ್ಯಾಜ್ಯವು ರಸ್ತೆ ಬದಿಯಲ್ಲಿ ಹಾಗೆಯೇ ಉಳಿದಿದ್ದು, ದೂಳು ಹೆಚ್ಚಾಗಿ ಸೃಷ್ಟಿಯಾಗುತ್ತಿದೆ. ಅದರಿಂದ ವಾಯು ಮಾಲಿನ್ಯ ಉಂಟಾಗುವಂತಾಗಿದೆ.
ಇದೀಗ ಬಿಬಿಎಂಪಿ ರೂಪಿಸಿರುವ ಯೋಜನೆಯಂತೆ ನಗರದ ರಸ್ತೆ ಬದಿಯಲ್ಲಿ ಶೇಖರಣೆಯಾಗಿರುವ 3 ಲಕ್ಷ ಕ್ಯೂಬಿಕ್ ಮೀಟರ್‌ಗೂ ಹೆಚ್ಚಿನ ಸಿ ಆ್ಯಂಡ್ ಡಿ ತ್ಯಾಜ್ಯ ವನ್ನು ಸಂಗ್ರಹಿಸಿ ಸಂಸ್ಕರಣಾ ಘಟಕಗಳಿಗೆ ವಿಲೇವಾರಿ ಮಾಡಲಾಗುತ್ತದೆ. ಅದಕ್ಕಾಗಿ ಗುತ್ತಿಗೆದಾರರನ್ನೂ ನೇಮಿಸಲಾಗುತ್ತಿದ್ದು, ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಒಮ್ಮೆ ಗುತ್ತಿಗೆದಾರರು ನೇಮಕವಾಗಿ ಕಾರ್ಯಾದೇಶ ನೀಡಿದ ನಂತರದ 6 ತಿಂಗಳಲ್ಲಿ ರಸ್ತೆ ಬದಿ ಶೇಖರಣೆಯಾಗಿರುವ ಸಿ ಆ್ಯಂಡ್ ಡಿ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ಪೂರ್ಣಗೊಳಿಸಲಾಗುತ್ತದೆ. ಹೀಗೆ ಸಂಗ್ರಹವಾಗಿ ಡೆಬ್ರಿಸ್‌ಗಳನ್ನು ಚಿಕ್ಕಜಾಲ, ಜಿಗಣಿ ಮತ್ತು ಕಣ್ಣೂರಿನಲ್ಲಿನ ಸಿ ಆ್ಯಂಡ್ ಡಿ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ವಿಲೇವಾರಿ ಮಾಡಲಾಗುತ್ತದೆ.
ಟ್ರಕ್‌ನಿಂದ ತ್ಯಾಜ್ಯ ರಸ್ತೆಗೆ ಬಿದ್ದರೆ 20 ಸಾವಿರ ದಂಡ: ಸಿ ಆ್ಯಂಡ್ ಡಿ ತ್ಯಾಜ್ಯ ಸಂಗ್ರಹಿಸುವ ಗುತ್ತಿಗೆ ಪಡೆಯುವವರು ಅದನ್ನು ಸಮರ್ಪಕವಾಗಿ ಮಾಡಬೇಕಿದೆ. ತ್ಯಾಜ್ಯ ವಿಲೇವಾರಿಗಾಗಿ 31 ಟ್ರಕ್‌ಗಳು ಹಾಗೂ ಅದಕ್ಕೆ ತ್ಯಾಜ್ಯ ತುಂಬುವ 20 ಎಕ್ಸ್‌ಕ್ಯಾವೇಟರ್‌ಗಳನ್ನು ನಿಯೋಜಿಸಬೇಕಿದೆ. ಅಲ್ಲದೆ, ಪ್ರತಿ ಟ್ರಕ್ ಗಳಿಗೂ ಜಿಪಿಎಸ್ ಅಳವಡಿಸಬೇಕು ಹಾಗೂ ತ್ಯಾಜ್ಯ ವಿಲೇವಾರಿಗೂ ಮುನ್ನ ಅದರ ತೂಕವನ್ನು ಮಾಡಬೇಕಿದೆ. ಅಲ್ಲದೆ, ಡೆಬ್ರಿಸ್ ಸಾಗಿಸುವ ಟ್ರಕ್‌ಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿರಬೇಕು ಎಂದು ಬಿಬಿಎಂಪಿ ತಿಳಿಸಿದೆ. ಒಂದು ವೇಳೆ ಟ್ರಕ್‌ಗಳು ಮುಚ್ಚದೆ ತ್ಯಾಜ್ಯ ಸಾಗಿಸುವಾಗ ಅದು ರಸ್ತೆ ಮೇಲೆ ಬಿದ್ದರೆ ಅದಕ್ಕೆ ಗುತ್ತಿಗೆದಾರರಿಗೆ ದಂಡ ವಿಧಿಸಲಾಗುತ್ತದೆ. ಒಮ್ಮೆ ಮಾಡುವ ತಪ್ಪಿಗೆ 20 ಸಾವಿರ ರೂ. ದಂಡ ವಿಧಿಸುವುದಾಗಿಯೂ ಬಿಬಿಎಂಪಿ ಎಚ್ಚರಿಕೆ ನೀಡಿದೆ.
ತ್ಯಾಜ್ಯ ಸುರಿಯುವವರ ವಿರುದ್ಧ ಕ್ರಮವಿಲ್ಲ: ಸಿ ಆ್ಯಂಡ್ ಡಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯುವವರ ಪತ್ತೆ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಲು ಬಿಬಿಎಂಪಿ ನಿರಾಸಕ್ತಿ ತೋರಿದೆ. 2019ರಿಂದ 2022ರವರೆಗೆ ತ್ಯಾಜ್ಯ ವಿಲೇವಾರಿ ಮಾಡುವವರಿಂದ ಕೇವಲ 11.7 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ಬಿಬಿಎಂಪಿ ಕಠಿಣ ಕ್ರಮ ಕೈಗೊಳ್ಳದ ಕಾರಣ ರಸ್ತೆ ಬದಿ ಸಿ ಆ್ಯಂಡ್ ಡಿ ತ್ಯಾಜ್ಯ ವಿಲೇವಾರಿ ಪ್ರಮಾಣ ಹೆಚ್ಚುತ್ತಿದೆ.
-ಗಿರೀಶ್ ಗರಗ