ವಿಧಾನಸಭೆ: ಗ್ರಾಮೀಣ ಭಾಗಗಳಲ್ಲಿ ಅಸ್ಪೃಶ್ಯತೆ ಆಚರಣೆಯಲ್ಲಿರುವ ಕುರಿತು ಸದನದಲ್ಲಿ ಕೆಲಕಾಲ ಬಿಸಿ ಚರ್ಚೆ ನಡೆಯಿತು. ಬಿಎಸ್‌ಪಿ ಶಾಸಕ ಮಹೇಶ್ ಸಂವಿಧಾನ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುವಾಗ, ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಶೇ.70 ಕಡೆ ಅಸ್ಪೃಶ್ಯತೆ ಇದೆ ಎಂದರು. ಕಾಂಗ್ರೆಸ್ ಕಂಪ್ಲಿ ಗಣೇಶ್, ಈಗಲೂ ನಮ್ಮ ಕಡೆ ಹೋಟೆಲ್‌ಗಳಲ್ಲಿ ದಲಿತರಿಗಾಗಿ ಪ್ರತ್ಯೇಕ ಲೋಟ ಇಟ್ಟಿರುತ್ತಾರೆಂದರು.
ಮತ್ತೂಬ್ಬ ಶಾಸಕ ಪ್ರಸಾದ್ ಅಬ್ಬಯ್ಯ ಸಹ ಧ್ವನಿಗೂಡಿಸಿದರು. ಇದಕ್ಕೆ ಜಿ.ಟಿ.ದೇವೇಗೌಡ, ಶಿವ ಲಿಂಗೇ ಗೌಡ ಸೇರಿ ಕೆಲವರು ವಿರೋಧ ವ್ಯಕ್ತಪಡಿಸಿ, ಇತ್ತೀಚೆಗೆ ಕಡಿಮೆ ಯಾಗುತ್ತಿದೆ ಎಂದರು. ಜೆಡಿಎಸ್‌ನ ಅನ್ನದಾನಿ, ನಾವು ಇಲ್ಲಿ ಕುಳಿತು ಮಾತನಾಡುತ್ತೇವೆ. ಹಳ್ಳಿಗಳಿಗೆ ಹೋದರೆ ಪರಿಸ್ಥಿತಿ ಗೊತ್ತಾಗುತ್ತದೆ. ನನ್ನ ಮಗ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾನೆ. ಅವನ ಗೆಳತಿ ಒಮ್ಮೆ ಯಾವ ಜಾತಿ ಎಂದು ಕೇಳಿದಾಗ, ಎಸ್‌ಸಿ ಎಂದು ಹೇಳಿದ.
ಆ ನಂತರ ತುಂಬಾ ಆತ್ಮೀಯವಾಗಿದ್ದ ಆ ಗೆಳತಿ ಎದುರಿಗೆ ಸಿಕ್ಕರೂ ಮಾತನಾಡಲ್ಲ. ನಮ್ಮ ಪರಿಸ್ಥಿತಿ ಹೀಗಿರುವಾಗ ಹಳ್ಳಿಗಳಲ್ಲಿ ಕಡು ಬಡವ ದಲಿತರ ಸ್ಥಿತಿ ಹೇಗಿರುತ್ತದೆ. ಈಗಲೂ ನಮ್ಮ ಗ್ರಾಮದಲ್ಲಿ ನಮ್ಮ ಅಣ್ಣ ಉಳುಮೆ ಮಾಡುತ್ತಾನೆ, ಆತನೂ ಅಸ್ಪೃಶ್ಯತೆ ನೋವು ಅನುಭವಿಸುತ್ತಿದ್ದಾನೆಂದರು.
ಮಾತು ಮುಂದುವರಿಸಿದ ಮಹೇಶ್, ಇಂದು ವಿಧಾನಸಭೆ, ಸಂಸತ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಶಾಸಕ, ಸಂಸದರು ಕುಳಿತಿದ್ದಾರೆ ಎಂದರೆ ಅದು ಬಾಬಾ ಸಾಹೇಬ್ ಅಂಬೇಡ್ಕರ್‌ರ ಪರಿಶ್ರಮದ ಫಲ. ನಮಗೆ ರಾಜಕೀಯ ನ್ಯಾಯ ಸಿಕ್ಕಿರಬಹುದು, ಸಮಾನತೆ ನ್ಯಾಯ ಇನ್ನೂ ಸಿಕ್ಕಿಲ್ಲ ಎಂದರು. ಎಲ್ಲ ಜಾತಿಯ ಜನರಿಗೆ ಸಮಾನ ಹಕ್ಕು ಸಿಗಬೇಕು ಎಂದು ಹೋರಾಟ ಮಾಡಿದ ಅಂಬೇಡ್ಕರ್‌ರನ್ನು ದಲಿತರ ನಾಯಕ ಎಂದು ಬ್ರ್ಯಾಂಡ್ ಮಾಡಿರುವುದು ನೋವಿನ ವಿಚಾರ.
ಅಂಬೇಡ್ಕರ್ ಬದುಕಿದ್ದಾಲೂ ಅವರನ್ನು ಬ್ರಿಟೀಷರ ಏಜೆಂಟ್ ಎಂದೂ ಹೀಯಾಳಿಸಿದ್ದರು. ಆದರೂ, ಅಂಬೇಡ್ಕರ್ ತಾವು ನಂಬಿದ ತತ್ವ ಸಿದ್ಧಾಂತ ಬಲಿಕೊಡದೆ ಜಗತ್ತು ಮೆಚ್ಚುವ ಸಂವಿಧಾನ ಕೊಟ್ಟರು ಎಂದು ತಿಳಿಸಿದರು. ಮಹೇಶ್ ಅವರು, ಸಂವಿಧಾನ ಕುರಿತು ಚರ್ಚೆಗೆ ಅವಕಾಶ ನೀಡಿದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಭೀಮ ಕೃತಜ್ಞತೆ ಎಂದು ಹೇಳಿ, ಮಾತಿನ ನಂತರ ಎಲ್ಲರಿಗೂ ಭೀಮ ವಂದನೆ ಎಂದು ಹೇಳಿದರು. ಕಾಂಗ್ರೆಸ್‌ನ ಡಾ.ರಂಗನಾಥ್, ಜೆಡಿಎಸ್‌ನ ಡಾ.ಶ್ರೀನಿವಾಸಮೂರ್ತಿ ಪೂರ್ವಾಶ್ರಮದ ವೈದ್ಯ ವೃತ್ತಿಯಲ್ಲಿನ ತಮ್ಮ ಅನುಭವ ಹೇಳಿಕೊಂಡರು.
ಸಿದ್ರಾಮಣ್ಣಾ ಎದ್‌ನಿಂತ್ರೆ ನಾಕ್ ಗಂಟೆ ಮಾತಾಡ್ತಾರೆ!: ಶುಕ್ರವಾರ ಸಂವಿಧಾನ ಕುರಿತು ಚರ್ಚೆ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮಾತನಾಡಲು ಸ್ಪೀಕರ್ ಕಾಗೇರಿ ಅವರು ಅವಕಾಶ ಕೊಟ್ಟಾಗ ಜೆಡಿಎಸ್‌ನ ಶಿವಲಿಂಗೇಗೌಡ, “ಸಿದ್ರಾಮಣ್ಣೋರು ಸುಮ್ನೆ ಎದ್ ನಿಂತ್ರು ನಾಕ್ ಗಂಟೆ ಮಾತಾಡ್ತಾರೆ. ಈಗ್ಲೆà ಹನ್ನೆಲ್ಡ್ ಗಂಟೆ, ಇನ್ ನಮಗ್ಯಾವಾಗಾ ನೀವ್ ಕೊಡೋದು,
ನಾವೂ 2 ದಿನದಿಂದ ಸ್ಟಡಿ ಮಾಡಿ ಮಾತಾಡ್ಬೇಕು ಅಂತಾ ಕಾಯ್ತಿದ್ದೀವಿ, ಸಿದ್ರಾಮಣ್ಣೋರು ಎದ್‌ನಿಂತ್ರೆ ಇವತ್ ಮಾತಾಡªಂಗೇ ಬುಡಿ’ ಎಂದರು. ಆಗ, ರಮೇಶ್‌ಕುಮಾರ್, ಸಿದ್ದರಾಮಯ್ಯ ಅವರು ಬೇಕಾದರೆ ಸೋಮವಾರ ಮಾತನಾಡುತ್ತಾರೆ. ಚರ್ಚೆ ಇನ್ನೊಂದು ದಿನ ವಿಸ್ತರಣೆಯಾಗಲಿ ಎಂದರು. ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಒಪ್ಪಿಗೆ ಸೂಚಿಸಿದರು. ನಂತರ ಕಾಗೇರಿ, ಸೋಮವಾರವೂ ಚರ್ಚೆಗೆ ಅವಕಾಶವಿದೆ ಎಂದು ತಿಳಿಸಿದರು.