Advertisement

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

01:21 AM Apr 27, 2024 | Team Udayavani |

ಮಂಗಳೂರು/ಉಡುಪಿ:ಹಲವು ದಿನಗಳ ಪ್ರಚಾರ, ಆರೋಪ – ಪ್ರತ್ಯಾರೋಪದ ಬಳಿಕ ದಕ್ಷಿಣ ಕನ್ನಡ ಹಾಗೂ ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಗಳಲ್ಲಿ ಶುಕ್ರವಾರ ಮತದಾನ ಶಾಂತಿಯುತವಾಗಿ ನಡೆದಿದ್ದು, ಕಣದಲ್ಲಿರುವ ಒಂಭತ್ತು ಮಂದಿ ಅಭ್ಯರ್ಥಿಗಳ ಭವಿಷ್ಯ ಇದೀಗ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಸ್ಟ್ರಾಂಗ್‌ ರೂಮ್‌ನಲ್ಲಿ ಇರಿಸಲಾಗಿದೆ.

Advertisement

ಮತದಾನ ಮುಗಿದ ಬಳಿಕ ಮತಗಟ್ಟೆಗಳಿಂದ ಮತಯಂತ್ರಗಳನ್ನು ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಡಿ- ಮಸ್ಟರಿಂಗ್‌ ಕೇಂದ್ರಗಳಿಗೆ ರಾತ್ರಿ ತರಲಾಯಿತು. ಡಿ-ಮಸ್ಟರಿಂಗ್‌ ಪ್ರಕ್ರಿಯೆ ನಡೆದ ಬಳಿಕ ಮಂಗಳೂರು ಸುರತ್ಕಲ್‌ನ ಎನ್‌ಐಟಿಕೆಯಲ್ಲಿರುವ ಸ್ಟ್ರಾಂಗ್‌ ರೂಂಗೆ ಮತಯಂತ್ರಗಳನ್ನು ಸ್ಥಳಾಂತರಿಸಲಾಗಿದೆ.

ವಿವಿಪ್ಯಾಟ್‌, ಇವಿಎಂ ಮೆಷಿನ್‌ ಅನ್ನು ಬಿಗುಭದ್ರತೆಯಲ್ಲಿ ಎನ್‌ಐಟಿಕೆಯಲ್ಲಿ ಇರಿಸಲಾಗಿದ್ದು, ಶಸ್ತ್ರಸಜ್ಜಿತ ಅರೆಮಿಲಿಟರಿ ಪಡೆ ಮತ್ತು ಪೊಲೀಸರಿಂದ ವಿಶೇಷ ಭದ್ರತೆ ಒದಗಿಸಲಾಗಿದೆ. ಮತಎಣಿಕೆಗೆ ಸುಮಾರು ಇನ್ನು 40 ದಿನಗಳು ಇರುವುದರಿಂದ ಸ್ಟ್ರಾಂಗ್‌ ರೂಮ್‌ನಲ್ಲಿ ಇರಿಸಲಾದ ಮತಯಂತ್ರಗಳನ್ನು ಪಾಳಿಯಲ್ಲಿ ಭದ್ರತಾ ಸಿಬಂದಿ ಕಾಯಲಿದ್ದಾರೆ.

ಸುಳ್ಯ, ಬೆಳ್ತಂಗಡಿ ಮೊದಲಾದ ಕ್ಷೇತ್ರಗಳಿಂದ ಮತಯಂತ್ರಗಳು ಸ್ಟ್ರಾಂಗ್‌ ಸೇರುವಾಗ ತಡರಾತ್ರಿಯಾಗಿತ್ತು. ಮತಯಂತ್ರಗಳ ಡಿ-ಮಸ್ಟರಿಂಗ್‌ ಪ್ರಕ್ರಿಯೆ ಮುಗಿಯುತ್ತಲೇ ಮತಗಟ್ಟೆಗೆ ನಿಯೋಜಿತರಾಗಿದ್ದ ಸಿಬಂದಿ ನಿಟ್ಟುಸಿರು ಬಿಟ್ಟರು. ಮಹಿಳಾ ಸಿಬಂದಿಯನ್ನು ಜಿಲ್ಲಾಡಳಿತ ಆಯಾ ಕ್ಷೇತ್ರದಲ್ಲೇ ಚುನಾವಣ ಕರ್ತವ್ಯಕ್ಕೆ ನಿಯೋಜಿಸಿತ್ತಾದರೂ, ಪ್ರಕ್ರಿಯೆ ತಡವಾದ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರು ಡಿಮಸ್ಟರಿಂಗ್‌ ಕೇಂದ್ರದ ಬಳಿ ಕಾಯುತ್ತಿದ್ದ ದೃಶ್ಯಗಳು ಶುಕ್ರವಾರ ರಾತ್ರಿ ವೇಳೆ ಕಂಡು ಬಂದಿತು.

ಮತ ಎಣಿಕೆಯತ್ತ ಚಿತ್ತ
ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಹಾಗೂ ಮತದಾರನ ಚಿತ್ತ ಮತ ಎಣಿಕೆಯತ್ತ ಹರಿದಿದೆ. ಈಗಾಗಲೇ ಆಯಾ ಪಕ್ಷಗಳ ಮುಖಂಡರು, ಕಾರ್ಯಕರ್ತರು ಹಾಗೂ ರಾಜಕೀಯ ಉತ್ಸಾಹಿಗಳು ಗೆಲ್ಲುವ ಕುದುರೆ ಯಾವುದು ಎಂಬ ಚರ್ಚೆ ಆರಂಭಿಸಿದ್ದಾರೆ.

Advertisement

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ., ಮಂಗಳೂರು ನಗರ ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌, ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ರಿಷ್ಯಂತ್‌ ಸಿ.ಬಿ. ಹಾಗೂ ಚುನಾವಣ ಪೊಲೀಸ್‌ ವೀಕ್ಷಕರಾದ ಬಿನಿತಾ ಠಾಕೂರ್‌ ಅವರು ಎನ್‌ಐಟಿಕೆ ಕೇಂದ್ರಕ್ಕೆ ಈಗಾಗಲೇ ಭೇಟಿ ನೀಡಿ, ಸಿದ್ಧತೆ ಪರಿಶೀಲಿಸಿದರು.

ಸುರತ್ಕಲ್‌ನ ಎನ್‌ಐಟಿಕೆ ಆವರಣದಲ್ಲಿ ಮತ್ತು ಉಡುಪಿಯ ಸೇಂಟ್‌ಸಿಸಿಲಿ ಪ್ರೌಢ ಶಾಲೆಯಲ್ಲಿ ಜೂ. 4ರಂದು ಮತ ಎಣಿಕೆ ನಡೆಯಲಿದೆ. ಒಟ್ಟಿನಲ್ಲಿ ಫ‌ಲಿತಾಂಶಕ್ಕಾಗಿ ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲ ಕಾಯುವ ಅನಿವಾರ್ಯ ಇದೆ.

 

 

Advertisement

Udayavani is now on Telegram. Click here to join our channel and stay updated with the latest news.

Next