ಹುಬ್ಬಳ್ಳಿ: ಅಮಿತ್ ಶಾ ಅವರು ಮಂಗಳವಾರ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಉತ್ತರ ಕರ್ನಾಟಕದ ಬಿಜೆಪಿ ಮುಖಂಡರೊಂದಿಗೆ ಪ್ರಸಕ್ತ ರಾಜಕೀಯ ವಿದ್ಯಮಾನ ಹಾಗೂ ಲಿಂಗಾಯತ ಸಮಾಜ ಕುರಿತಾಗಿ ಒಂದು ತಾಸಿಗೂ ಅಧಿಕ ಕಾಲ ಚರ್ಚೆ ನಡೆಸಿದ್ದಾರೆ.
ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಳ್ಳಲು ಸೋಮವಾರ ತಡರಾತ್ರಿ ನಗರಕ್ಕಾಗಮಿಸಿದ ಅಮಿತ್ ಶಾ, ಇಲ್ಲಿನ ಗೋಕುಲ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದರು.
ಮಂಗಳವಾರ ಬೆಳಗ್ಗೆ ಅವರು ವಾಸ್ತವ್ಯ ಮಾಡಿದ್ದ ಹೋಟೆಲ್‌ನ ಕೊಠಡಿಯಲ್ಲಿ ಬಿಜೆಪಿ ಮುಖಂಡರೊಂದಿಗೆ ಚರ್ಚಿಸಿದರು. ಚುನಾವಣೆಯ ಕಾರ್ಯತಂತ್ರಗಳ ಬಗ್ಗೆ ಮಾಹಿತಿ ಪಡೆದರು.
ಲಿಂಗಾಯತ ಸಮಾಜ ಬಗ್ಗೆ ಕಾಂಗ್ರೆಸ್‌ನ ಮುಖಂಡರು ತಳೆದಿರುವ ಧೋರಣೆ ಹಾಗೂ ಸ್ಥಳೀಯ ಲಿಂಗಾಯತ ಮುಖಂಡರು ಆ ಕುರಿತು ಹೊಂದಿರುವ ಅಭಿಪ್ರಾಯಗಳ ಬಗ್ಗೆಯೂ ಮಾಹಿತಿ ಕಲೆ ಹಾಕಿದರು.
ಪಕ್ಷದ ಪರ ಫಲಿತಾಂಶಗಳಿದ್ದರೂ ನಿರ್ಲಕ್ಷ ತೋರದೆ ಕೊನೆ ಗಳಿಗೆಯವರೆಗೂ ಎಚ್ಚರದಿಂದ ಹೋರಾಟ ಮಾಡಿ, ಪ್ರಚಾರ ನಡೆಸಿ ಎಂದು ಸೂಚಿಸಿದರು ಎನ್ನಲಾಗಿದೆ.
ಮಾಜಿ ಸಿಎಂ ಜಗದೀಶ ಶೆಟ್ಟರ, ಆರ್‌ಎಸ್‌ಎಸ್ ಮುಖಂಡ ಅರುಣಜೀ ಅವರು ಶಾ ಅವರೊಂದಿಗೆ ಪ್ರತ್ಯೇಕವಾಗಿ ಅರ್ಧ ತಾಸಿಗೂ ಹೆಚ್ಚು ಕಾಲ ಚರ್ಚೆ ನಡೆಸಿದರು ಎಂದು ತಿಳಿದು ಬಂದಿದೆ.